ಕಾರವಾರ(ಉತ್ತರ ಕನ್ನಡ): ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಾಪನೆಗೆ ಒತ್ತಾಯಿಸಿ ಸಮಾನ ಮನಸ್ಕ ಹೋರಾಟಗಾರರು ಶಿರಸಿಯಿಂದ ಕಾರವಾರಕ್ಕೆ 140 ಕಿ.ಮೀ. ಪಾದಯಾತ್ರೆ ನಡೆಸಿದರು. ಹೆದ್ದಾರಿ ಅಂಚಿನಲ್ಲಿರುವ 120ಕ್ಕೂ ಹೆಚ್ಚು ಗ್ರಾಮಗಳ ಜನರನ್ನು ಭೇಟಿಯಾಗಿ, ಅವರ ಬೆಂಬಲ ಪಡೆದರು.
ಹೋರಾಟದ ನೇತೃತ್ವದ ವಹಿಸಿದ ಶಿರಸಿಯ ಅನಂತಮೂರ್ತಿ ಹೆಗಡೆ ಮಾತನಾಡಿ, ‘ನವೆಂಬರ್ 2ರಂದು ಶಿರಸಿಯಿಂದ ಪಾದಯಾತ್ರೆ ಆರಂಭಿಸಿ ಗುರುವಾರ (ನವೆಂಬರ್ 9) ಕಾರವಾರ ತಲುಪಿದ್ದೇವೆ. ಒಟ್ಟು ಎಂಟು ದಿನಗಳಲ್ಲಿ ರಾತ್ರಿ ವೇಳೆ ಸಮುದಾಯ ಭವನ, ದೇವಸ್ಥಾನದ ಸಭಾಂಗಣದಲ್ಲಿ ವಾಸ್ತವ್ಯ ಮಾಡಿದೆವು. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯ ಕುರಿತು ಜನರಿಗೆ ಮನವರಿಕೆ ಮಾಡಿದೆವು’ ಎಂದರು.
‘ಜ್ವರ, ಕೆಮ್ಮಿಗೆ ಚಿಕಿತ್ಸೆ ಸಿಗುವುದು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಗಂಭೀರ ಅಥವಾ ಮಾರಣಾಂತಿಕ ಕಾಯಿಲೆಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ತೀವ್ರ ಸ್ವರೂಪದಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ 100 ಕೀ.ಮೀ ದೂರದ ಹುಬ್ಬಳ್ಳಿ ಅಥವಾ 250 ಕಿ.ಮೀ ದೂರದ ಮಂಗಳೂರಿನ ಆಸ್ಪತ್ರೆಗೆ ಸಾಗಿಸಬೇಕಿದೆ. ಆಸ್ಪತ್ರೆ ತಲುಪುವಷ್ಟರಲ್ಲಿ ಪ್ರಾಣ ಹೋಗಿರುತ್ತದೆ. ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಾಗಿ ಹಲವು ವರ್ಷಗಳಿಂದ ಬೇಡಿಕೆಯಿಟ್ಟರೂ ಸ್ಪಂದನೆ ಸಿಕ್ಕಿಲ್ಲ’ ಎಂದರು.
‘ಸುಸಜ್ಜಿತ ಆಸ್ಪತ್ರೆಗಾಗಿ ವಿವಿಧ ಸ್ವರೂಪಗಳಲ್ಲಿ ಹೋರಾಟ ನಡೆದರೂ ಸರ್ಕಾರದಿಂದ ಸ್ಪಂದನೆ ಸಿಗದಿರುವುದು ಬೇಸರದ ಸಂಗತಿ. ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರ ಸುಧಾರಿಸಲು ಇಚ್ಛಾಶಕ್ತಿಯ ಕೊರತೆಯಿದೆ’ ಎಂದು ಸಾಮಾಜಿಕ ಕಾರ್ಯಕರ್ತ ವೆಂಕಟೇಶ ನಾಯ್ಕ ಹೇಳಿದರು. ಪಾದಯಾತ್ರೆಯ ಬಳಿಕ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆಗೆ ಒತ್ತಾಯಿಸಲು ಪ್ರತಿ ಗ್ರಾಮ ಮಟ್ಟದಲ್ಲಿ ಹೋರಾಟ ಸಮಿತಿ ರಚಿಸಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದುಅನಂತಮೂರ್ತಿ ಹೆಗಡೆ, ಅಧ್ಯಕ್ಷ ಅನಂತಮೂರ್ತಿ ಹೆಗಡೆ ಚಾರಿಟೆಬಲ್ ಟ್ರಸ್ಟ್
15 ಎಕರೆ ಜಾಗ ಮೀಸಲು: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಜಿಲ್ಲೆಯ ಕುಮಟಾದಲ್ಲಿ ಜಾಗ ಗುರುತಿಸಿ ಹಿಂದಿನ ಬಿಜೆಪಿ ಸರ್ಕಾರವು 2023ರ ಬಜೆಟ್‍ನಲ್ಲಿ ಘೋಷಿಸಿತ್ತು. ‘15 ಎಕರೆ ಜಾಗ ಮೀಸಲಿಡಲಾಗಿದೆ. ಈ ಪೈಕಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಜಾಗ ಹಸ್ತಾಂತರ ಪ್ರಕ್ರಿಯೆ ಮುಗಿದಿದೆ. ಕೃಷಿ ಇಲಾಖೆಗೆ ಸೇರಿದ ಜಾಗ ಸ್ವಾಧೀನಕ್ಕೆ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪ್ರಕ್ರಿಯೆ ಮುಗಿದ ಬಳಿಕ ಆಸ್ಪತ್ರೆ ಸ್ಥಾಪನೆಗೆ ಅಗತ್ಯ ಕ್ರಮಕ್ಕಾಗಿ ಕ್ರಿಮ್ಸ್ ಅಧೀನಕ್ಕೆ ಜಾಗ ನೀಡಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.