ಕಾರವಾರ: ಆಧುನೀಕತೆಗೆ ಒಗ್ಗಿಕೊಳ್ಳುತ್ತಿರುವ ಜನರು ಪಾರಂಪರಿಕ ಆಚರಣೆ, ಸಾಮಗ್ರಿಗಳನ್ನು ಮೂಲೆಗೆ ತಳ್ಳುತ್ತಿರುವ ದೂರು ನಿತ್ಯವೂ ಹಿರಿಯರ ಬಾಯಲ್ಲಿ ಕೇಳುತ್ತಲೇ ಇರುತ್ತದೆ. ಪರಂಪರಾಗತವಾಗಿ ರೂಢಿಯಲ್ಲಿರುವ ಆಚರಣೆಯನ್ನು ಜೀವಂತವಿರಿಸಿಕೊಳ್ಳಲು ಶ್ರಮಿಸುವವರಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಕಾಣಸಿಗುತ್ತಾರೆ. ಅಂತಹವರ ಸಾಲಿನಲ್ಲಿ ತಾಲ್ಲೂಕಿನ ಶಿರವಾಡದ ಮೋಹನ ಶಿರವಾಡಕರ್ ಕೂಡ ಒಬ್ಬರು.
ಒಂದು ಕಾಲದಲ್ಲಿ ನಗರ, ಗ್ರಾಮಾಂತರ ಪ್ರದೇಶದಲ್ಲಿ ಪಾರಂಪರಿಕ ವಾದ್ಯಗಳ ಪಾರುಪತ್ಯವಿತ್ತು. ಡೋಲು, ಚರ್ಮದ ವಾದ್ಯ, ಗುಮಟೆ ಪಾಂಗ್, ಹೀಗೆ ಹಲವು ಬಗೆಯ ಸಂಗೀತ ಸಾಮಗ್ರಿಗಳನ್ನು ಮನೆಯಲ್ಲಿಯೇ ಸಿದ್ಧಪಡಿಸಿ ಅವುಗಳನ್ನು ನುಡಿಸಿ ಮನರಂಜನೆ ಒದಗಿಸುವ ಕೆಲಸ ನಡೆಯುತ್ತಿತ್ತು. ಧಾರ್ಮಿಕ ಕಾರ್ಯಕ್ರಮ, ಉತ್ಸವ, ವಿಶೇಷ ಆಚರಣೆಗಳ ವೇಳೆ ವಿಶೆಷ ಸ್ಥಾನ ಪಡೆಯುತ್ತಿದ್ದ ವಾದ್ಯಗಳು ಈಗ ಮೂಲೆ ಸೇರಿ ಹಲವು ವರ್ಷಗಳೇ ಕಳೆದಿವೆ. ಆದರೂ, ಅವುಗಳನ್ನು ಮತ್ತೆ ಮುನ್ನಲೆಗೆ ತರಬೇಕು ಎಂಬ ಉತ್ಸಾಹದಲ್ಲಿ ಕೆಲಸ ಮಾಡುತ್ತಿರುವವರ ಪೈಕಿ ಮೋಹನ ಕೂಡ ಒಬ್ಬರಾಗಿದ್ದಾರೆ. ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಆಚರಣೆ ನಡೆಯಲಿದ್ದು ಇದಕ್ಕಾಗಿ ಗುಮಟೆ ಪಾಂಗ್ ಎಂಬ ಸಾಂಪ್ರದಾಯಿಕ ವಾದ್ಯ ತಯಾರಿಕೆಯಲ್ಲಿ ಅವರು ನಿರತರಾಗಿದ್ದಾರೆ.
ಮಣ್ಣಿನ ಮಡಕೆಗೆ ಎರಡೂ ಬದಿಯಲ್ಲಿಯೂ ಪ್ರಾಣಿಗಳ ಚರ್ಮ ಕಟ್ಟಿ ಸಿದ್ಧಪಡಿಸುವ ವಾದ್ಯಕ್ಕೆ ಗುಮಟೆ ಪಾಂಗ್ ಎನ್ನುತ್ತಾರೆ. ಜಿಲ್ಲೆಯ ಕರಾವಳಿ ಭಾಗದಲ್ಲಿ, ಜೊಯಿಡಾ ತಾಲ್ಲೂಕಿನಲ್ಲಿ ಈ ವಾದನಕ್ಕೆ ಬೇಡಿಕೆ ಹೆಚ್ಚು. ಹಬ್ಬದ ಹಿನ್ನೆಲೆಯಲ್ಲಿ ಜನರ ಬೇಡಿಕೆಗೆ ತಕ್ಕಷ್ಟು ವಾದ್ಯ ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ.
‘ಸಾಂಪ್ರದಾಯಿಕ ಗುಮಟೆ ಪಾಂಗ್‍ಗೆ ಹಬ್ಬದ ವೇಳೆ ಈಗಲೂ ಬೇಡಿಕೆ ಕಡಿಮೆ ಆಗಿಲ್ಲ. ಈ ವಾದನ ಸಿದ್ಧಪಡಿಸಲು ಉಡದ ಚರ್ಮದ ಅಗತ್ಯವಿದೆ. ಆದರೆ ಈಗ ಅವುಗಳ ಲಭ್ಯತೆ ಇಲ್ಲ. ಹೀಗಾಗಿ ಒಂದೋ ಹಳೆಯ ವಾದನಗಳಲ್ಲಿರುವ ಚರ್ಮಗಳನ್ನೇ ಪುನಃ ಹದಗೊಳಿಸಿ ವಾದ್ಯಕ್ಕೆ ಬಳಸಬೇಕಾಗುತ್ತಿದೆ. ಇಲ್ಲವೆ ಕುರಿಯ ಚರ್ಮಗಳನ್ನು ಬಳಸಿ ತಯಾರಿಕೆ ಮಾಡಲಾಗುತ್ತದೆ’ ಎನ್ನುತ್ತಾರೆ ಮೋಹನ ಶಿರವಾಡಕರ್.
‘ಈಗಿನ ತಲೆಮಾರಿನ ಯುವಕರಿಗೆ ಗುಮಟೆ ಪಾಂಗ್ ಮಹತ್ವದ ಅರಿವಿಲ್ಲ. ಹಿರಿಯರು ಅದನ್ನು ಸರಿಯಾಗಿ ತಿಳಿಸುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಬಗೆಬಗೆಯ ಗುಮಟೆ ಸಿದ್ಧಪಡಿಸಿ ಪರಿಚಯಸ್ಥರಿಗೆ ಕಡಿಮೆ ದರದಲ್ಲಿ ಒದಗಿಸುತ್ತೇನೆ. ಹಬ್ಬದ ವೇಳೆ ಯುವಕರಿಗೆ ಅದರ ಮಹತ್ವದ ಬಗ್ಗೆಯೂ ತಿಳಿಸುವ ಕೆಲಸ ಮಾಡುತ್ತೇವೆ. ವರ್ಷಕ್ಕೆ ಸರಾಸರಿ 40 ರಿಂದ 50 ಗುಮಟೆ ಪಾಂಗ್ ತಯಾರಿಸಿಕೊಡಲಾಗುತ್ತಿದೆ’ ಎನ್ನುತ್ತಾರೆ ಅವರು.
ಗುಮಟೆ ಪಾಂಗ್ ಚರ್ಮದ ಡೋಲಕ್ ಸೇರಿ ಹಲವು ಪಾರಂಪರಿಕ ವಾದ್ಯಗಳ ಬಳಕೆಗೆ ಈಗಿನ ತಲೆಮಾರು ಆಸಕ್ತಿ ತೋರಿದರೆ ಅವುಗಳು ನಶಿಸಿಹೋಗದಂತೆ ನೋಡಿಕೊಳ್ಳಬಹುದುಮೋಹನ ಶಿರವಾಡಕರ್ ಗಮಟೆ ಪಾಂಗ್ ತಯಾರಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.