ಶಿರಸಿ: ಲೋಕೋಪಯೋಗಿ ಇಲಾಖೆ ವಿಶ್ರಾಂತಿ ಮಂದಿರಗಳು ಹಾಗೂ ಕಚೇರಿಗಳ ನಿರ್ವಹಣೆ ಅನುದಾನವಿಲ್ಲದ ಪರಿಣಾಮ ಕಟ್ಟಡಗಳು ನಿರ್ವಹಣೆ ಕೊರತೆ ಎದುರಿಸುತ್ತಿದ್ದರೆ, ಈ ಅನುದಾನವನ್ನೇ ನಂಬಿದ್ದ ಇಲಾಖೆ ಹೊರಗುತ್ತಿಗೆ ಸಿಬ್ಬಂದಿ ಸಂಬಳವಿಲ್ಲದೆ ಕಂಗಾಲಾಗಿದ್ದಾರೆ.
ಇಲಾಖೆ ಉತ್ತರ ವಲಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಅಂದಾಜು 60ಕ್ಕೂ ಹೆಚ್ಚು ಐಬಿಗಳು ಕಾರ್ಯನಿರ್ವಹಿಸುತ್ತಿವೆ. ಇದರ ಜತೆ ಇಷ್ಟೇ ಪ್ರಮಾಣದಲ್ಲಿ ಇಲಾಖೆಯ ಕಚೇರಿಗಳಿವೆ. ಇವುಗಳ ದುರಸ್ತಿ, ಸ್ವಚ್ಛತೆ, ಇಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಸಿಬ್ಬಂದಿ ಸಂಬಳ, ಪೀಠೋಪಕರಣಗಳ ರಿಪೇರಿ ಸೇರಿ ಇತರ ನಿರ್ವಹಣೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಪ್ರತಿ ವರ್ಷ ಪ್ರತಿ ತಾಲ್ಲೂಕು ವ್ಯಾಪ್ತಿಗೆ ₹20 ಲಕ್ಷದಿಂದ ₹25 ಲಕ್ಷ ಬಿಡುಗಡೆ ಆಗುತ್ತಿತ್ತು. ಉತ್ತರ ವಲಯದ ಜಿಲ್ಲೆಗಳಿಗೆ ವಾರ್ಷಿಕ ಅಂದಾಜು ₹12 ಕೋಟಿಗೂ ಹೆಚ್ಚಿನ ಅನುದಾನ ಬರುತ್ತಿತ್ತು. ಆದರೆ ಈ ವರ್ಷ ಇನ್ನೂ ಅನುದಾನವೇ ಬಿಡುಗಡೆಯಾಗಿಲ್ಲ.
'ಕಳೆದ ಸಾಲಿನ ಅನುದಾನ ಬಿಡುಗಡೆಯಾಗಿದ್ದರೂ ಇನ್ನೂ ಆಯಾ ಕಚೇರಿ ಖಾತೆಗೆ ಹಾಕಿಲ್ಲ. ಇದರಿಂದ ಕಟ್ಟಡಗಳ ನಿರ್ವಹಣೆ ಜತೆ ಹೊರಗುತ್ತಿಗೆ ಸಿಬ್ಬಂದಿ ಸಂಬಳ ನೀಡಲು ಸ್ಥಳೀಯ ಎಂಜಿನಿಯರ್‌ಗಳಿಗೆ ಸಾಧ್ಯವಾಗುತ್ತಿಲ್ಲ' ಎಂದು ಇಲಾಖೆ ಹಿರಿಯ ಎಂಜಿನಿಯರ್ ಒಬ್ಬರು ಹೇಳಿದರು.
'ಐಬಿಯಲ್ಲಿ ಮೇಟಿ, ಕಾವಲುಗಾರ, ಸ್ವಚ್ಛತಾ ಕರ್ಮಚಾರಿಗಳು, ಇಲಾಖೆ ಕಚೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರ್, ಸಹಾಯಕ ಸೇರಿ ಪ್ರತಿ ತಾಲ್ಲೂಕಿನಲ್ಲಿ ಸರಾಸರಿ 10 ಹೊರಗುತ್ತಿಗೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದಾಜು ಮಾಸಿಕ ₹1.5 ಲಕ್ಷಕ್ಕೂ ಹೆಚ್ಚು ಮೊತ್ತ ಇವರಿಗೆ ಸಂಬಳವಾಗಿ ನೀಡಲಾಗುತ್ತಿತ್ತು. ಉಳಿದ ಹಣದಲ್ಲಿ ಐಬಿ ಹಾಗೂ ಕಚೇರಿ ಸ್ವಚ್ಛತೆ, ದುರಸ್ತಿ ಸೇರಿ ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ ಇದುವರೆಗೂ ಇಲಾಖೆ ಕಾರ್ಯಕ್ರಮದ ಪಟ್ಟಿಯಲ್ಲಿ 2059-ಕಟ್ಟಡ ನಿರ್ವಹಣೆ ಯೋಜನೆಯಡಿ ಅನುದಾನ ಬಿಡುಗಡೆ ಮಾಡಿಲ್ಲ' ಎಂದು ಅವರು ಮಾಹಿತಿ ನೀಡಿದರು.
ಉತ್ತರ ವಲಯ ವ್ಯಾಪ್ತಿಯ ಐಬಿಗಳು, ಇಲಾಖೆ ಕಚೇರಿ ನಿರ್ವಹಣೆಗೆ ಕಳೆದ ಸಾಲಿನ ಅನುದಾನ ಬಿಡುಗಡೆ ಮಾಡಲಾಗಿದೆ. ಮಳೆಗಾಲದ ನಂತರ ಕಟ್ಟಡಗಳ ನಿರ್ವಹಣೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು..ಎಚ್.ಸುರೇಶ್, ಉತ್ತರ ವಲಯ ಕಚೇರಿ ಮುಖ್ಯ ಎಂಜಿನಿಯರ್
‘ವರ್ಷದಿಂದ ಅನುದಾನ ಬಿಡುಗಡೆಯಾಗದ ಕಾರಣ ಐಬಿ ಮತ್ತು ಕಚೇರಿಯಲ್ಲಿ ದುಡಿಯುವ ಹೊರಗುತ್ತಿಗೆ ಸಿಬ್ಬಂದಿಗೆ ಆಯಾ ಕಚೇರಿಯ ಎಂಜಿನಿಯರ್‌ಗಳೇ ತಮ್ಮ ಸಂಬಳದಲ್ಲಿ ಕೆಲ ಪಾಲನ್ನು ನೀಡಿ ಅವರನ್ನು ಕೆಲಸದಲ್ಲಿ ಮುಂದುವರಿಸಿಕೊಂಡಿದ್ದರು. ಅನುದಾನದ ಬಗ್ಗೆ ಹಿರಿಯ ಅಧಿಕಾರಿಗಳನ್ನು ಕೇಳಿದರೆ ಬಿಡುಗಡೆ ಮಾಡುವುದಾಗಿ ಭರವಸೆಯಷ್ಟೇ ನೀಡುತ್ತಿದ್ದಾರೆ. ಆದರೆ ಮೂರು ತಿಂಗಳಿನಿಂದ ಎಂಜಿನಿಯರ್‌ಗಳು ಸಂಬಳ ನೀಡದ ಕಾರಣ ಯಾವ ಗುತ್ತಿಗೆ ಸಿಬ್ಬಂದಿಗೂ ಸಂಬಳವಾಗಿಲ್ಲ. ಇದೇ ರೀತಿಯಾದರೆ ಕೆಲಸ ಬಿಡುವುದು ಅನಿವಾರ್ಯವಾಗಲಿದೆ' ಎಂಬುದು ಬಹುತೇಕ ಗುತ್ತಿಗೆ ಸಿಬ್ಬಂದಿಯ ಮಾತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.