ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಣಾರ್ಧದಲ್ಲಿ ಕಂದಾಯ ದಾಖಲೆ ಲಭ್ಯ

ಶಿರಸಿ: ಡಿಜಿಟಲೀಕರಣಗೊಂಡ 5.5 ಲಕ್ಷ ಕಂದಾಯ ದಾಖಲೆಗಳು
Last Updated 26 ಮಾರ್ಚ್ 2023, 18:25 IST
ಅಕ್ಷರ ಗಾತ್ರ

ಶಿರಸಿ: ದೂಳು ತಿನ್ನುತ್ತಿದ್ದ ಲಕ್ಷಾಂತರ ಕಡತಗಳನ್ನು ಕೋಡಿಂಗ್‌ ಮೂಲಕ ಡಿಜಿಟಲೀಕರಣಗೊಳಿಸಿ ಜನಸಾಮಾನ್ಯರಿಗೆ ತ್ವರಿತ ಸೇವೆ ಒದಗಿಸುವ ಕಾರ್ಯ ಶಿರಸಿ ಉಪವಿಭಾಗ ಕಚೇರಿಯಲ್ಲಿ ನಡೆದಿದೆ. ದಾನಿಯೊಬ್ಬರ ಸಹಕಾರದಿಂದ ಕಂದಾಯ ಕಡತ ನಿರ್ವಹಣೆ ಅಚ್ಚುಕಟ್ಟಾಗಿ ದಾಖಲೀಕರಣ ಮಾಡುವ ಪ್ರಯತ್ನ ನಡೆದಿರುವುದು ರಾಜ್ಯದಲ್ಲೇ ಮಾದರಿಯಾಗಿದೆ.

ಶಿರಸಿ ಉಪವಿಭಾಗ ವ್ಯಾಪ್ತಿಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತು ಮುಂಡಗೋಡ ತಾಲ್ಲೂಕುಗಳಿಗೆ ಸೇರಿದ ಹಳೆ ಮಂಜೂರಿ ಆದೇಶಗಳು, ಅರೆ ನ್ಯಾಯಿಕ ತೀರ್ಪುಗಳು, ಆರ್.ಆರ್.ಟಿ ಪ್ರಕರಣಗಳ ದಾಖಲೆಗಳು, ಇಲಾಖೆ ಮೂಲ ದಾಖಲೆಗಳನ್ನು ಉಪವಿಭಾಗೀಯ ಕಚೇರಿ ಮಹಡಿ ಮೇಲೆ ಬಟ್ಟೆ ಚೀಲಗಳಲ್ಲಿ ಅನೇಕ ವರ್ಷಗಳಿಂದ ಸಂಗ್ರಹಿಸಿಡಲಾಗಿತ್ತು. ವ್ಯವಸ್ಥಿತ ಜಾಗ, ಕಪಾಟುಗಳ ಕೊರತೆ ಕಾರಣ ದಾಖಲೆಗಳು ಅಸ್ತವ್ಯಸ್ತವಾಗಿದ್ದವು.

ಕಾರ್ಯ ನಿಮಿತ್ತ ಕಚೇರಿಗೆ ಬರುವ ಜನರಿಗೆ ಹಳೆಯ ದಾಖಲೆ ಪ್ರತಿ ಬೇಕೆಂದರೆ ತಿಂಗಳುಗಟ್ಟಲೇ ಕಾಲಾವಕಾಶ ಪಡೆದು ಪೂರೈಸಬೇಕಾಗಿತ್ತು. ಇದರಿಂದ ಸಮಯ ವ್ಯರ್ಥ ಹಾಗೂ ಕಡತಗಳ ಆಯಸ್ಸು ಕ್ಷೀಣಿಸುವ ಆತಂಕವಿತ್ತು.

ಕಾರ್ಯನಿಮಿತ್ತ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿದ್ದ ಉದ್ಯಮಿ ಶ್ರೀನಿವಾಸ್ ಹೆಬ್ಬಾರ್ ಅವರು, ವ್ಯವಸ್ಥೆ ಸುಧಾರಣೆ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ದೇವರಾಜ್ ಆರ್. ಜೊತೆ ಚರ್ಚಿಸಿ ಡಿಜಿಟಲೀಕರಣಕ್ಕೆ ಅಗತ್ಯವಿರುವ ಮೊತ್ತ ನೀಡುವುದಾಗಿ ತಿಳಿಸಿದ್ದರು.

ದಾಖಲೆಗಳ ಡಿಜಿಟಲೀಕರಣ: 400 ವಿವಿಧ ಮಾದರಿಯ 5.5 ಲಕ್ಷಕ್ಕೂ ಹೆಚ್ಚಿನ ಕಂದಾಯ ದಾಖಲೆಗಳನ್ನು ಸಂಪೂರ್ಣ ಸ್ಕ್ಯಾನ್ ಮಾಡಿಸುವ ಜೊತೆ ಕೋಡಿಂಗ್‌ ಮಾಡಿ ಡಿಜಿಟಲೀಕರಣ ಮಾಡಿಸಲಾಗಿದೆ. ಕೋಡ್‌ಗಳುಳ್ಳ ಕಡತಗಳಿಗೆ ಟ್ಯಾಗ್ ಲಗತ್ತಿಸಿ ಯಾವುದೇ ಕಾಲದ ದಾಖಲೆ ವಿಳಂಬವಿಲ್ಲದೆ ಸಿಗುವಂತೆ ಮಾಡಲಾಗಿದೆ.

ಬೆಳಗಾವಿ ಮೂಲದ ಸ್ವಯಂ ಸೇವಾ ಸಂಸ್ಥೆಗೆ ಈ ಕಾರ್ಯ ವಹಿಸಲಾಗಿತ್ತು. ಆರು ತಿಂಗಳು ಸತತವಾಗಿ 4 ಸ್ಕ್ಯಾನರ್ ಗಳ ಮೂಲಕ ಸಮಗ್ರ ದಾಖಲೆಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಳಿಸಲಾಗಿದ್ದು, ಜನಸೇವೆಗೆ ಮುಕ್ತಗೊಂಡಿದೆ.

ಈ ಕಾರಣದಿಂದ ಪ್ರಸ್ತುತ ದಾಖಲೆಗಳ ಪರಿಶೀಲನೆ, ಸಾರ್ವಜನಿಕರಿಗೆ ಪ್ರತಿಗಳ ವಿತರಣೆ ಕ್ಷಣಾರ್ಧದಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT