ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ: ಗ್ರಾಮ ಅರಣ್ಯ ಸಮಿತಿಯ ಶಿಫಾರಸ್ಸಿಗೆ ಸಿಗದ ಮನ್ನಣೆ

12 ಸಾವಿರಕ್ಕೂ ಹೆಚ್ಚು ಅರ್ಜಿ ಬಾಕಿ:ಬಗೆಹರಿಯದ ಅರಣ್ಯ ಅತಿಕ್ರಮಣಕಾರರ ಸಮಸ್ಯೆ
Last Updated 15 ಜನವರಿ 2023, 0:15 IST
ಅಕ್ಷರ ಗಾತ್ರ

ಹೊನ್ನಾವರ: ಕಳೆದ ಹಲವಾರು ವರ್ಷಗಳಿಂದ ತಾಲ್ಲೂಕಿನೆಲ್ಲೆಡೆ ಕಾಡುತ್ತಿರುವ ಅರಣ್ಯ ಅತಿಕ್ರಮಣ ಸಮಸ್ಯೆ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಮಂಜೂರಿಗೆ ಸಲ್ಲಿಕೆಯಾಗಿದ್ದ ತಾಲ್ಲೂಕಿನ 12 ಸಾವಿರ ಅರ್ಜಿಗಳಲ್ಲಿ ಕೇವಲ 31 ಅರ್ಜಿಗಳಿಗೆ ಮಾನ್ಯತೆ ದೊರೆತಿದೆ.

ಗ್ರಾಮಮಟ್ಟದ ಅರಣ್ಯ ಸಮಿತಿ ಶಿಫಾರಸು ಮಾಡಿದ ಹೆಚ್ಚಿನ ಪ್ರಕರಣಗಳು ಉಪ ವಿಭಾಗಮಟ್ಟದಲ್ಲಿ ತಿರಸ್ಕೃತವಾಗಿದೆ. ಗ್ರಾಮಮಟ್ಟದ ಅರಣ್ಯ ಸಮಿತಿಗಳ ಕಾರ್ಯ ವೈಖರಿ ಬಗ್ಗೆ ಅತಿಕ್ರಮಣದಾರರಲ್ಲಿ ಅಸಮಾಧಾನ ಇರುವುದು ಒಂದೆಡೆಯಾದರೆ, ಸಮಿತಿಗಳ ಶಿಫಾರಸ್ಸಿಗೆ ಬೆಲೆ ಸಿಗುತ್ತಿಲ್ಲವೆ ಎಂಬ ಶಂಕೆ ವ್ಯಕ್ತವಾಗಿದೆ.

‘ಗ್ರಾಮ ಅರಣ್ಯ ಸಮಿತಿ ಶಿಫಾರಸ್ಸು ಮಾಡಿದ ಜಾಗದ ಮಂಜೂರಿಗೆ ದಾಖಲೆಗಳನ್ನು ಕೇಳುತ್ತಿರುವುದು ಸಮಂಜಸವಲ್ಲ. ಮೂರು ತಲೆಮಾರುಗಳ ಕಾಲ ವಾಸ್ತವ್ಯ ಅಥವಾ ಸಾಗುವಳಿ ಮಾಡಿದ ಸ್ಥಳೀಯ ಸಾಕ್ಷ್ಯ ಆಧರಿಸಿ ಮಂಜೂರಾತಿ ನೀಡಬೇಕು’ ಎಂಬುದಾಗಿ ಅರಣ್ಯ ಹಕ್ಕು ಹೋರಾಟ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಅಭಿಪ್ರಾಯ ಪಡುತ್ತಾರೆ.

‘ಪರಿಶಿಷ್ಟ ಪಂಗಡದ 6 ಅರ್ಜಿಗಳ ಪೈಕಿ 5 ಹಾಗೂ ಇತರೆ ಪಾರಂಪರಿಕ ಅರಣ್ಯ ವಾಸಿಗಳ ವಿಭಾಗದಲ್ಲಿ 12,092 ಅರ್ಜಿಗಳ ಪೈಕಿ 9,239 ಅರ್ಜಿ ವಿಭಾಗಮಟ್ಟದಲ್ಲಿ ತಿರಸ್ಕೃತಗೊಂಡಿವೆ. 2772 ಅರ್ಜಿಗಳು ಉಪ ವಿಭಾಗಮಟ್ಟದಲ್ಲಿ ಪರಿಶೀಲನೆಗೆ ಬಾಕಿ ಇದೆ. ಪುನರ್ ಪರಿಶೀಲನೆಗಾಗಿ ಮನವಿ ಸಲ್ಲಿಸಲ್ಪಟ್ಟ 9039 ಅರ್ಜಿಗಳೂ ಉಳಿದುಕೊಂಡಿವೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸುಮಂಗಲಾ ಭಟ್ಟ ಮಾಹಿತಿ ನೀಡಿದರು.

‘ಪಾರಂಪರಿಕ ಅರಣ್ಯವಾಸಿಗಳು ಜಾಗದ ಹಕ್ಕು ಪಡೆಯಲು ಡಿಸಂಬರ್ 13, 2005ಕ್ಕೆ ಮೊದಲು ಮೂರು ತಲೆಮಾರು ವಾಸ್ತವ್ಯ ಹಾಗೂ ಸಾಗುವಳಿ ಮಾಡಿದ ದಾಖಲೆ ಬೇಕು. ಪರಿಶಿಷ್ಟ ಪಂಗಡದ ಅತಿಕ್ರಮಣಕಾರರು ಒಂದು ತಲೆಮಾರಿನ ದಾಖಲೆ ನೀಡಿದರೆ ಸಾಕು. ಜತೆಗೆ ಇಂಥ ಕುಟುಂಬ ಭೂರಹಿತರಾಗಬೇಕು ಎಂಬ ನಿಯಮ ಕೂಡ ಇದೆ. ಮೂರು ತಲೆ ಮಾರಿನ ದಾಖಲೆ ನೀಡದ್ದರಿಂದ ಹೆಚ್ಚಿನ ಅರ್ಜಿಗಳು ತಿರಸ್ಕೃತಗೊಂಡಿವೆ’ ಎಂದು ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಹೇಳಿದರು.

--------------

ಗ್ರಾಮ ಅರಣ್ಯ ಸಮಿತಿಯಿಂದ ಅರ್ಜಿಗಳ ಪರಿಶೀಲನೆಯಲ್ಲಿ ಲೋಪವಾಗಿದೆ.
ಮಮತಾದೇವಿ ಜಿ.ಎಸ್.

ಭಟ್ಕಳ ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT