ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಕಾಂಗ್ರೆಸ್ ಜಿಲ್ಲಾ ಘಟಕಕ್ಕೆ ಸಾಯಿ ಗಾಂವಕರ್ ಸಾರಥ್ಯ

Last Updated 21 ಜನವರಿ 2023, 15:26 IST
ಅಕ್ಷರ ಗಾತ್ರ

ಕಾರವಾರ: ವಿಧಾನಸಭೆ ಚುನಾವಣೆಗೆ ಕೆಲವೇ ದಿನ ಬಾಕಿ ಇರುವ ಹೊತ್ತಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆಯ ಮಹತ್ತರ ನಿರ್ಧಾರ ಕೈಗೊಂಡಿದೆ. 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶಿರಸಿಯ ಭೀಮಣ್ಣ ನಾಯ್ಕ ಅವರನ್ನು ಕೈಬಿಟ್ಟು ಅಂಕೋಲಾದ ಸಾಯಿ ಗಾಂವಕರ್ ಅವರಿಗೆ ಕುರ್ಚಿ ನೀಡಲಾಗಿದೆ.

ಪಕ್ಷದಲ್ಲಿ ಹಲವು ವರ್ಷದಿಂದ ಕೆಲಸ ಮಾಡುತ್ತಿರುವ ಸಾಯಿ ಗಾಂವಕರ್ ಹಲವು ಹುದ್ದೆ ನಿಭಾಯಿಸಿದ್ದರು. ಮಾರ್ಗರೇಟ್ ಆಳ್ವಾ ನಿಕಟವರ್ತಿಯಾಗಿರುವ ಅವರು ಶಾಸಕ ಆರ್.ವಿ.ದೇಶಪಾಂಡೆ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದಾರೆ.

2010ರಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹುದ್ದೆಗೆ ಏರಿದ್ದ ಭೀಮಣ್ಣ ನಾಯ್ಕ ನಿರಂತರ ಓಡಾಟ ನಡೆಸಿ ಪಕ್ಷ ಸಂಘಟನೆ ಮಾಡಿದ್ದರು. ಎರಡು ವಿಧಾನಸಭೆ, ಎರಡು ಲೋಕಸಭೆ ಚುನಾವಣೆ, ಉಪಚುನಾವಣೆಯಲ್ಲಿ ಪಕ್ಷ ಮುನ್ನಡೆಸಿದ ಸಾಧನೆ ಮಾಡಿದ್ದಾರೆ.

‘ಚುನಾವಣೆ ಎದುರಿನಲ್ಲಿದ್ದಾಗ ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆಯಂತಹ ಗಂಭೀರ ನಿರ್ಧಾರ ಕೈಗೊಂಡಿರುವುದು ಅಚ್ಚರಿ ತಂದಿದೆ. ಅದರಲ್ಲೂ ಜಿಲ್ಲೆಯಲ್ಲಿ ಬಹುಸಂಖ್ಯಾತ ನಾಮಧಾರಿ ಸಮುದಾಯಕ್ಕೆ ಸೇರಿದ್ದ ನಾಯಕರನ್ನು ಕೈಬಿಟ್ಟಿರುವ ನಿರ್ಧಾರ ಅದಕ್ಕಿಂತಲೂ ಅಚ್ಚರಿ ಮೂಡಿಸುತ್ತಿದೆ’ ಎಂದು ಜಿಲ್ಲೆಯ ಹಿರಿಯ ರಾಜಕೀಯ ವಿಶ್ಲೇಷಕರೊಬ್ಬರು ಅಭಿಪ್ರಾಯಿಸಿದರು.

‘ಚುನಾವಣೆ ಎದುರಾಗುತ್ತಿದ್ದಂತೆ ಪಕ್ಷದಲ್ಲಿ ಸಣ್ಣ ಹುದ್ದೆ ಬದಲಿಸುವುದು ಸಹಜ. ಆದರೆ ಜಿಲ್ಲಾಮಟ್ಟದ ದೊಡ್ಡ ಹುದ್ದೆಗಳನ್ನು ಬದಲಿಸುವ ಧೈರ್ಯವನ್ನು ರಾಜಕೀಯ ಪಕ್ಷಗಳು ತೋರುವುದು ಕಡಿಮೆ. ಅದರಲ್ಲೂ ಮತಬ್ಯಾಂಕ್ ಲೆಕ್ಕಾಚಾರ ಹಾಕಿ ಕೈಗೊಳ್ಳುವ ನಿರ್ಧಾರ ಗಮನಿಸಿ ಹೇಳುವುದಾದರೆ ಕಾಂಗ್ರೆಸ್ ಜೇನುಗೂಡಿಗೆ ಕಲ್ಲು ಹೊಡೆದಿದೆ’ ಎಂದು ವಿಶ್ಲೇಷಿಸಿದರು.

ಕುಮಟಾದ ಶಿವಾನಂದ ಹೆಗಡೆ ಕಡತೋಕಾ, ಶಿರಸಿಯ ವೆಂಕಟೇಶ ಹೆಗಡೆ ಹೊಸಬಾಳೆ ಹೆಸರು ಕೂಡ ಜಿಲ್ಲಾ ಘಟಕದ ಅಧ್ಯಕ್ಷರ ರೇಸ್‍ನಲ್ಲಿ ಈ ಹಿಂದೆ ಕಾಣಿಸಿತ್ತು.

ಒಂದೇ ಕುಟುಂಬದ ಇಬ್ಬರಿಗೆ ಹುದ್ದೆ!

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಾಯಿ ಗಾಂವಕರ್ ಅವರ ಕುಟುಂಬ ಸದಸ್ಯರಲ್ಲಿ ಒಬ್ಬರಾಗಿರುವ ಸುಜಾತಾ ಗಾಂವಕರ್ ಸದ್ಯ ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ.

ಹೀಗಾಗಿ ಒಂದೇ ಕುಟುಂಬದ ಇಬ್ಬರಿಗೆ ಪಕ್ಷದ ಜಿಲ್ಲಾ ಮಟ್ಟದ ಹುದ್ದೆ ನೀಡಿರುವ ಸಂಗತಿ ಪಕ್ಷದ ಕಾರ್ಯಕರ್ತರ ವಲಯದಲ್ಲೇ ಚರ್ಚಿತಗೊಳ್ಳುತ್ತಿದೆ.

‘ಚುನಾವಣೆ ಕೂಗಳತೆ ದೂರದಲ್ಲಿರುವಾಗ ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆ ಮಾಡಿರುವ ಕ್ರಮ ಸರಿಯಲ್ಲ. ನಿರ್ಣಯ ಕೈಗೊಳ್ಳುವ ಮೊದಲು ಮಾಜಿ ಶಾಸಕರು, ಹಲವು ಬ್ಲಾಕ್ ಅಧ್ಯಕ್ಷರ ಗಮನಕ್ಕೂ ತಂದಿಲ್ಲ’ ಎಂದು ಕರಾವಳಿ ಭಾಗದ ಕಾಂಗ್ರೆಸ್ ಮುಖಂಡರೊಬ್ಬರು ಬೇಸರಿಸಿದರು.

----------------------

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹುದ್ದೆ ಬೇರೆಯವರಿಗೆ ನೀಡುವಂತೆ ಈ ಹಿಂದೆ ಹಲವು ಬಾರಿ ವರಿಷ್ಠರಿಗೆ ಮನವಿ ಮಾಡಿದ್ದೆ. ಪಕ್ಷದ ನಿರ್ಣಯವನ್ನು ಸ್ವಾಗತಿಸುತ್ತೇನೆ.

ಭೀಮಣ್ಣ ನಾಯ್ಕ

ಕಾಂಗ್ರೆಸ್ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ

-------------------

ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುವುದು ನನ್ನ ಗುರಿ. ಬಣ ರಾಜಕೀಯಕ್ಕೆ ಆಸ್ಪದ ಕೊಡದೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮುನ್ನಡೆಯುತ್ತೇನೆ.

ಸಾಯಿ ಗಾಂವಕರ್

ನಿಯೋಜಿತ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT