ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ ಮಾರಿಕಾಂಬಾ ಜಾತ್ರೆ: ಸ್ವಚ್ಛತೆಗೆ ₹1.10 ಕೋಟಿ ಖರ್ಚು

ನಗರಸಭೆ ಸಾಮಾನ್ಯ ಸಭೆ: ವೆಚ್ಚದ ಮೊತ್ತ ಕೇಳಿ ಹೌಹಾರಿದ ಸದಸ್ಯರು
Published : 3 ಸೆಪ್ಟೆಂಬರ್ 2024, 14:33 IST
Last Updated : 3 ಸೆಪ್ಟೆಂಬರ್ 2024, 14:33 IST
ಫಾಲೋ ಮಾಡಿ
Comments

ಶಿರಸಿ: ಮಾರಿಕಾಂಬಾ ಜಾತ್ರೆ ಸಂದರ್ಭದಲ್ಲಿ ಸ್ವಚ್ಛತೆ ಉದ್ದೇಶಕ್ಕಾಗಿ ನಗರಸಭೆ ಖರ್ಚು ಮಾಡಿರುವ ಮೊತ್ತವು ನಗರಸಭೆ ಸದಸ್ಯರೇ ಹುಬ್ಬೇರುವಂತೆ ಮಾಡಿದೆ. ಜತೆಗೆ, ಹಲವು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದ್ದು, ಪ್ರತ್ಯೇಕ ಸಭೆ ಕರೆದು ವಿವರವಾದ ಮಾಹಿತಿ ಒದಗಿಸುವಂತೆ ಒತ್ತಾಯಿಸಿದ ಘಟನೆ ನಗರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು. 

ನಗರದ ಅಟಲ್ ಜೀ ಸಭಾಭವನದಲ್ಲಿ ಮಂಗಳವಾರ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ನಗರಸಭೆ ಲೆಕ್ಕಾಧಿಕಾರಿ ಸುಬ್ರಹ್ಮಣ್ಯ ಭಟ್, ‘ಜಾತ್ರೆಯ ವೇಳೆ ಸ್ವಚ್ಛತೆ ವಸ್ತುಗಳ ಖರೀದಿಗೆ ₹1.10 ಕೋಟಿ ಖರ್ಚಾಗಿದೆ.  ₹50 ಲಕ್ಷ ಭರಣ ಮಾಡುವಂತೆ ದೇವಾಲಯಕ್ಕೆ ತಿಳಿಸಲಾಗಿತ್ತು. ಆದರೆ ಅವರು ಕೇವಲ ₹19 ಲಕ್ಷ ಪಾವತಿಸಿದ್ದಾರೆ’ ಎಂದು  ಮಾಹಿತಿ ನೀಡಿದರು.

ಈ ವೇಳೆ ಬಹುತೇಕ ಸದಸ್ಯರು ‘ಸ್ವಚ್ಛತೆಗಾಗಿ ಇಷ್ಟು ಮೊತ್ತ ಖರ್ಚಾಗಿದೆಯೇ? ಯಾವ ವಸ್ತುಗಳನ್ನು ಖರೀದಿಸಿದ್ದೀರಿ?’ ಎಂಬುದರ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಮಾಹಿತಿ ನೀಡುವಂತೆ ಒತ್ತಾಯಿಸಿದರು. 

ಸದಸ್ಯ ದಯಾನಂದ ನಾಯ್ಕ ವಿಷಯ ಪ್ರಸ್ತಾಪಿಸಿ, ‘ಮಾರಿಕಾಂಬಾ ದೇವಿಯ ಜಾತ್ರೆ ವೇಳೆ ಭಕ್ತರಿಗೆ ಮೂಲ ಸೌಕರ್ಯ ಒದಗಿಸುವುದು ನಗರಸಭೆಯ ಕರ್ತವ್ಯ. ದೇವಸ್ಥಾನದ ಆಡಳಿತ ಮಂಡಳಿಯಿಂದ ₹55 ಲಕ್ಷ ಪಾವತಿ ಮಾಡಬೇಕೆಂಬ ಆದೇಶ ಸರಿಯಲ್ಲ. ಪ್ರತಿ ಜಾತ್ರೆ ಮುಗಿದ ಬಳಿಕ ಈ ವಿಷಯಕ್ಕಾಗಿ ವೈಮನಸ್ಸು ಉಂಟಾಗುತ್ತಿದೆ’ ಎಂದರು.

ಇದಕ್ಕೆ ಸರ್ವ ಸದಸ್ಯರು ಧ್ವನಿಗೂಡಿಸಿ, ಕಳೆದ ಜಾತ್ರೆಗೆ ಪಾವತಿ ಮಾಡಿದ ಹಣಕ್ಕೆ ಶೇ.10ರಷ್ಟು ಹೆಚ್ಚಿಗೆ ಮಾತ್ರ ಪಡೆಯುವುದಕ್ಕೆ ಸರ್ವಾನುಮತದಿಂದ ಠರಾವು ಮಾಡಲಾಯಿತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ದೇವಾಲಯದ ಪ್ರಮುಖರ ಜತೆ ಚರ್ಚಿಸಿ, ನಿರ್ಣಯ ಕೈಗೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

‘ಬೀದಿ ಬದಿಯಲ್ಲಿ ವ್ಯಾಪಾರಸ್ಥರ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಾದ ಕ್ರಮವಲ್ಲ ಎಂದ ಸದಸ್ಯರು, ನಗರ ವ್ಯಾಪ್ತಿಯ ರಸ್ತೆಗಳ ಹೊಂಡ ದುರಸ್ತಿಗಾಗಿ ಜಲ್ಲಿಕಲ್ಲು, ಮಣ್ಣು ಹಾಕುತ್ತಿದ್ದಾರೆ. ಸಿಮೆಂಟ್ ಮಿಶ್ರಣ ಹಾಕಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.

ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT