ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಅಡಿಕೆ ಕೊಳೆ: ಗ್ರಾಮವಾರು ಸರ್ವೆಗೆ ಆಕ್ಷೇಪ

ಸಿಗದ ಕೊಳೆ ಹಾನಿಯ ನೈಜ ಲೆಕ್ಕಾಚಾರ
Published 31 ಆಗಸ್ಟ್ 2024, 6:36 IST
Last Updated 31 ಆಗಸ್ಟ್ 2024, 6:36 IST
ಅಕ್ಷರ ಗಾತ್ರ

ಶಿರಸಿ: ಅಡಿಕೆ ಕೊಳೆಯಿಂದಾದ ನಷ್ಟದ ಸಂಬಂಧ ತೋಟಗಾರಿಕಾ ಇಲಾಖೆ ವತಿಯಿಂದ ನಡೆಯುತ್ತಿರುವ ಗ್ರಾಮವಾರು ಸರ್ವೆಯಲ್ಲಿ ಹಾನಿಯ ನೈಜ ಲೆಕ್ಕಾಚಾರ ಸಿಗದಂತಾಗಿದೆ. ಇದು ಕೊಳೆಯಿಂದ ಕಂಗೆಟ್ಟ ರೈತರ ಆಕ್ರೋಶಕ್ಕೆ ಕಾರಣವಾಗಿದೆ. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಅತಿವೃಷ್ಟಿಗೆ ಪ್ರಸ್ತುತ 17,800 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಗೆ ಕೊಳೆರೋಗ ವ್ಯಾಪಿಸಿದೆ. ಇದರಲ್ಲಿ 9200 ಹೆ.ಪ್ರದೇಶದಲ್ಲಿ ಶೇ 33ಕ್ಕಿಂತ ಹೆಚ್ಚು ಹಾನಿಯಾಗಿದೆ. ಉಳಿದೆಡೆ ಶೇ 5 ರಿಂದ ಶೇ 32ರಷ್ಟು ಹಾನಿ ಉಂಟಾಗಿದೆ ಎಂಬುದು ತೋಟಗಾರಿಕಾ ಇಲಾಖೆ ಲೆಕ್ಕಾಚಾರವಾಗಿದೆ. ಅಡಿಕೆಗೆ ಹೆಚ್ಚಿನ ಕೊಳೆ ಬಂದ ಗ್ರಾಮಗಳಲ್ಲಿ ತೋಟಗಾರಿಕಾ ಇಲಾಖೆ ಸಿಬ್ಬಂದಿ ಹಾನಿಯ ಸರ್ವೆ ಮಾಡುತ್ತಿದ್ದಾರೆ. ಆದರೆ ಇಲಾಖೆಯು ಹೀಗೆ ಮಾಡುತ್ತಿರುವ ಸಾಮೂಹಿಕ ಸರ್ವೆಗೆ ಬೆಳೆಗಾರರ ಆಕ್ಷೇಪ ವ್ಯಕ್ತವಾಗಿದೆ. 

ಹಾನಿಗೆ ಪರಿಹಾರ ಕೊಡುವುದಿದ್ದರೆ ಮಾತ್ರ ಕಂದಾಯ ಹಾಗೂ ತೋಟಗಾರಿಕಾ ಇಲಾಖೆ ವತಿಯಿಂದ ಹಾನಿಗೊಳಗಾದ ಪ್ರತಿ ಕ್ಷೇತ್ರದ ಜಂಟಿ ಸರ್ವೆ ನಡೆಸಲಾಗುತ್ತದೆ. ಸದ್ಯ ಅಡಿಕೆ ಕೊಳೆಯಿಂದಾದ ಹಾನಿಗೆ ಸರ್ಕಾರದಿಂದ ಪರಿಹಾರ ಘೋಷಣೆಯಾಗಿಲ್ಲ. ಹೀಗಾಗಿ ಗ್ರಾಮದ ಒಂದೆರಡು ತೋಟ ಸರ್ವೆ ನಂಬರ್‌ಗಳಲ್ಲಿ ಸಮೀಕ್ಷೆ ನಡೆಸಿ ಇಡೀ ಗ್ರಾಮದ ಉಳಿದ ತೋಟಗಳ ಸರ್ವೆ ನಂಬರ್ ನಲ್ಲಿನ ಹಾನಿಯ ಸ್ಥಿತಿಗತಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿ ಹಾನಿಯ ವರದಿ ಸಿದ್ಧಪಡಿಸುವ ಕಾರ್ಯ ತೋಟಗಾರಿಕಾ ಇಲಾಖೆಯಿಂದ ನಡೆಯುತ್ತಿದೆ. ಹೀಗಾದರೆ ಹೆಚ್ಚಿನ ಹಾನಿಗೊಳಗಾದ ರೈತರ ಲೆಕ್ಕವು ವರದಿಯಲ್ಲಿ ತಪ್ಪಾಗಿ ನಮೂದಾಗುತ್ತದೆ. ಹಾನಿಯನ್ನು  ಸಾಮೂಹಿಕಗೊಳಿಸಿ, ವರದಿ ನೀಡುವುದು ಅವೈಜ್ಞಾನಿಕ' ಎಂಬುದು ಅಡಿಕೆ ಬೆಳೆಗಾರರ ದೂರಾಗಿದೆ. 

‘ಗ್ರಾಮದ ಒಂದು ಕಡೆಯ ತೋಟದಲ್ಲಿ ಶೇ 80ರಷ್ಟು ಹಾನಿಯಾಗಿದೆ. ಅದೇ ಗ್ರಾಮದ ಮತ್ತೊಂದು ಭಾಗದಲ್ಲಿ ಶೇ 10ರಷ್ಟು ಕೊಳೆ ರೋಗ ಬಾಧಿಸಿದೆ. ಕಡಿಮೆ ಹಾನಿಯಾದ ತೋಟದಲ್ಲಿ ಸರ್ವೆ ನಡೆಸಿ, ಗ್ರಾಮವಾರು ಪರಿಶೀಲನೆಯ ಮಾನದಂಡ ಅನುಸರಿಸಿ ವರದಿ ನೀಡಿದರೆ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದಂತಾಗುತ್ತದೆ. ಒಂದೊಮ್ಮೆ ಕೊಳೆಗೆ ಪರಿಹಾರ ಘೋಷಿಸಿದರೆ ನೈಜ ಹಾನಿಗೊಂಡ ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ’ ಎಂಬುದು ಬೆಳೆಗಾರ ಮಂಜುನಾಥ ಹೆಗಡೆ ಮಾತಾಗಿದೆ.

‘ಕೊಳೆ ಹಾನಿಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸರ್ಕಾರ ಪ್ಯಾಕೇಜ್ ಘೋಷಿಸಬೇಕು. ಅದಕ್ಕೆ ಪೂರಕವಾಗಿ ಗ್ರಾಮವಾರು ಸರ್ವೆ ಮಾಡುವ ಬದಲು ಕೊಳೆ ರೋಗ ಬಂದ ತೋಟಗಳ ರೈತರ ಅಡಿಕೆ ಕ್ಷೇತ್ರದ ಪ್ರತ್ಯೇಕ ಸರ್ವೆ ಮಾಡಲು ಸರ್ಕಾರ ಆದೇಶಿಸಬೇಕು. ಹೀಗೆ ಮಾಡುವುದರಿಂದ ಹಾನಿಗೊಳಗಾದ ನೈಜ ಬೆಳೆಗಾರರಿಗೆ ತಕ್ಕಮಟ್ಟಿನ ಅನುಕೂಲ ಆಗುತ್ತದೆ’ ಎಂಬುದು ಬಹುತೇಕ ಅಡಿಕೆ ಬೆಳೆಗಾರರ ಅಭಿಪ್ರಾಯ. 

17,800 ಹೆಕ್ಟೇರ್ ಪ್ರದೇಶದಲ್ಲಿ ಕೊಳೆ 9200 ಹೆ.ನಲ್ಲಿ ಶೇ.33ಕ್ಕಿಂತ ಹೆಚ್ಚು ಹಾನಿ ಶೇ 50ಕ್ಕೂ ಹೆಚ್ಚು ಪ್ರದೇಶದಲ್ಲಿ ವ್ಯಾಪಕ ಹಾನಿ 
ಪ್ರಸಕ್ತ ವರ್ಷ ಅತಿಯಾದ ಕೊಳೆ ಬಂದಿದೆ. ಆದರೆ ಜಿಲ್ಲೆಯಲ್ಲಿ ಶೇ 33 ಕ್ಕಿಂತ ಹೆಚ್ಚು ಹಾನಿಯಾದ ಪ್ರದೇಶ 9200 ಹೆ. ಕಾಣಿಸಲಾಗಿದೆ. ಇದು ಗ್ರಾಮವಾರು ಸರ್ವೆಯ ಪರಿಣಾಮ
ಪ್ರವೀಣ ಹೆಗಡೆ ಅಡಿಕೆ ಬೆಳೆಗಾರ
ಈಗಾಗಲೇ ಅಡಿಕೆ ಕೊಳೆ ರೋಗ ಬಂದ ಕ್ಷೇತ್ರಗಳಲ್ಲಿ ಗ್ರಾಮವಾರು ಸರ್ವೆ ಮಾಡಲಾಗಿದೆ. ಶೀಘ್ರದಲ್ಲೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು
ಬಿ.ಪಿ.ಸತೀಶ ತೋಟಗಾರಿಕಾ ಇಲಾಖೆ ಡಿಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT