ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ವಸತಿ ನಿಲಯದಲ್ಲಿ ‘ವಸತಿಯೇ ಸಮಸ್ಯೆ’

ಸರ್ಕಾರದ ಸೂಚನೆ: ಹೆಚ್ಚುವರಿ ಬಾಲಕಿಯರಿಗೆ ಅವಕಾಶ
Published : 19 ಸೆಪ್ಟೆಂಬರ್ 2024, 5:17 IST
Last Updated : 19 ಸೆಪ್ಟೆಂಬರ್ 2024, 5:17 IST
ಫಾಲೋ ಮಾಡಿ
Comments

ಶಿರಸಿ: ಸಮಾಜ ಕಲ್ಯಾಣ ಇಲಾಖೆ ಅಧೀನದ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಹೆಚ್ಚುವರಿ ಬಾಲಕಿಯರಿಗೆ ಅವಕಾಶ ನೀಡಿದ್ದರಿಂದ ವಿದ್ಯಾರ್ಥಿನಿಯರು ವಿವಿಧ ಸೌಲಭ್ಯಗಳಿಂದ ವಂಚಿತವಾಗುವಂತಾಗಿದೆ. ಇದರಿಂದ ಪ್ರತ್ಯೇಕ ಕಟ್ಟಡದ ಕೂಗು ಹೆಚ್ಚಿದೆ. 

ನಗರದ ಕೋರ್ಟ್ ರಸ್ತೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವಿದೆ. ಇತ್ತೀಚಿನ ವರ್ಷಗಳಲ್ಲಿ ನಿರ್ಮಿಸಿರುವ ವಸತಿ ನಿಲಯದಲ್ಲಿ 26 ಕೊಠಡಿಗಳಿವೆ. ಪ್ರತಿ ಕೊಠಡಿಯಲ್ಲಿ 6-7 ಬಾಲಕಿಯರು ಉಳಿದುಕೊಳ್ಳುವಷ್ಟು ಮಾತ್ರ ಸ್ಥಳಾವಕಾಶವಿದೆ. ಆ ಪ್ರಕಾರ 170 ವಿದ್ಯಾರ್ಥಿನಿಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಪ್ರಸಕ್ತ ವರ್ಷ ಸರ್ಕಾರದ ಸೂಚನೆ ಮೇರೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 206 ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಾಗಿದೆ.

‘ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಸತಿ ನಿಲಯವಿಲ್ಲ. ನಿಗದಿಪಡಿಸಿರುವ ಸಂಖ್ಯೆ ಜತೆಗೆ ಹೆಚ್ಚುವರಿ ಸಂಖ್ಯೆ ವಿದ್ಯಾರ್ಥಿನಿಯರನ್ನು ವಸತಿ ನಿಲಯಗಳಿಗೆ ತೆಗೆದುಕೊಂಡರೂ, ಸರ್ಕಾರ ಮಾತ್ರ ಮೊದಲಿದ್ದ ಸಂಖ್ಯೆಯ ವಿದ್ಯಾರ್ಥಿನಿಯರಿಗಷ್ಟೇ ಸೌಲಭ್ಯ ಒದಗಿಸುತ್ತಿರುವುದರಿಂದ ಹೆಚ್ಚುವರಿ ವಿದ್ಯಾರ್ಥಿನಿಯರು ಸೌಲಭ್ಯದಿಂದ ವಂಚಿತಗೊಳ್ಳುವಂತಾಗಿದೆ‘ ಎಂಬ ದೂರು ವ್ಯಾಪಕವಾಗಿದೆ.

'ವಸತಿ ನಿಲಯ ಸೇರಿದ 150-170 ವಿದ್ಯಾರ್ಥಿನಿಯರಿಗೆ ಮಂಚ, ಹಾಸಿಗೆ, ಹಾಸು–ಹೊದಿಕೆಗಳು ಸರ್ಕಾರದಿಂದ ಪೂರೈಕೆಯಾಗುತ್ತವೆ. ಆದರೆ ಹೆಚ್ಚುವರಿ ಇರುವ 36 ಮಕ್ಕಳು ಚಾಪೆ, ದಿಂಬು, ಜಮಖಾನಾವನ್ನು ಮನೆಯಿಂದ ತಂದುಕೊಂಡಿದ್ದಾರೆ. ಊಟದ ಸಮಸ್ಯೆ ಅಷ್ಟಾಗಿ ಇಲ್ಲದಿದ್ದರೂ ಕಿರಿದಾದ ಜಾಗದಲ್ಲಿ ಮಲಗುವುದು, ಓದುವುದು, ಒತ್ತಡದ ನಡುವೆ ಸ್ನಾನ, ಶೌಚಾಲಯ ಬಳಕೆಯಂಥ ವೇದನೆ ಎದುರಾಗಿದೆ' ಎಂಬುದು ಹೆಸರು ಹೇಳಲಿಚ್ಛಿಸದ ವಸತಿ ನಿಲಯದ ವಿದ್ಯಾರ್ಥಿನಿಯ ಅಳಲಾಗಿದೆ.

'ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದಲ್ಲಿ ಬೇರೆಡೆ 50-60 ವಿದ್ಯಾರ್ಥಿಗಳ  ಸಾಮರ್ಥ್ಯದ ವಸತಿಗೆ ಪೂರಕ  ಬಾಡಿಗೆ ಕಟ್ಟಡ ಒದಗಿಸಲು ಕೇಂದ್ರ ಕಚೇರಿಗೆ ಪ್ರಸ್ತಾವ ಕಳುಹಿಸಲಾಗಿದೆ. ಆದರೆ ಈವರೆಗೆ ಯಾವುದೇ ಸೂಚನೆ ಬರದ ಕಾರಣ ಅನಿವಾರ್ಯವಾಗಿ ಒಂದೇ ವಸತಿ ನಿಯಲದಲ್ಲಿ ಎಲ್ಲ ವಿದ್ಯಾರ್ಥಿನಿಯರನ್ನು ಉಳಿಸಿಕೊಳ್ಳಲಾಗಿದೆ' ಎಂಬುದು ಇಲಾಖೆ ಅಧಿಕಾರಿಗಳು ನೀಡುವ ಸಮಜಾಯಿಷಿ.

'ನಗರದಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ವಸತಿ ನಿಲಯಗಳಿಲ್ಲ. ಹೀಗಾಗಿ ಈ ಸಮುದಾಯದ ವಿದ್ಯಾರ್ಥಿನಿಯರು ಪರಿಶಿಷ್ಟ ಜಾತಿ ವಸತಿ ನಿಲಯಗಳನ್ನೇ ಆಶ್ರಯಿಸಿದ್ದಾರೆ. ಪ್ರಸ್ತುತ 206 ವಿದ್ಯಾರ್ಥಿನಿಯರಲ್ಲಿ 47 ಜನರು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಾಗಿದ್ದಾರೆ. ನಗರದ ಮೆಟ್ರಿಕ್ ನಂತರದ, ಮೆಡ್ರಿಕ್ ಪೂರ್ವ ಬಾಲಕಿಯರಯ, ಬಾಲಕರ ವಸತಿ ನಿಲಯಗಳಲ್ಲಿ ಕೂಡ ಇದೇ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ವಸತಿ ನಿಲಯ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ' ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮಾತಾಗಿದೆ. 

ಈಗಾಗಲೇ ಪ್ರತ್ಯೇಕ ಬಾಡಿಗೆ ಕಟ್ಟಡ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರ ವಸತಿ ನಿಲಯ ಸ್ಥಾಪಿಸುವಂತೆ ಪ್ರಸ್ತಾವ ನೀಡಲಾಗಿದೆ. ಕೇಂದ್ರ ಕಚೇರಿಯ ಒಪ್ಪಿಗೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು
ಕೇಶವಮೂರ್ತಿ ಇಮ್ಮಡಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT