ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಟೋಲ್ ದರ ಹೆಚ್ಚಳಕ್ಕೆ ಅಪಸ್ವರ

ಪೂರ್ಣಗೊಳ್ಳದ ಚತುಷ್ಪಪಥ ಹೆದ್ದಾರಿ ಕಾಮಗಾರಿ:ಏ.1 ರಿಂದ ಶುಲ್ಕ ಏರಿಕೆ
Last Updated 30 ಮಾರ್ಚ್ 2023, 16:24 IST
ಅಕ್ಷರ ಗಾತ್ರ

ಕಾರವಾರ: ‘ತಾಲ್ಲೂಕಿನ ಮಾಜಾಳಿಯಿಂದ ಕುಂದಾಪುರ ಗಡಿಭಾಗದವರೆಗೆ ಚತುಷ್ಪಥ ಹೆದ್ದಾರಿ ನಿರ್ಮಿಸುತ್ತಿರುವ ಐ.ಆರ್.ಬಿ. ಆರು ವರ್ಷ ಕಳೆದರೂ ಕೆಲಸ ಪೂರ್ಣಗೊಳಿಸಿಲ್ಲ. ಆದರೆ ಈಗ ಮೂರನೆ ಬಾರಿಗೆ ಮೂರು ಟೋಲ್‍ಗೇಟ್‍ಗಳಲ್ಲಿ ಶುಲ್ಕ ಏರಿಕೆ ಮಾಡುತ್ತಿದೆ’ ಎಂಬುದು ಕರಾವಳಿ ಭಾಗದ ಜನರಲ್ಲಿ ಅಸಮಾಧಾನ ಸೃಷ್ಟಿಸಿದೆ.

ಏ.1 ರಿಂದ ಅಂಕೋಲಾ ತಾಲ್ಲೂಕಿನ ಬೇಲೆಕೇರಿ, ಕುಮಟಾ ತಾಲ್ಲೂಕಿನ ಹೊಳೆಗದ್ದೆ ಮತ್ತು ಶಿರೂರು ಟೋಲ್‍ಗೇಟ್‍ಗಳಲ್ಲಿ ಸಂಗ್ರಹಿಸುವ ಟೋಲ್ ದರವನ್ನು ಹೆಚ್ಚಳ ಮಾಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸದೆಯೇ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದ ಕಾರಣ ಸಿಟ್ಟಾಗಿದ್ದ ಜನರು ಈಗ ಶುಲ್ಕ ಏರಿಕೆ ಮಾಡಿದ್ದನ್ನು ಖಂಡಿಸಲು ಆರಂಭಿಸಿದ್ದಾರೆ.

‘ಮೂರು ವರ್ಷಗಳ ಹಿಂದೆಯೇ ಕಾಮಗಾರಿ ಪೂರ್ಣಗೊಳಿಸಬೇಕಿದ್ದ ಐ.ಆರ್.ಬಿ. ಈಗಲೂ ಕೆಲಸ ಅರೆಬರೆಯಾಗಿ ಮಾಡಿಟ್ಟಿದೆ. ಕಾರವಾರದಲ್ಲಿ ಸುರಂಗ, ಪ್ಲೈಓವರ್ ಕೆಲಸ ಪೂರ್ಣವಾಗಿಲ್ಲ. ಮುದಗಾ, ಅರ್ಗಾ ಬಳಿ, ಅಂಕೋಲಾ ತಾಲ್ಲೂಕಿನ ಕೆಲವೆಡೆ, ಕುಮಟಾ ಪಟ್ಟಣದಲ್ಲಿಯೂ ಕೆಲಸ ಪೂರ್ಣಗೊಂಡಿಲ್ಲ. ಕೆಲಸ ಮುಗಿಯದೆ ಟೋಲ್ ಸಂಗ್ರಹ ಆರಂಭಿಸಿದ್ದ ಕಂಪನಿ ಈಗ ಏಕಾಏಕಿ ಶುಲ್ಕ ಹೆಚ್ಚಳ ಮಾಡಿರುವುದು ತಪ್ಪು’ ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲಾ ಯೋಜನಾ ನಿರಾಶ್ರಿತರ ಲಾರಿ ಮಾಲಕರು ಮತ್ತು ಕಾರ್ಮಿಕರ ಯೂನಿಯನ್ ಅಧ್ಯಕ್ಷ ನರೇಂದ್ರ ತಳೇಕರ್.

‘ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗಿದೆ. ಚತುಷ್ಪಥ ಹೆದ್ದಾರಿ ನಿರ್ಮಾಣದ ನಂತರವೇ ಅಪಘಾತಗಳ ಪ್ರಮಾಣವೂ ಹೆಚ್ಚಿದೆ. ಸವಾರರ ಸುರಕ್ಷತೆಗೆ ಪರಿಣಾಮಕಾರಿ ಕ್ರಮವಹಿಸಲು ಕಂಪನಿ ಎಡವಿದೆ’ ಎಂದೂ ಆರೋಪಿಸಿದರು.

‘ಈಗಾಗಲೆ 170.98 ಕಿ.ಮೀ. ಉದ್ದದ ರಸ್ತೆ ನಿರ್ಮಾಣವಾಗಿದ್ದು, ಅದಕ್ಕೆ ಕೇಂದ್ರ ಭೂಸಾರಿಗೆ ನಿಯಮಾನುಸಾರವೇ ಶುಲ್ಕ ವಿಧಿಸಲಾಗುತ್ತಿದೆ. ಫಾಸ್‍ಟ್ಯಾಗ್ ಇದ್ದರೆ ಮಾತ್ರವೇ ಪರಿಷ್ಕೃತ ದರ ಅನ್ವಯಿಸಲಿದ್ದು, ನಗದು ನೀಡುವುದಾದರೆ ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ’ ಎಂದು ಎಂದು ಗುತ್ತಿಗೆ ಪಡೆದ ಐ.ಆರ್.ಟೋಲ್‌ವೇಸ್ ಪ್ರೈವೆಟ್ ಲಿ. ಪ್ರಕಟಣೆಯಲ್ಲಿ ತಿಳಿಸಿದೆ.

ಟೋಲ್ ಶುಲ್ಕ ಎಷ್ಟೆಷ್ಟು?
ಬೇಲೆಕೇರಿ ಹಾಗೂ ಹೊಳೆಗದ್ದೆ ಟೋಲ್‌ಗಳಲ್ಲಿ ಇದುವರೆಗೆ ನಾಲ್ಕು ಚಕ್ರ ವಾಹನಗಳಿಗೆ ಏಕಮುಖ ಸಂಚಾರಕ್ಕೆ ₹90, ಒಂದೇ ದಿನದಲ್ಲಿ ಹೋಗಿ ಬರುವುದಕ್ಕೆ ₹135 ಜಿಲ್ಲೆಯ ನೊಂದಣಿಯಾದ ವಾಣಿಜ್ಯ ವಾಹನಗಳಿಗೆ ₹45 ಹಾಗೂ ಮಾಸಿಕ ಪಾಸ್‌ಗೆ ₹3025 ರೂ. ಇತ್ತು.

ಅದನ್ನು ಈಗ ಏಕಮುಖ ಸಂಚಾರಕ್ಕೆ ₹110, ಒಂದೇ ದಿನದಲ್ಲಿ ಹೋಗಿ ಬರಲು ₹165, ಹಾಗೂ ಜಿಲ್ಲೆಯ ನೋಂದಣಿ ವಾಹನಗಳಿಗೆ ₹55, ಮಾಸಿಕ ಪಾಸ್ ದರ ಬೇಲೆಕೇರಿಯಲ್ಲಿ ₹3690, ಹೊಳೆಗದ್ದೆಯಲ್ಲಿ ₹3615 ಗೆ ಏರಿಕೆ ಮಾಡಲಾಗಿದೆ.

ಲಘು ವಾಣಿಜ್ಯ ವಾಹನಗಳಿಗೆ ಬೇಲೆಕೇರಿಯಲ್ಲಿ ಏಕ ಮುಖ ಸಂಚಾರಕ್ಕೆ ₹140ರ ಬದಲು ₹175, ದ್ವಿಮುಖ ಸಂಚಾರಕ್ಕೆ ₹215 ಬದಲಾಗಿ ₹260, ಸ್ಥಳೀಯ ವಾಹನಗಳಿಗೆ ₹70 ದರವನ್ನು ₹85 ಹಾಗೂ ಪಾಸ್‌ ದರವನ್ನು ₹ 4760ರ ಬದಲಾಗಿ ₹5795 ಕ್ಕೆ ಹೆಚ್ಚಿಸಲಾಗಿದೆ. ಹೊಳೆಗದ್ದೆಯಲ್ಲಿ ಇದುವರೆಗೆ ಬೇಲೆಕೇರಿಯ ದರವೇ ಇದ್ದು, ಏಕಮುಖ ಸಂಚಾರಕ್ಕೆ ₹170, ದ್ವಿಮುಖಕ್ಕೆ ₹255, ಸ್ಥಳೀಯ ವಾಹನಗಳಿಗೆ ₹85, ಪಾಸ್‌ಗೆ ₹5715 ನಿಗದಿ ಮಾಡಲಾಗಿದೆ.

ಬಸ್ ಮತ್ತು ಟ್ರಕ್‌‍ಗೆ ಏಕಮುಖ ಸಂಚಾರಕ್ಕೆ ₹290ರ ಬದಲು ₹360, ದ್ವಿಮುಖ ಸಂಚಾರಕ್ಕೆ ₹440 ರಿ ₹535, ಸ್ಥಳೀಯ ವಾಹನಗಳಿಗೆ ₹145 ರಿಂದ ₹180 ಕ್ಕೆ ಹೆಚ್ಚಿಸಲಾಗಿದೆ. ಮಾಸಿಕ ಪಾಸ್ ದರ ₹11,930 ಕ್ಕೆ ಏರಿಕೆಯಾಗಿದೆ. ಹೊಳೆಗದ್ದೆಯಲ್ಲಿ ಏಕ ಮುಖ ಸಂಚಾರಕ್ಕೆ ₹355, ಇಡೀ ದಿನಕ್ಕೆ ₹530, ಜಿಲ್ಲೆಯ ವಾಹನಗಳಿಗೆ ₹175 ಹಾಗೂ ಪಾಸ್‌ಗೆ ₹11,930 ದರ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT