ಶಿರಸಿ: ಗ್ರಾಮ ಪಂಚಾಯಿತಿಗಳ ಜೀವವೈವಿಧ್ಯ ನಿರ್ವಹಣಾ ಸಮಿತಿ ಕಾರ್ಯ ಚಟುವಟಿಕೆಗಳಿಗೆ 15ನೇ ಹಣಕಾಸು ಯೋಜನೆಯಡಿ ಅನುದಾನ ಮೀಸಲಿಟ್ಟಿಲ್ಲ. ಇದರ ಪರಿಣಾಮ ಗ್ರಾಮೀಣ ಜೀವ ವೈವಿಧ್ಯತೆ ಸಂರಕ್ಷಣೆ ಮತ್ತು ಸಂವರ್ಧನೆ ಮಾಡಬೇಕಿದ್ದ ಸಮಿತಿಗಳೇ ನಿಷ್ಕ್ರಿಯವಾಗಿವೆ.
ರಾಜ್ಯದ 6,024ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ 5,300ಕ್ಕೂ ಹೆಚ್ಚು ಕಡೆ ಜೀವವೈವಿಧ್ಯ ನಿರ್ವಹಣಾ ಸಮಿತಿ ರಚಿಸಲಾಗಿದೆ. ಕೆಲವೆಡೆ ರಚನೆ ಕಾರ್ಯ ಪ್ರಗತಿಯಲ್ಲಿದೆ.
ಹಿಂದಿನ ಹಣಕಾಸು ಯೋಜನೆಯಡಿ ಆಯಾ ಪಂಚಾಯಿತಿಗೆ ಬಿಡುಗಡೆಯಾಗುವ ಅನುದಾನದ ಶೇ 5ರಷ್ಟು ಭಾಗವನ್ನು (ರಾಜ್ಯವ್ಯಾಪಿ ವಾರ್ಷಿಕ ಅಂದಾಜು ₹40 ಕೋಟಿಯಿಂದ ₹50 ಕೋಟಿ) ಈ ಸಮಿತಿಗಳಿಗೆ ಮೀಸಲಿಟ್ಟು ರಾಜ್ಯ ಪಂಚಾಯತ್‍ರಾಜ್ ಇಲಾಖೆ ಸುತ್ತೋಲೆ ಹೊರಡಿಸುತಿತ್ತು. ಆದರೆ, 15ನೇ ಹಣಕಾಸು ಯೋಜನೆಯಡಿ ಅನುದಾನ ಮೀಸಲಿಡುವ ಅಂಶವನ್ನೇ ಕೈಬಿಟ್ಟಿದೆ.
‘ನಿರ್ವಹಣಾ ಸಮಿತಿಗಳ ಕಾರ್ಯ ಚಟುವಟಿಕೆಗೆ ಅನುದಾನ ಸಿಗದ ಕಾರಣ ವಿವಿಧ ಚಟುವಟಿಕೆ ಕೈಗೊಳ್ಳಲು ಹಿನ್ನಡೆ ಆಗಿದೆ. ಈಗಾಗಲೇ 200ಕ್ಕೂ ಹೆಚ್ಚು ಸಮಿತಿಗಳು ತಮ್ಮ ಚಟುವಟಿಕೆ ಸ್ಥಗಿತಗೊಳಿವೆ' ಎಂದು ಸಮಿತಿಯ ಪದಾಧಿಕಾರಿಯೊಬ್ಬರು ತಿಳಿಸಿದರು.
ಸಮಿತಿಯು ಒಬ್ಬ ಅಧ್ಯಕ್ಷ ಮತ್ತು ಸ್ಥಳೀಯ ಸಂಸ್ಥೆಯಿಂದ ನಾಮನಿರ್ದೆಶಿತರಾದ ಗರಿಷ್ಠ 6 ಸದಸ್ಯರ ಸಂಯೋಜನೆ ಆಗಿದೆ. ಇದರಲ್ಲಿ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರು ಇರಬೇಕಾದದ್ದು ಕಡ್ಡಾಯ. ಸದಸ್ಯರು ಪರಿಸರದ ಬಗ್ಗೆ ಜ್ಞಾನ ಹೊಂದಿರಬೇಕು ಮತ್ತು ಸ್ಥಳೀಯ ನಿವಾಸಿ ಆಗಿರಬೇಕು. ಸಮಿತಿಯು ‘ಜನತಾ ಜೀವವೈವಿಧ್ಯ ದಾಖಲಾತಿ’ ತಯಾರಿಸಬೇಕು. ಅದರಲ್ಲಿ ಪಂಚಾಯಿತಿ ವ್ಯಾಪ್ತಿಯ ಅರಣ್ಯ, ಕೃಷಿ, ಗಿಡ-ಮರ, ಹುಳು-ಜಂತು, ಪ್ರಾಣಿ-ಪಕ್ಷಿಗಳ ಪ್ರಬೇಧ ಮತ್ತು ತಳಿಗಳ ಮಾಹಿತಿ, ಔಷಧೀಯ ಗಿಡಮೂಲಿಕೆಗಳ ವಿವರ ಎಲ್ಲವನ್ನೂ ದಾಖಲಿಸಬೇಕು.
‘ದಾಖಲಾತಿ ಸಂಗ್ರಹಣೆ ಸೇರಿ ವಿವಿಧ ಚಟುವಟಿಕೆಗೆ ₹ 80 ಸಾವಿರಕ್ಕೂ ಹೆಚ್ಚು ವೆಚ್ಚವಾಗುತ್ತದೆ. ಸರ್ಕಾರ ಅನುದಾನ ನೀಡಿದರೆ ಮಾತ್ರ ಎಲ್ಲವೂ ಸಾಧ್ಯವಾಗುತ್ತದೆ. ಕೆಲ ಕಡೆ ಸ್ಥಳೀಯರ ಆಸಕ್ತಿಯಿಂದ ಉತ್ತಮ ಕಾರ್ಯಗಳು ನಡೆದಿವೆ. ಇನ್ನೂ ಕೆಲ ಕಡೆ ಕಾರ್ಯಗಳು ಸ್ಥಗಿತಗೊಂಡಿವೆ’ ಎಂದು ಶಿರಸಿ ಭಾಗದ ಸಮಿತಿ ಸದಸ್ಯ ರತ್ನಾಕರ ಹೆಗಡೆ ತಿಳಿಸಿದರು.
ಜೀವವೈವಿಧ್ಯ ನಿರ್ವಹಣಾ ಸಮಿತಿ ಚಟುವಟಿಕೆ ನಡೆಸಲು 15ನೇ ಹಣಕಾಸು ಯೋಜನೆಯಡಿ ಅನುದಾನ ಮೀಸಲಿಡಲು ಪಂಚಾಯತ್ ರಾಜ್ ಇಲಾಖೆ ತಕ್ಷಣವೇ ಸುತ್ತೋಲೆ ಹೊರಡಿಸಬೇಕು.-ಅನಂತ ಅಶೀಸರ ಮಾಜಿ ಅಧ್ಯಕ್ಷ ಪಶ್ಚಿಮಘಟ್ಟ ಕಾರ್ಯಪಡೆ
ಸರ್ಕಾರದಿಂದ ಕಡ್ಡಾಯ ನಿರ್ದೇಶನ ಹೆಚ್ಚುವರಿ ಅನುದಾನ ಸಿಕ್ಕರೆ ಮಾತ್ರ ನಿರ್ವಹಣಾ ಸಮಿತಿಗಳನ್ನು ಉಳಿಸಿಕೊಳ್ಳಲು ಸಾಧ್ಯ. ಆದರೆ ಮೂರು ವರ್ಷದಿಂದ ಈ ಕುರಿತು ಯಾವುದೇ ನಿರ್ದೇಶನ ಬಂದಿಲ್ಲ.-ಭಾಸ್ಕರ್ ಶೆಟ್ಟಿ ಅಧ್ಯಕ್ಷ ಯಡಳ್ಳಿ ಗ್ರಾಮ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.