ಶಿರಸಿ: ಇಲ್ಲಿನ ಚೌಕಿಮಠದ ಸಮೀಪದಲ್ಲಿ ಸ್ಥಗಿತಗೊಂಡ ದೂರದರ್ಶನ ಮರುಪ್ರಸಾರ ಕೇಂದ್ರದ ಕಟ್ಟಡವನ್ನು ‘ಸಂಚಾರಿ ಪೊಲೀಸ್ ಠಾಣೆ’ಯಾಗಿ ಬಳಸಿಕೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.
ಅಬಕಾರಿ ಇಲಾಖೆಗೆ ಸೇರಿದ್ದ ಜಾಗದಲ್ಲಿ 1980ರ ದಶಕದಲ್ಲಿ ಸ್ಥಾಪನೆಯಾಗಿದ್ದ ಪ್ರಸಾರ ಭಾರತಿಯ ದೂರದರ್ಶನ ಮರುಪ್ರಸಾರ ಕೇಂದ್ರ 2021ರ ಅಂತ್ಯದಲ್ಲಿ ಸ್ಥಗಿತಗೊಂಡಿತ್ತು. ಆಗ ಜಾಗವನ್ನು ಸುಪರ್ದಿಗೆ ಪಡೆಯಲು ಕಂದಾಯ ಇಲಾಖೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿತ್ತು. ಹಾಲೀ ಇರುವ ಕಟ್ಟಡಗಳನ್ನು ತೆರವುಗೊಳಿಸುವ ಬದಲು ಅಲ್ಲಿ ಗ್ರಾಮಚಾವಡಿ ಸ್ಥಾಪಿಸಲು ಚಿಂತನೆ ನಡೆಸಲಾಗಿತ್ತು. ನಂತರ ವಿವಿಧ ಕಾರಣದಿಂದ ಯಾವುದೇ ಕಚೇರಿ ಇಲ್ಲಿಗೆ ಬಂದಿರಲಿಲ್ಲ.
ನಂತರ ಪೊಲೀಸ್ ಇಲಾಖೆ ಉಪ ಕಾರಾಗೃಹ ಮಾಡಲು ಮುಂದಾಗಿತ್ತಾದರೂ, ಹಳೆಯ ಕಟ್ಟಡವಾದ ಕಾರಣ ಭದ್ರತೆ ದೃಷ್ಟಿಯಿಂದ ಕೈಬಿಟ್ಟಿತ್ತು. ಪ್ರಸ್ತುತ ಸಂಚಾರಿ ಪೊಲೀಸ್ ಠಾಣೆಗೆ ಜಾಗ ಯೋಗ್ಯವಿರುವ ಕಾರಣ ಇಲಾಖೆ ಸುಪರ್ದಿಗೆ ಜಾಗ ನೀಡುವಂತೆ ವರದಿ ಸಲ್ಲಿಸಲು ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
‘ವರ್ಷಗಳ ಕಾಲ ಕಟ್ಟಡ ಬಳಕೆ ಹಾಗೂ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಪ್ರಸ್ತುತ ಯಾವ ಕಚೇರಿಯೂ ಇಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಕಾರಣ ಸಂಚಾರಿ ಪೊಲೀಸ್ ಠಾಣೆಯಾಗಿ ಬಳಸಿಕೊಳ್ಳಲು ಚಿಂತನೆ ಮಾಡಲಾಗಿದೆ’ ಎಂಬುದು ಡಿಎಸ್ಪಿ ಗಣೇಶ ಕೆ.ಎಲ್. ಮಾತಾಗಿದೆ.
‘ಈಗಾಗಲೇ ಸಿಪಿಐ, ಪಿಎಸ್ಐ ಜತೆಗೂಡಿ ಸ್ಥಳ ಪರಿಶೀಲಿಸಲಾಗಿದೆ. ಕಟ್ಟಡದ ಆವರಣವು ಸಂಪೂರ್ಣ ಗಿಡಗಂಟಿಗಳಿಂದ ತುಂಬಿದೆ. ಹಂಚುಗಳು ಒಡೆದು ಕಟ್ಟಡದ ಒಳಗೆ ನೀರು ಸೋರುತ್ತಿದೆ. ತಕ್ಷಣ ನಿರ್ವಹಣೆ ಮಾಡಿದರೆ ಕಚೇರಿಗಳಿಗೆ ಅವಕಾಶ ಆಗುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.