ಕಾರವಾರ: ಹಿಂದೂ ದೇವರುಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಜತೆಗೆ ವಾಲ್ಮೀಕಿ ಸಮಾಜವನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ಶಿರವಾಡದ ಬಂಗಾರಪ್ಪ ನಗರದ ಕೆಲವು ನಿವಾಸಿಗಳು ಗುರುವಾರ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಲಿಷಾ ಎಲಕಪಾಟಿ ವಿರುದ್ಧ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ ಅವರಿಗೆ ದೂರು ನೀಡಿದ್ದಾರೆ.
‘ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮಾತುಗಳನ್ನಾಡಿರುವ ಜತೆಗೆ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯದ ಜನರ ಕುರಿತು ಅಪಹಾಸ್ಯವಾಗಿ ಮಾತನಾಡಿದ ಎಲಿಷಾ ಅವರನ್ನು ಗಡಿಪಾರು ಮಾಡಬೇಕು. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
‘ದಲಿತ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಆ.18 ರಂದು ಗೋಕರ್ಣಕ್ಕೆ ತೆರಳಿ ಮರಳುವ ವೇಳೆ ಕಾರಿನಲ್ಲಿ ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದಗಳನ್ನು ಪ್ರಯೋಗಿಸಿ ಟೀಕಿಸಿದ್ದಾರೆ. ವಾಲ್ಮೀಕಿ ಮಹರ್ಷಿ ಕುರಿತು ಅವಹೇಳನಕಾರಿಯಾಗಿ ಟೀಕಿಸಿದ್ದಾರೆ. ಅವರು ಆಡಿರುವ ಮಾತುಗಳ ದೃಶ್ಯ ಸೆರೆಹಿಡಿದಿದ್ದು ಅದರ ಸಮೇತ ದೂರು ಕೊಡಲಾಗಿದೆ’ ಎಂದು ಶಿರವಾಡ ಗ್ರಾಮಸ್ಥ ಮಾರುತಿ ನಾಯ್ಕ, ಗಂಗಾ ನಾಯ್ಕ, ಶಂಕರ ವಡ್ಡರ, ಲಕ್ಷ್ಮಣ ವಡ್ಡರ, ವೀರಪ್ಪ ವಾಲ್ಮೀಕಿ, ಇತರರು ದೂರಿದರು.
ಎಲಿಷಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಇಲ್ಲಿನ ಸುಭಾಷ ವೃತ್ತದಲ್ಲಿ ಸಂಜೆಯ ವೇಳೆ ಟೈರ್ ಸುಟ್ಟು ಪ್ರತಿಭಟನೆ ನಡೆಸಲು ಶಿರವಾಡದ ಕೆಲವರು ಯತ್ನಿಸಿದರು. ಆದರೆ ಪೊಲೀಸರು ಅವರನ್ನು ತಡೆದರು.
‘ಜನರ ಭಾವನೆ ಘಾಸಿಗೊಳಿಸುವ ಉದ್ದೇಶಕ್ಕೆ ಅಪಹಾಸ್ಯ ಮಾಡಿರಲಿಲ್ಲ. ಉದ್ದೇಶಪೂರ್ವಕವಾಗಿ ನನ್ನನ್ನು ಸಿಲುಕಿಸುವ ಯತ್ನ ನಡೆದಿದೆ. ಧಾರ್ಮಿಕ ಭಾವನೆಗಳನ್ನು ಗೌರವಿಸುವ ಕೆಲಸ ಮಾಡುತ್ತೇನೆ’ ಎಂದು ಎಲಿಷಾ ಎಲಕಪಾಟಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯಿಸಿದ್ದಾರೆ.
ಪ್ರಕರಣ ದಾಖಲು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದಡಿ ಎಲಿಷಾ ಎಲಕಪಾಟಿ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಗಾರಪ್ಪ ನಗರದ ನಿವಾಸಿಗಳ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.