ಶಿರಸಿ: ಗ್ರಾಮ ಮಟ್ಟದಲ್ಲಿ ಅರಣ್ಯ ಹಕ್ಕು ಅರ್ಜಿಗಳ ಪರಿಶೀಲನೆ ಹಾಗೂ ಪುನರ್ ಪರಿಶೀಲನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸೂಚನಾ ಪತ್ರ ಹೊರಡಿಸಲಾಗಿದ್ದು, ಇದರಿಂದ ಈ ಹಿಂದೆ ತಿರಸ್ಕೃತಗೊಂಡಿದ್ದ ಅರ್ಜಿದಾರರಲ್ಲಿ ಆಶಾಭಾವ ಮೂಡಿದೆ.
ಅರಣ್ಯ ಹಕ್ಕು ಕಾಯ್ದೆ ರಾಜ್ಯ ಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಗ್ರಾಮ ಮಟ್ಟದ ಅರಣ್ಯ ಹಕ್ಕು ಸಮಿತಿಯಲ್ಲಿ ಬಾಕಿ ಇರುವ ಅರ್ಜಿಗಳನ್ನು ಶೀಘ್ರವೇ ಪರಿಶೀಲಿಸಿ ವಿಲೇವಾರಿ ಮಾಡುವ ಜತೆ ಗ್ರಾಮ ಮಟ್ಟದ ಅರಣ್ಯ ಹಕ್ಕು ಸಮಿತಿಯಲ್ಲಿ ಪರಿಶೀಲನೆಗೆ ಬಾಕಿ ಇರುವ ಅರ್ಜಿಗಳನ್ನು ಒಂದು ವಾರದೊಳಗಾಗಿ ವಿಲೇವಾರಿ ಮಾಡಲು ಕ್ರಮವಹಿಸುವಂತೆ ಸೂಚಿಸಿ ವರ್ಷಗಳು ಕಳೆದಿವೆ.
ಆದರೆ, ಈವರೆಗೆ ಅರ್ಜಿಗಳ ಪುನರ್ ಪರಿಶೀಲನೆ ಕಾರ್ಯದ ವರದಿ ಸಲ್ಲಿಕೆಯಾಗಿಲ್ಲ. ಇದರ ಜತೆ ಸೂಕ್ತ ದಾಖಲೆಗಳ ಕ್ರೋಡೀಕರಿಸಿದ ಮೇಲ್ಮನವಿಗೆ ಕಾಯುತ್ತಿದ್ದವರಿಗೂ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಅರ್ಜಿಗಳ ಸೂಕ್ತ ವಿಲೇವಾರಿಗೆ ತೀವ್ರ ಹಿನ್ನಡೆಯಾಗಿತ್ತು.
‘ಈ ಹಿಂದೆ ಅರ್ಜಿ ಸಲ್ಲಿಸುವಾಗ ಸೂಕ್ತ ದಾಖಲೆಯಿದ್ದೂ, ಲಗತ್ತಿಸದ ಕಾರಣ ಅಂಥ ಅರ್ಜಿಗಳು ತಿರಸ್ಕೃತವಾಗಿದ್ದವು. ಈಗ ಅಂಥ ಅರ್ಜಿದಾರ ಅತಿಕ್ರಮಣದಾರರಿಗೆ ಉತ್ತಮ ಅವಕಾಶ ಸಿಕ್ಕಂತಾಗಿದೆ’ ಎನ್ನುತ್ತಾರೆ ತಾಲ್ಲೂಕಿನ ಕುಳವೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ.
‘ಅರಣ್ಯ ಅತಿಕ್ರಮಣ ಮಾಡಿಕೊಂಡು ಸಾಗುವಳಿ ಮಾಡುತ್ತಿರುವರಿಗೆ ಮೂರು ತಲೆಮಾರುಗಳ ಹಿನ್ನೆಲೆಯಿದ್ದರೂ ಸರ್ಕಾರ ಕೇಳಿದ ದಾಖಲೆ ಒದಗಿಸಲಾಗದ ಕಾರಣಕ್ಕೆ ಹಲವು ಅರ್ಜಿಗಳು ತಿರಸ್ಕೃತವಾಗಿದ್ದವು.
ಜಿಲ್ಲೆಯಲ್ಲಿ ಇಂತಹ ಪರಿಶೀಲನೆ, ಪುನರ್ ಪರಿಶೀಲನೆಗೆ ಒಟ್ಟು 20,158 ಅರ್ಜಿಗಳು ಬಾಕಿಯಿವೆ. ನಿಗದಿತ ಸಮಯದೊಳಗೆ ಅರ್ಜಿಗಳ ಪರಿಶೀಲನೆ, ಪುನರ್ ಪರಿಶೀಲನೆ ಮಾಡುವಂತೆ ಸಾಕಷ್ಟು ಬಾರಿ ತಿಳಿಸಿದ್ದರೂ ಈವರೆಗೆ ಅದಕ್ಕೆ ಸಂಬಂಧಿತ ಅಂತಿಮ ವರದಿ ಕಚೇರಿಗೆ ಬಂದಿಲ್ಲ. ಇದರಿಂದ ಅರ್ಜಿ ವಿಲೇವಾರಿಗೆ ತೊಡಕಾಗುತ್ತಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಗ್ರಾಮ ಅರಣ್ಯ ಸಮಿತಿಗಳು ಬಹುತೇಕ ನಿಷ್ಕ್ರಿಯವಾಗಿದೆ. ದಾಖಲೆಗಳ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟೀಕರಣವಿಲ್ಲ. ಸೂಕ್ತ ಮಾನದಂಡವಿಲ್ಲ. ಇಂಥ ಸಂದರ್ಭದಲ್ಲಿ ಅರಣ್ಯ ಹಕ್ಕು ತಿರಸ್ಕೃತ ಅರ್ಜಿಗಳ ಪರಿಶೀಲನೆ ಹಾಗೂ ಪುನರ್ ಪರಿಶೀಲನೆಯ ಸೂಚನೆ ಪತ್ರ ಹೊರಡಿಸಿರುವುದು ಕಾಟಾಚಾರಕ್ಕೆ ಎಂಬಂತಾಗುತ್ತದೆ.-ರವೀಂದ್ರ ನಾಯ್ಕ, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ
ತಿರಸ್ಕೃತವಾದ ಅರಣ್ಯ ಹಕ್ಕು ಅರ್ಜಿಗಳನ್ನು ಸರ್ಕಾರಿ ಆದೇಶ ಹಾಗೂ ಚೌಕಟ್ಟಿನ ಪ್ರಕಾರ ನಿಯಮಾನುಸಾರ ಪರಿಶೀಲಿಸಿ ಕೂಡಲೇ ಕ್ರಮಕೈಗೊಂಡು ವರದಿ ನೀಡಲು ಸೂಚಿಸಿದರೂ ಈ ತನಕ ಮಾಹಿತಿ ಸ್ವೀಕೃತವಾಗಿಲ್ಲ. ಹೀಗಾಗಿ ವಾರದೊಳಗಾಗಿ ಕಚೇರಿಗೆ ಮಾಹಿತಿ ನೀಡಲು ಮತ್ತೊಮ್ಮೆ ಸೂಚಿಸಲಾಗಿದೆ.-ಕೇಶವಮೂರ್ತಿ ಇಮ್ಮಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.