ಶಿರಸಿ: ಮಳೆಗಾಲದಲ್ಲಿ ಹೆಚ್ಚುವ ಎಲೆಚುಕ್ಕಿ ಹಾಗೂ ಕೊಳೆ ರೋಗದ ತೀವ್ರತೆ ತಡೆಯುವ ಜತೆ ರೋಗ ಬಾಧೆ ದೂರವಿಡಲು ಬಹುತೇಕ ಅಡಿಕೆ ಕೃಷಿಕರು ವೈಜ್ಞಾನಿಕ ನಿರ್ವಹಣಾ ಪದ್ಧತಿಯ ಮೊರೆ ಹೋಗಿದ್ದಾರೆ.

ಮೂರು ವರ್ಷಗಳಿಂದ ಅಡಿಕೆಗೆ ಮಳೆಗಾಲದ ಸಂದರ್ಭದಲ್ಲಿ ಎಲೆಚುಕ್ಕಿ ರೋಗ ತೀವ್ರವಾಗಿ ಕಾಡುತ್ತಿದೆ. ಜತೆಗೆ, ಪ್ರತಿ ವರ್ಷ ಕೊಳೆ ರೋಗವೂ ರೈತರನ್ನು ಹೈರಾಣಾಗಿಸುತ್ತಿದೆ. ಎಲೆಚುಕ್ಕಿ ಬಾಧೆ ನಿಯಂತ್ರಣಕ್ಕೆ ತೋಟಗಳ ಸಮರ್ಪಕ ನಿರ್ವಹಣೆಯೇ ಮುಖ್ಯ ಎಂಬ ತಜ್ಞರ ಸಲಹೆಯನ್ನು ಈ ಬಾರಿ ಗಂಭೀರವಾಗಿ ಪರಿಗಣಿಸಿರುವ ಬೆಳೆಗಾರರು, ಮುಂಗಾರು ಆರಂಭಕ್ಕೆ ಮುನ್ನ ತೋಟದ ಆರೋಗ್ಯ ಸುಧಾರಣೆ ಕ್ರಮ ಅನುಸರಿಸುತ್ತಿದ್ದಾರೆ.

‘ತೋಟಗಳಲ್ಲಿ ಮಳೆಗಾಲ ಆರಂಭಕ್ಕೆ ಮುನ್ನವೇ ನೀರು ನಿಲ್ಲದಂತೆ ಮಾಡಲು ಬಸಿ ಕಾಲುವೆ ದುರಸ್ತಿ ಮಾಡಲಾಗುತ್ತಿದೆ. ನೀರು ಸರಾಗವಾಗಿ ಹರಿದು ಹೋಗದೆ ಜೌಗು ಉಂಟಾದರೆ ಶಿಲೀಂದ್ರ ರೋಗಗಳು ವೇಗವಾಗಿ ಹರಡುತ್ತವೆ ಎಂಬುದನ್ನು ಅರಿತಿರುವ ಬೆಳೆಗಾರರು, ಹಳೆಯ ಕಾಲುವೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ರಾಸಾಯನಿಕ ಗೊಬ್ಬರದ ಬದಲು ಕೊಟ್ಟಿಗೆ ಗೊಬ್ಬರ, ಹಸಿರೆಲೆ ಹಾಗೂ ಸಾವಯವ ಗೊಬ್ಬರಗಳ ಬಳಕೆ ಹೆಚ್ಚಿದೆ’ ಎನ್ನುತ್ತಾರೆ ತೋಟಗಾರಿಕಾ ತಜ್ಞ ಮಹೇಶ ಹೆಗಡೆ.

‘ಕಳೆದ ವರ್ಷ ಎಲೆಚುಕ್ಕಿ ರೋಗಕ್ಕೆ ತುತ್ತಾಗಿ ಬಿದ್ದಿರುವ ಅಡಿಕೆ ಗರಿಗಳು ಹಾಗೂ ಒಣಗಿದ ಎಲೆಗಳು ತೋಟದಲ್ಲೇ ಉಳಿದರೆ, ಅವು ಮುಂಬರುವ ಮಳೆಗಾಲದಲ್ಲಿ ಶಿಲೀಂದ್ರದ ಮೂಲವಾಗಿ ಮರುಕಳಿಸುತ್ತವೆ. ಈ ಕಾರಣಕ್ಕಾಗಿ ತೋಟವನ್ನು ಸಂಪೂರ್ಣವಾಗಿ ಅಚ್ಚುಕಟ್ಟಾಗಿ ಕಸಮುಕ್ತಗೊಳಿಸುತ್ತಿದ್ದು, ರೋಗಗ್ರಸ್ತ ಗರಿಗಳನ್ನು ಆಯ್ದು ತೋಟದಿಂದ ಹೊರಗೆ ಹಾಕಿ ನಾಶಪಡಿಸಲಾಗುತ್ತಿದೆ. ತಜ್ಞರ ಶಿಫಾರಸಿನಂತೆ ಮುಂಗಾರು ಮಳೆ ಆರಂಭಕ್ಕೆ ಮುನ್ನವೇ ಬೋರ್ಡೋ ದ್ರಾವಣ ಅಥವಾ ಸೂಕ್ತ ಶಿಲೀಂಧ್ರನಾಶಕಗಳನ್ನು ಮರಗಳ ಗರಿಗಳಿಗೆ ತಲುಪುವಂತೆ ಮುಂಜಾಗ್ರತಾ ಸಿಂಪಡನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಸಾಲಕಣಿಯ ಬೆಳೆಗಾರ ಸೀತಾರಾಮ ಹೆಗಡೆ.

ಮಳೆಗಾಲ ಪೂರ್ವದಲ್ಲೇ ತೋಟದ ಪರಿಸರವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವ ಮೂಲಕ ಎಲೆಚುಕ್ಕಿ ರೋಗದ ಸವಾಲನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಿದೆ.
ಗಣೇಶ ಹೆಗಡೆ, ತೋಟಗಾರಿಕೆ ಅಧಿಕಾರಿ

ಸಾಮೂಹಿಕ ಪ್ರಯತ್ನ

‘ಕೇವಲ ಒಬ್ಬರೇ ಕೃಷಿಕರು ತಮ್ಮ ತೋಟವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೂ, ಪಕ್ಕದ ತೋಟಗಳಲ್ಲಿ ರೋಗದ ಮೂಲಗಳಿದ್ದರೆ ಗಾಳಿಯ ಮೂಲಕ ಇಡೀ ಗ್ರಾಮಕ್ಕೆ ಎಲೆಚುಕ್ಕಿ ರೋಗ ಹರಡುವ ಭೀತಿ ಸದಾ ಇರುತ್ತದೆ. ಈ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ತೋಟ ಸಂರಕ್ಷಣೆಗೆ ಬೆಳೆಗಾರರು ಮುಂದಾಗುತ್ತಿದ್ದಾರೆ. ನೆರೆಹೊರೆಯ ಕೃಷಿಕರು ಪರಸ್ಪರ ಸಮಾಲೋಚನೆ ನಡೆಸಿ, ಇಡಿ ಗ್ರಾಮದ ವ್ಯಾಪ್ತಿಯಲ್ಲಿ ಒಂದೇ ನಿರ್ದಿಷ್ಟ ಅವಧಿಯಲ್ಲಿ ಒಟ್ಟಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಏಕಕಾಲಕ್ಕೆ ರೋಗಗ್ರಸ್ತ ಗರಿಗಳ ವಿಲೇವಾರಿ, ಕಳೆ ನಿಯಂತ್ರಣ ಮತ್ತು ಬೋರ್ಡೋ ದ್ರಾವಣದ ಮುಂಜಾಗ್ರತಾ ಸಿಂಪಡನೆ ಕಾರ್ಯಗಳನ್ನು ಮಾಡುತ್ತಿದ್ದಾರೆ’ ಎನ್ನುತ್ತಾರೆ ತೋಟಗಾರಿಕೆ ತಜ್ಞರೊಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.