ಕಾರವಾರ: ಜಿಲ್ಲೆಯಾದ್ಯಂತ ಬುಧವಾರ ಎಡೆಬಿಡದೆ ಮಳೆ ಸುರಿದಿದ್ದು ಹಲವೆಡೆ ನೀರು ತುಂಬಿ ಸಮಸ್ಯೆ ಉಂಟಾಗಿದೆ. ಭಟ್ಕಳ ತಾಲ್ಲೂಕಿನ ಮುಂಡಳ್ಳಿಯಲ್ಲಿ ಗರಿಷ್ಠ 19 ಸೆ.ಮೀಂ. ಮಳೆ ಸುರಿದಿದೆ.
ಜಿಲ್ಲೆಯಲ್ಲಿ ಕಳೆದ ಇಪ್ಪತ್ನಾಲ್ಕು ತಾಸುಗಳಲ್ಲಿ ಸುರಿದ ಮಳೆಯ ಪರಿಣಾಮದಿಂದ ಭಟ್ಕಳದಲ್ಲಿ 1 ಮನೆಗೆ, 0.8 ಹೆಕ್ಟೇರ್ ತೋಟಗಾರಿಕೆ ಬೆಳೆ ಪ್ರದೇಶಕ್ಕೆ ಹಾನಿ ಉಂಟಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಮಂಗಳವಾರ ರಾತ್ರಿಯಿಂದಲೂ ನಿರಂತರವಾಗಿ ಮಳೆ ಸುರಿದ ಪರಿಣಾಮ ನಗರದ ಹಬ್ಬುವಾಡಾ ರಸ್ತೆಯಲ್ಲಿರುವ ಸಾರಿಗೆ ಘಟಕದ ಆವರಣದ ತುಂಬೆಲ್ಲ ನೀರು ನಿಲ್ಲುವಂತಾಯಿತು. ಘಟಕದ ಕಚೇರಿಯ ಕಟ್ಟಡದ ಚಾವಣಿ ಸೋರಿಕೆಯಾಗಿದ್ದರಿಂದ ಕಡತಗಳು, ಸಾಮಗ್ರಿಗಳು ಒದ್ದೆಯಾದವು.
ಅರ್ಗಾ, ಚೆಂಡಿಯಾ, ಪೋಸ್ಟ್ ಚೆಂಡಿಯಾ, ಈಡೂರು ಗ್ರಾಮಗಳಲ್ಲಿ ಜಲಾವೃತ ಸಮಸ್ಯೆ ಮುಂದುವರಿದಿತ್ತು. ಪೋಸ್ಟ್ ಚೆಂಡಿಯಾ ಗ್ರಾಮದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಸಮೀಪದಲ್ಲಿರುವ 11 ಮನೆಗಳ ಜನರನ್ನು ಸ್ಥಳಾಂತರಕ್ಕೆ ಸೂಚಿಸಲಾಯಿತು. ಮಳೆ ನೀರು ನುಗ್ಗಿದ್ದರಿಂದ ಅರ್ಗಾ ಗ್ರಾಮದ 6 ಮನೆಗಳಿಗೆ ಹಾನಿ ಉಂಟಾಯಿತು. ನಗರದ ಕೋಡಿಬಾಗ ರಸ್ತೆ ಸೇರಿ ಕೆಲವೆಡೆ ದೊಡ್ಡ ಗಾತ್ರದ ಮರಗಳು ನೆಲಕ್ಕುರುಳಿದವು.
‘ನೌಕಾನೆಲೆ ವ್ಯಾಪ್ತಿಯಲ್ಲಿ ಕಾಮಗಾರಿ ಸಲುವಾಗಿ ಕಾಲುವೆಯನ್ನು ಮುಚ್ಚಿಹಾಕಿರುವ ಶಂಕೆ ಇದೆ. ಇದರಿಂದ ಮಳೆನೀರು ಸರಾಗವಾಗಿ ಹರಿದು ಹೋಗದೆ ಗ್ರಾಮಗಳಲ್ಲಿ ಸಮಸ್ಯೆಗಳು ಎದುರಾಗುತ್ತಿವೆ. ಕೆಲವು ತಿಂಗಳ ಹಿಂದೆ ರಸ್ತೆ ನಿರ್ಮಿಸಲು ನೌಕಾನೆಲೆಯವರು ಗುಡ್ಡ ಅಗೆದಿದ್ದರಿಂದ ಭೂಕುಸಿತದ ಆತಂಕವೂ ಉಂಟಾಗಿದೆ’ ಎಂದು ಅರ್ಗಾ ಗ್ರಾಮಸ್ಥರು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಸರಾಸರಿ 10 ಸೆಂ.ಮೀ.ಗಿಂತ ಹೆಚ್ಚಿನ ಮಳೆ ಸುರಿದಿದ್ದು, ತಾಲ್ಲೂಕಿನ ಶಿರವಾಡದಲ್ಲಿ 18.8 ಸೆಂ.ಮೀ., ಭಟ್ಕಳ ತಾಲ್ಲೂಕಿನ ಬೆಳಕೆ, ಮುಠ್ಠಳ್ಳಿ, ಮಾವಿನಕುರ್ವೆ, ಹೊನ್ನಾವರ ತಾಲ್ಲೂಕಿನ ಸಾಲ್ಕೋಡದಲ್ಲಿ 18 ಸೆಂ.ಮೀ. ಮಳೆ ಸುರಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.