ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ| ಪ್ಯಾಕಿಂಗ್ ಘಟಕಕ್ಕೆ ಹಾಲಿನ ಕೊರತೆ 

ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಹಾಲಿನ ಸಂಗ್ರಹ ಪ್ರಮಾಣ ಇಳಿಕೆ
Last Updated 12 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಶಿರಸಿ: ಹಾಲು ಉತ್ಪಾದಕ ಸಹಕಾರಿ ಸಂಘಗಳು ನೀಡುವ ಹಾಲಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾದ ಕಾರಣ ತಾಲ್ಲೂಕಿನ ಹನುಮಂತಿಯಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಧಾರವಾಡ ಹಾಲು ಒಕ್ಕೂಟ ಸ್ಥಾಪಿಸಿರುವ ಹಾಲಿನ ಪ್ಯಾಕಿಂಗ್ ಘಟಕಕ್ಕೆ ಹಾಲಿನ ಕೊರತೆ ಎದುರಾಗಿದೆ.

ನಿತ್ಯ ಘಟಕಕ್ಕೆ ಹೊರ ಜಿಲ್ಲೆಗಳಿಂದ ಸಾವಿರಾರು ಲೀಟರ್ ಹಾಲು ತರಿಸಲಾಗುತ್ತಿದೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. ಹಾಲು ಘಟಕಕ್ಕೆ ಕನಿಷ್ಠ 60 ಸಾವಿರ ಲೀ. ಹಾಲಿನ ಅಗತ್ಯವಿದೆ. ಆದರೆ ಈಗಾಗಲೆ ಸರಾಸರಿ 30 ಸಾವಿರ ಲೀ. ಮಾತ್ರ ಪೂರೈಕೆ ಆಗುತ್ತಿದೆ.

ಹನುಮಂತಿಯ ಶೀಥಲ ಕೇಂದ್ರದಲ್ಲಿ ಹಾಲು ಪ್ಯಾಕಿಂಗ್ ಘಟಕ ಸ್ಥಾಪನೆಯ ಮೊದಲು ಪ್ರತಿ ದಿನಕ್ಕೆ ಸರಾಸರಿ 40 ರಿಂದ 45 ಸಾವಿರ ಲೀ. ಹಾಲು ಪೂರೈಕೆ ಆಗುತ್ತಿತ್ತು. ಹಾಲು ಪ್ಯಾಕಿಂಗ್ ಘಟಕದ ಸ್ಥಾಪನೆಯಾದ ನಂತರ ನಂದಿನಿ ಹಾಲು ಹಾಗೂ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ಪ್ರತಿ ದಿನಕ್ಕೆ 55 ರಿಂದ 60 ಸಾವಿರ ಲೀ.ಗೆ ಏರಿಕೆಯಾಗಿತ್ತು.

ಹಾಲು ಪೂರೈಕೆ ಇಳಿಕೆಯಾಗಿರುವ ಕಾರಣ ಧಾರವಾಡದಿಂದ ಸದ್ಯ ಪ್ರತಿದಿನ 25 ರಿಂದ 30 ಸಾವಿರ ಲೀ. ಹಾಲನ್ನು ಟ್ಯಾಂಕರ್ ಮೂಲಕ ಪ್ಯಾಕಿಂಗ್ ಘಟಕಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ.

‘ಒಕ್ಕೂಟ ನೀಡುವ ದರಕ್ಕಿಂತ ಸ್ವಲ್ಪ ಹೆಚ್ಚು ಸಿಗುತ್ತದೆ ಎಂಬ ಕಾರಣಕ್ಕೆ ಹಾಲು ಉತ್ಪಾದಕರು ಖಾಸಗಿಯವರಿಗೆ ಹಾಲು ಮಾರಾಟ ಮಾಡುತ್ತಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸಂಗ್ರಹವಾಗುವ ಹಾಲುಗಳು ಸ್ಥಳೀಯವಾಗಿ ಖರೀದಿಯಾಗುತ್ತಿದೆ. ಅದರಲ್ಲೂ ಶುಭ ಸಮಾರಂಭಗಳ ಅವಧಿ ಆಗಿರುವ ಕಾರಣ ಘಟಕಕ್ಕೆ ಬರುವ ಹಾಲಿನ ಪ್ರಮಾಣ ಇಳಿಕೆಯಾಗಿರುವುದು ಗಮನಕ್ಕೆ ಬಂದಿದೆ’ ಎನ್ನುತ್ತಾರೆ ಧಾಮುಲ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ.

‘ಚರ್ಮರೋಗ ಬಾಧೆಗೆ ಸಾವಿರಾರು ಜಾನುವಾರುಗಳು ತುತ್ತಾಗಿವೆ. ಸಿ ಮೇವಿನ ಕೊರತೆ, ಹಿಂಡಿ ದರ ಹೆಚ್ಚಳವೂ ಹೈನೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಾಲು ಪ್ರಮಾಣ ಕುಸಿಯಲು ಇದೂ ಕಾರಣ’ ಎನ್ನುತ್ತಾರೆ ಹೈನುಗಾರಿಕೆಯ ನಡೆಸುತ್ತಿರುವ ಲೀಲಾ ನಾಯ್ಕ.

-------------------

ಹಾಲು ಉತ್ಪಾದಕ ಸಹಕಾರಿ ಸಂಘಗಳು ಖಾಸಗಿಯಾಗಿ ಹಾಲು ಮಾರುವುದು ಸಂಘದ ಉಪ ನಿಯಮಗಳಿಗೆ ವಿರುದ್ಧವಾಗಿದೆ. ಈ ವಿಷಯದ ಬಗ್ಗೆ ಈಗಾಗಲೇ ಎಲ್ಲ ಸಂಘಗಳಿಗೂ ಪತ್ರ ಬರೆಯಲಾಗಿದೆ.

- ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಧಾಮುಲ್ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT