ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ ವಿಳಂಬ?

2021ರ ಬಜೆಟ್‍ನಲ್ಲಿ ಘೋಷಣೆಯಾಗಿದ್ದ ಯೋಜನೆ: ಹೆಚ್ಚುವರಿ ₹3 ಕೋಟಿಗೆ ಪ್ರಸ್ತಾವ
Last Updated 2 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಶಿರಸಿ: ಕಳೆದ ಸಾಲಿನ ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಘೋಷಣೆಯಾಗಿದ್ದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ ಹೆಚ್ಚುವರಿ ಅನುದಾನಕ್ಕೆ ಕಾಯಲಾಗುತ್ತಿದೆ. ಇದರಿಂದ ಕೇಂದ್ರ ಸ್ಥಾಪನೆ ಪ್ರಕ್ರಿಯೆ ವಿಳಂಬಗೊಳ್ಳುವ ಸಾಧ್ಯತೆ ಇದೆ.

2020–21ನೇ ಸಾಲಿನ ಬಜೆಟ್‍ನಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಾಣಕ್ಕೆ ₹ 7 ಕೋಟಿ ಅನುದಾನ ಘೋಷಿಸಲಾಗಿದೆ.ನಗರದಿಂದ 7 ಕಿ.ಮೀ. ದೂರದಲ್ಲಿರುವ ಇಸಳೂರು ಗ್ರಾಮದಲ್ಲಿ ಕೇಂದ್ರ ಸ್ಥಾಪನೆಗೆ ಜಾಗ ಅಂತಿಮಗೊಳಿಸಲಾಗಿದೆ. ಈ ಗ್ರಾಮದ ಸರ್ವೆ ನಂ.45ರಲ್ಲಿರುವ 3 ಎಕರೆ 14 ಗುಂಟೆ ಜಾಗವನ್ನು ಇದಕ್ಕಾಗಿ ಮೀಸಲಿಡಲಾಗಿದೆ.

ಬಜೆಟ್‍ನಲ್ಲಿ ಅನುಮೋದನೆ ದೊರೆತ ವರ್ಷದ ಬಳಿಕ ಜಾಗ ಅಂತಿಮಗೊಳಿಸಲಾಗಿತ್ತು. ಅದಾದ ಬಳಿಕವೂ ಕೇಂದ್ರ ಸ್ಥಾಪನೆ ಪ್ರಕ್ರಿಯೆ ನಿಧಾನಗತಿಯಲ್ಲಿತ್ತು ಎಂಬ ಆರೋಪಗಳಿದ್ದವು. ಕಳೆದ ಕೆಲವು ತಿಂಗಳಿನಿಂದ ವಿಜ್ಞಾನ ಕೇಂದ್ರ ಸ್ಥಾಪನೆಗೆ ಬಿರುಸಿನ ಚಟುವಟಿಕೆ ನಡೆದಿತ್ತು. ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಕೆಲವು ದಿನಗಳ ಹಿಂದೆ ಸ್ಥಳ ಪರಿಶೀಲಿಸಿದ್ದರು.

ಆದರೆ, ‘ಮಾದರಿ ಉಪ ಪ್ರಾದೇಶಿಕ ವಿಜ್ಞಾನ ಕೆಂದ್ರ ಸ್ಥಾಪನೆಗೆ ಕನಿಷ್ಠ ₹ 10 ಕೋಟಿ ಅಗತ್ಯವಿದೆ. ಬಜೆಟ್‍ನಲ್ಲಿ ಘೊಷಣೆಯಾದ ಅನುದಾನದ ಹೊರತಾಗಿ ಹೆಚ್ಚುವರಿ ₹ 3 ಕೋಟಿ ಅಗತ್ಯವಿದ್ದು, ಅದಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಅದು ಬಿಡುಗಡೆಯಾದ ಬಳಿಕ ಕೇಂದ್ರ ಸ್ಥಾಪನೆಗೆ ತಯಾರಿ ನಡೆಯಲಿದೆ’ ಎಂಬ ಮಾಹಿತಿಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ನಗರದ ಕಾಲೇಜು ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ.

‘ಬಜೆಟ್‍ನಲ್ಲಿ ಬಿಡುಗಡೆಯಾದ ಅನುದಾನದಲ್ಲಿ ವಿಜ್ಞಾನ ಕೇಂದ್ರದ ಕಟ್ಟಡಕ್ಕೆ ಹೆಚ್ಚು ಮೀಸಲಿಟ್ಟಿದ್ದಾರೆ. ಕಟ್ಟಡಕ್ಕೆ ಹೆಚ್ಚು ಆದ್ಯತೆ ನೀಡುವ ಬದಲು ಸಂಶೋಧನೆ, ಅಧ್ಯಯನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಿಜ್ಞಾನ ಉಪಕರಣಗಳು, ವಿಜ್ಞಾನ ಮಾದರಿ ವಸ್ತುಗಳ ಖರೀದಿಗೆ ಹೆಚ್ಚು ಅನುದಾನ ಒದಗಿಸಲು ಮಾಹಿತಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಗೆ ಮನವಿ ಮಾಡಲಾಗಿದೆ’ ಎಂದು ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಾಣ ಸಂಬಂಧ ರಚಿಸಲಾದ ಸಮಿತಿಯಲ್ಲಿರುವ ಸದಸ್ಯರೊಬ್ಬರು ತಿಳಿಸಿದರು.

*
ಉಪಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಅಗತ್ಯವಿರುವ ಹೆಚ್ಚುವರಿ ಅನುದಾನ ಬಿಡುಗಡೆ ಸಂಬಂಧ ಶೀಘ್ರವೇ ಬೆಂಗಳೂರಿನಲ್ಲಿ ಉನ್ನತ ಅಧಿಕಾರಿಗಳ ಜತೆ ಚರ್ಚಿಸಲಾಗುವುದು.
-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT