ಕಾರವಾರ: ‘ಶಿರೂರಿನ ಗುಡ್ಡ ಕುಸಿತದಿಂದ ಉರುಳಿ ಬಿದ್ದ ಮಣ್ಣು, ಕಲ್ಲಿನ ರಾಶಿ ಗಂಗಾವಳಿ ನದಿ ನೀರನ್ನು ನಮ್ಮೂರಿಗೆ ಸೋಕುವಂತೆ ಮಾಡಿದ ಭೀಕರ ಕ್ಷಣ ನೆನೆದರೆ ಈಗಲೂ ಮೈ ನಡುಗುತ್ತಿದೆ. ಘಟನೆ ನಡೆದು ತಿಂಗಳು ಕಳೆದರೂ ಊರಿಗೆ ಕಾಲಿಡಲು ಭಯವಾಗುತ್ತಿದೆ. ಕೆಲವರು ಹೋಮ ಹವನ ಮಾಡಿಸಿಕೊಂಡು ಮನೆಗಳಲ್ಲಿ ವಾಸವಿದ್ದಾರೆ. ಆದರೆ, ನಿದ್ದೆ ಇಲ್ಲದ ರಾತ್ರಿ ಕಳೆಯುವ ಸ್ಥಿತಿ ಎದುರಿಸುತ್ತಿದ್ದಾರೆ’
ಹೀಗೆ ಅಂಕೋಲಾ ತಾಲ್ಲೂಕಿನ ಉಳುವರೆ ಗ್ರಾಮದ ಚಿತ್ರಣ ತೆರೆದಿಟ್ಟರು ಗ್ರಾಮದ ಪ್ರಮುಖ ಜಗದೀಶ ಗೌಡ. ಶಿರೂರಿನ ಗುಡ್ಡ ಕುಸಿತ ದುರಂತ ಸಂಭವಿಸಿ ಒಂದು ತಿಂಗಳು ಕಳೆದಿದೆ. ಗುಡ್ಡದಿಂದ ಹೆದ್ದಾರಿಗೆ ಬಿದ್ದ ಮಣ್ಣಿ ರಾಶಿ ತೆರವುಗೊಳಿಸಲಾಗಿದೆ. ಉಳುವರೆ ಗ್ರಾಮದಲ್ಲಿ ಕುಸಿದು ಬಿದ್ದ ಮನೆಗಳ ಅವಶೇಷಗಳು ಮೂಲೆ ಸೇರಿವೆ. ಆದರೆ, ಅಲ್ಲಿನ ಜನರ ಮನದಲ್ಲಿ ಬೇರೂರಿದ ಭಯವನ್ನು ಹೋಗಲಾಡಿಸುವ ಕೆಲಸ ಆಗಿಲ್ಲ.
ಜುಲೈ 16 ರಂದು ಗಂಗಾವಳಿ ನದಿ ಉಕ್ಕೇರಿ ಬಂದ ಪರಿಣಾಮವಾಗಿ ಉಳುವರೆ ಗ್ರಾಮದ ಆರು ಮನೆಗಳು ನೆಲಸಮವಾಗಿದ್ದವು. 19 ಮನೆಗಳಿಗೆ ತೀವ್ರ ಸ್ವರೂಪದ ಹಾನಿಯುಂಟಾಗಿತ್ತು. ಉಳಿದ ಹತ್ತಾರು ಮನೆಗಳಿಗೆ ಸಣ್ಣ ಪುಟ್ಟ ಹಾನಿಯಾಗಿದ್ದವು.
‘ನೆಲಸಮವಾದ ಮನೆಗಳ ಜನರು ಐದಾರು ಕಿ.ಮೀ ದೂರದ ಮಾದನಗೇರಿಯ ಬಾಡಿಗೆ ಮನೆಗಳಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಕೆಲವರು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಹಗಲಿನ ವೇಳೆ ಮಾತ್ರ ಉಳುವರೆಗೆ ಬರುವ ಅವರು ಗದ್ದೆಯಲ್ಲಿ ಅಳಿದುಳಿದ ಭತ್ತದ ಸಸಿಗಳ ಆರೈಕೆ ಮಾಡುತ್ತಾರೆ. ಸಂಜೆಯ ವೇಳೆ ಊರಿನಿಂದ ದೂರ ಉಳಿಯುತ್ತಾರೆ’ ಎಂದು ಗ್ರಾಮಸ್ಥ ಮಂಜುನಾಥ ಗೌಡ ಹೇಳಿದರು.
‘ಹಾನಿಯಾದ ಮನೆಗಳನ್ನು ಅಲ್ಪಸ್ವಲ್ಪ ದುರಸ್ತಿ ಮಾಡಿಕೊಂಡು ಕೆಲವರು ವಾಸವಿದ್ದಾರೆ. ನದಿ ನೀರಿನ ರಭಸಕ್ಕೆ ಗೋಡೆಗಳಿಗೆ ಉಂಟಾಗಿದ್ದ ಹಾನಿಯ ಪ್ರಮಾಣ ಈಗ ಅರಿವಿಗೆ ಬರುತ್ತಿದೆ. ಹಲವು ಮನೆಗಳ ಗೋಡೆಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿವೆ. ಆದರೂ ಆತಂಕದಲ್ಲೇ ದಿನ ಕಳೆಯುವ ಅನಿವಾರ್ಯತೆ ಇದೆ. ಕೆಲ ಮಕ್ಕಳನ್ನು ಪಾಲಕರು ಬಳಸೆಯ ವಸತಿ ಶಾಲೆಗಳಿಗೆ ಸೇರಿಸಿದ್ದರೆ, ಕೆಲವರು ಕುಮಟಾ, ಅಂಕೋಲಾದಲ್ಲಿರುವ ಸಂಬಂಧಿಕರ ಮನೆಗಳಲ್ಲಿ ಬಿಟ್ಟಿದ್ದಾರೆ’ ಎಂದರು.
ಉಳುವರೆ ಗ್ರಾಮದಲ್ಲಿ ನದಿಯ ಅಂಚಿನಲ್ಲೇ ಇರುವ ಮನೆಗಳನ್ನು ಸ್ಥಳಾಂತರಿಸಿ ಅವರಿಗೆ ಶಾಶ್ವತವಾಗಿ ಸುರಕ್ಷಿತ ನೆಲೆ ಕಲ್ಪಿಸಲು ದೇವಿಗದ್ದೆ ಗ್ರಾಮದಲ್ಲಿ ಜಾಗ ಗುರುತಿಸಲಾಗಿದೆ.ಮಂಕಾಳ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ
ಆಪ್ತ ಸಮಾಲೋಚನೆ ನಡೆಸಲಿ ‘ಶಿರೂರು ಗುಡ್ಡ ಕುಸಿತ ದುರಂತದ ಬಳಿಕ ಗ್ರಾಮಕ್ಕೆ ಎದುರಾದ ಹಾನಿಯನ್ನು ಕಂಡು ಗ್ರಾಮಸ್ಥರು ತಿಂಗಳು ಕಳೆದ ಬಳಿಕವೂ ಬೆಚ್ಚಿಬೀಳುತ್ತಿದ್ದಾರೆ. ಜೀವನಕ್ಕೆ ಆಧಾರವಾಗಿದ್ದ ಕೃಷಿಭೂಮಿ ಮನೆ ಕಳೆದುಕೊಂಡವರ ಸ್ಥಿತಿ ಹೇಳತೀರದಂತಾಗಿದೆ. ಕಷ್ಟಪಟ್ಟು ದುಡಿಮೆ ಮಾಡಿ ಮಗಳಿಗೆ ಮಾಡಿಸಿದ್ದ ಬಂಗಾರಧ ಆಭರಣ ಬಟ್ಟೆ ಸೇರಿದಂತೆ ಮನೆಯಲ್ಲಿದ್ದ ಎಲ್ಲ ಸೌಕರ್ಯವನ್ನೂ ಕಳೆದುಕೊಂಡ ನೀಲು ಗೌಡ ಮಾನಸಿಕವಾಗಿ ಕುಗ್ಗಿದ್ದಾರೆ. ಅವರಂತೆ ಹಲವರಿಗೆ ಇದೇ ಸ್ಥಿತಿ ಉಂಟಾಗಿದೆ. ಉಳುವರೆ ಗ್ರಾಮದ ಜನರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ ಅವರಲ್ಲಿ ಸ್ಥೈರ್ಯ ತುಂಬುವ ಕೆಲಸದ ಅಗತ್ಯವಿದೆ’ ಎಂದು ಗ್ರಾಮಸ್ಥ ಜಗದೀಶ ಗೌಡ ಹೇಳುತ್ತಾರೆ.
ಸ್ಮಶಾನದ ಅಂಚಿನ ಭೂಮಿ ‘ದೇವಿಗದ್ದೆ ಗ್ರಾಮದಲ್ಲಿ ಗುರುತಿಸಲಾದ ಜಿಲ್ಲಾ ಪಂಚಾಯಿತಿಗೆ ಸೇರಿರುವ ಜಾಗಕ್ಕೆ ಹೊಂದಿಕೊಂಡು ಸ್ಮಶಾನ ಭೂಮಿ ಇದೆ. ಅಲ್ಲದೇ ಇದು ಉಳುವರೆಯಿಂದ 2 ಕಿ.ಮೀ ದೂರದಲ್ಲಿದೆ. ಈ ಕಾರಣಕ್ಕೆ ಉದ್ದೇಶಿತ ಜಾಗಕ್ಕೆ ಸ್ಥಳಾಂತರಗೊಳ್ಳಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. 1960ರಲ್ಲಿ ನೆರೆಗೆ ಸಂತ್ರಸ್ತರಾದವರಿಗೆ ಉಳುವರೆ ಗ್ರಾಮದ ಎತ್ತರ ಪ್ರದೇಶದಲ್ಲೇ 35 ಗುಂಟೆಯಷ್ಟು ಜಾಗವನ್ನು ಮೀಸಲಿಟ್ಟಿದ್ದರು. ಆ ಜಾಗ ಸಂತ್ರಸ್ತರು ಬಳಕೆ ಮಾಡದೆ ಖಾಲಿ ಇದೆ. ಅದೇ ಜಾಗವನ್ನು ನೀಡಿದರೆ ಅನುಕೂಲವಾಗಲಿದೆ’ ಎಂದು ಉಳುವರೆ ಗ್ರಾಮದ ಹಲವರು ಅಭಿಪ್ರಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.