ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಗುಡ್ಡಗಾಡು ಪ್ರದೇಶದಲ್ಲಿ ಸಿಕಲ್ ಸೆಲ್ ಹಾವಳಿ

ಜಿಲ್ಲೆಯ 17 ಸಾವಿರಕ್ಕೂ ಹೆಚ್ಚು ಜನರಲ್ಲಿ ಅನುವಂಶೀಯವಾಗಿ ಕಾಯಿಲೆ
Published 13 ಸೆಪ್ಟೆಂಬರ್ 2023, 4:48 IST
Last Updated 13 ಸೆಪ್ಟೆಂಬರ್ 2023, 4:48 IST
ಅಕ್ಷರ ಗಾತ್ರ

ಕಾರವಾರ: ಕೆಲ ಬುಡಕಟ್ಟು ಸಮುದಾಯಗಳ ಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಿಕಲ್ ಸೆಲ್ (ಕುಡುಗೋಲು ಕೋಶ) ಕಾಯಿಲೆ ಜಿಲ್ಲೆಯಲ್ಲಿಯೂ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿರುವ ಶಂಕೆಯನ್ನು ಕೇಂದ್ರ ಆರೋಗ್ಯ ಇಲಾಖೆ ವ್ಯಕ್ತಪಡಿಸಿದೆ.

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯಗಳು ಹೆಚ್ಚಿರುವ ಯಲ್ಲಾಪುರ, ಮುಂಡಗೋಡ, ಹಳಿಯಾಳ, ಅಂಕೋಲಾ ತಾಲ್ಲೂಕಿನ ಪ್ರದೇಶಗಳಲ್ಲಿ ಸಿಕಲ್ ಸೆಲ್ ಪತ್ತೆ ಕಾರ್ಯ ನಡೆಸಬೇಕು. ಸೋಂಕಿತರಿದ್ದರೆ ಅವರಿಗೆ ಚಿಕಿತ್ಸೆ ಒದಗಿಸುವ ಕಾರ್ಯ ನಡೆಯಬೇಕು’ ಎಂದು ಕೇಂದ್ರ ಸಚಿವಾಲಯ ಮೂರು ವರ್ಷಗಳ ಹಿಂದೆ ಸೂಚನೆ ನೀಡಿತ್ತು.

‘ಜಿಲ್ಲೆಯಲ್ಲಿ ಅಂದಾಜು 17 ಸಾವಿರ ಜನರಲ್ಲಿ ಈ ಸೋಂಕು ಇದೆ ಎಂದು ಸರ್ಕಾರದ ವರದಿ ಹೇಳಿದೆ. ಹೀಗಾಗಿ ಮೂರು ವರ್ಷಗಳಿಂದ ಆಯ್ದ ಪ್ರದೇಶಗಳ ಜನರ ರಕ್ತ ಪರೀಕ್ಷೆ ನಡೆಸಲಾಗುತ್ತಿದೆ. ಈವರೆಗೆ 3,846 ಜನರ ರಕ್ಷ ಪರೀಕ್ಷೆ ನಡೆಸಿದ್ದು 180 ಜನರಲ್ಲಿ ಸೋಂಕು ಹರಡಿರುವುದು ದೃಢಪಟ್ಟಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ತಿಳಿಸಿದರು.

‘ಸೋಂಕಿತರ ಪೈಕಿ ಹೆಚ್ಚಿನವರು ಸಿಕಲ್ ಸೆಲ್ ಲಕ್ಷಣ ಹೊಂದಿದ್ದಾರೆಯೆ ಹೊರತು ಕಾಯಿಲೆ ಗಂಭೀರವಾಗಿ ಅವರಿಗೆ ಅಂಟಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಸೋಂಕಿತರಿಗೆ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ. ರಕ್ತ ವರ್ಗೀಕರಣ ಚಿಕಿತ್ಸೆ, ರಕ್ತದ ಅಗತ್ಯತೆ ಇದ್ದವರಿಗೆ ಅವುಗಳನ್ನು ಪೂರೈಸುವ ಕೆಲಸ ನಡೆಯುತ್ತಿದೆ’ ಎಂದೂ ಹೇಳಿದರು.

‘ಆರೋಗ್ಯ ಸಚಿವಾಲಯ ಅಂದಾಜಿಸಿದ ಸಂಖ್ಯೆಯ ಆರನೇ ಒಂದು ಭಾಗದಷ್ಟು ಜನರಿಗೆ ಮಾತ್ರ ಪರೀಕ್ಷೆ ನಡೆದಿದೆ. ಉಳಿದವರ ರಕ್ತಪರೀಕ್ಷೆ ನಡೆಸುವ ಕೆಲಸವೂ ಶೀಘ್ರದಲ್ಲಿ ನಡೆಯಲಿದೆ. ಆಯುಷ್ಮಾನ್ ಭವ ಕಾರ್ಯಕ್ರಮದಡಿ ಗ್ರಾಮೀಣ ಭಾಗದ ಆರೋಗ್ಯ ಉಪಕೇಂದ್ರಗಳ ಮೂಲಕ ಹೆಚ್ಚಿನ ಪ್ರಮಾಣದ ಜನರ ರಕ್ಷತ ತಪಾಸಣೆಯನ್ನು ನಡೆಸಲಾಗುವುದು. ಈ ವೇಳೆ ಜನರ ಮನೆ ಬಾಗಿಲಿನಲ್ಲೇ ಸಿಕಲ್ ಸೆಲ್ ಪತ್ತೆ ಕಾರ್ಯವೂ ನಡೆಯಲಿದೆ’ ಎಂದರು.

ಏನಿದು ಸಿಕಲ್ ಸೆಲ್ ?

‘ಸಿಕಲ್ ಸೆಲ್ ಎಂಬುದು ಅನವಂಶೀಯ ಕಾಯಿಲೆಯಾಗಿದ್ದು ಹೆಚ್ಚಾಗಿ ಸೀಮಿತ ಬುಡಕಟ್ಟು ಸಮುದಾಯಗಳ ಕೆಲ ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸೋಂಕು ಇರುವ ವ್ಯಕ್ತಿಯ ಕೆಂಪು ರಕ್ತದ ಕಣಗಳ ದೋಷದಿಂದ ಕಾಯಿಲೆ ಉಂಟಾಗುತ್ತದೆ. ಈ ಕಣಗಳು ಕುಡುಗೋಲು ಮಾದರಿಯಲ್ಲಿ ರಚನೆಯಾಗುತ್ತವೆ. ಹೀಗಾಗಿ (ಸಿಕಲ್) ಹೆಸರು ಬಂದಿದೆ’ ಎನ್ನುತ್ತಾರೆ ಡಿಎಚ್‍ಒ ಡಾ.ನೀರಜ್ ಬಿ.ವಿ

‘ಕಾಯಿಲೆ ಇರುವ ವ್ಯಕ್ತಿಯ ಕೀಲುಗಳಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುತ್ತದೆ. ಚಿಕಿತ್ಸೆ ಪಡೆಯದಿದ್ದರೆ ಕ್ರಮೇಣ ದೇಹದೊಳಗೆ ಆಂತರಿಕ ರಕ್ತಸ್ರಾವ ಆರಂಭಗೊಳ್ಳುತ್ತದೆ. ರೋಗದ ಅಂತಿಮ ಹಂತದಲ್ಲಿ ಸಾವನ್ನಪ್ಪುವ ಸಾಧ್ಯತೆಯೂ ಇದೆ’ ಎಂದು ವಿವರಿಸಿದರು.

‘ಕಾಯಿಲೆ ಇರುವ ತಂದೆ ತಾಯಿಗಳಿಂದ ಮಗುವಿಗೆ ರೋಗ ಅನುವಂಶೀಯವಾಗಿ ಹರಡುತ್ತದೆ. ಆದರೆ ಇದು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಕಾಯಿಲೆಯ ಗಂಭಿರ ಸ್ಥಿತಿಗೆ ತಲುಪಿದವರು ಅಸ್ಥಿಮಜ್ಜೆ ವರ್ಗೀಕರಣ ಚಿಕಿತ್ಸೆಗೂ ಒಳಪಡಬೇಕಾಗುತ್ತದೆ. ಇದಕ್ಕಾಗಿ ಆಯುಷ್ಮಾನ್ ಭಾರತ ಯೋಜನೆ ಅಡಿ ಗರಿಷ್ಠ ₹7 ಲಕ್ಷದವರೆಗೆ ಸರ್ಕಾರವೇ ಚಿಕಿತ್ಸೆ ವೆಚ್ಚ ಭರಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT