ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಡೇಲಿ: ಟ್ರಕ್ ಟರ್ಮಿನಲ್ ನಿರ್ಮಾಣ ನನೆಗುದಿಗೆ

ಅಡಿಗಲ್ಲು ಹಾಕಿ ಎರಡೂವರೆ ವರ್ಷ ಕಳೆದರೂ ಶುರುವಾಗದ ಕಾಮಗಾರಿ
Last Updated 22 ನವೆಂಬರ್ 2022, 4:46 IST
ಅಕ್ಷರ ಗಾತ್ರ

ದಾಂಡೇಲಿ: ನಗರದ ಹಳಿಯಾಳ ರಸ್ತೆಯಲ್ಲಿ ಮೂರು ಎಕರೆ ಜಾಗದಲ್ಲಿ ನಿರ್ಮಾಣವಾಗಬೇಕಿದ್ದ ಟ್ರಕ್ ಟರ್ಮಿನಲ್ ಕಾಮಗಾರಿ ನನೆಗುದಿಗೆ ಬಿದ್ದಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ನಿಲ್ಲುವ ಟ್ರಕ್‌ಗಳಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಮುಂದುವರಿದಿದೆ.

ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದ ಅಧ್ಯಕ್ಷರ ನೇತೃತ್ವದಲ್ಲಿ ಸುಮಾರು ಎರಡೂವರೆ ವರ್ಷಗಳ ಹಿಂದೆ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಯಿತು. ಆದರೆ, ಕಾಮಗಾರಿ ಇನ್ನೂ ಆರಂಭವಾಗದಿರುವುದು ಟ್ರಕ್ ಮಾಲೀಕರ ಹಾಗೂ ಚಾಲಕರ ಅಸಮಾಧಾನಕ್ಕೆ ಕಾರಣವಾಗಿದೆ.

ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ನ ಸರಕು ಸಾಗಾಣಿಕೆ ಸೇರಿದಂತೆ ಹಲವು ಕೆಲಸಗಳಿಗಾಗಿ ಬಂದು ಹೋಗುವ ಲಾರಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕಾಗದ ಕಾರ್ಖಾನೆಯ ಆವರಣದಲ್ಲಿ ಪಾರ್ಕಿಂಗ್ ಜಾಗ ತುಂಬಿ, ಸಾಕಷ್ಟು ವಾಹನಗಳನ್ನು ಹೊರಗಡೆ ಪಾರ್ಕಿಂಗ್ ಮಾಡುವ ಅನಿವಾರ್ಯತೆ ಉಂಟಾಗುತ್ತದೆ.

ನಗರದ ಜನನಿಬಿಡ ಪ್ರಮುಖ ಪ್ರದೇಶಗಳಲ್ಲಿ, ರಸ್ತೆಗಳಲ್ಲಿ ಟ್ರಕ್ ನಿಲ್ಲುವುದರಿಂದ ಸಂಚಾರಕ್ಕೆ ಅಡ್ಡಿಯಾಗಿ ಸಣ್ಣ ಪುಟ್ಟ ಅಪಘಾತಕ್ಕೆ ಕಾರಣವಾಗಿದೆ. ಹಾಗಾಗಿ ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದವರಿಗೆ ಪ್ರಸ್ತಾವ ಸಲ್ಲಿಸಿ ಮಂಜೂರಾತಿ ಪಡೆಯಲಾಗಿತ್ತು. ನಗರಸಭೆಯ ಜಾಗವನ್ನು ನಿಗಮಕ್ಕೆ ಹಸ್ತಾಂತರಿಸಲಾಗಿತ್ತು.

ನಿಗಮದಿಂದ ಈ ಕಾಮಗಾರಿಗೆ ಸುಮಾರು ₹ 1.5 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಟ್ರಕ್ ಟರ್ಮಿನಲ್ ನಿಗಮದ ಅಧ್ಯಕ್ಷರು ಸ್ಥಳ ಪರಿಶೀಲನೆ ನಡೆಸಿ, ಅಡಿಗಲ್ಲು ಹಾಕಿದ್ದರು. ಇನ್ನೇನು ಟ್ರಕ್ ಟರ್ಮಿನಲ್ ನಿರ್ಮಾಣ ಆಗುತ್ತದೆ ಎಂದು ಟ್ರಾನ್ಸ್‌ಪೋರ್ಟ್ ಸಂಘದವರು ಭಾವಿಸಿದ್ದರು. ಆದರೆ, ಕಾಮಗಾರಿ ನನೆಗುದಿಗೆ ಬಿದ್ದಿದೆ.

ನಗರಸಭೆ ನೀಡಿದ ಜಾಗದ ಗಡಿ ಗುರುತಿಸಿ, ಸಮತಟ್ಟು ಮಾಡುವ ಕೆಲಸವಾಗಲೀ ಅಥವಾ ಮೂಲ ಸೌಕರ್ಯ ಒದಗಿಸುವ ಕೆಲಸವಾಗಲೀ ನಡೆದಿಲ್ಲ. ಪೇಪರ್ ಮಿಲ್‌ನ ಪ್ರವೇಶದ ಗೇಟ್‌ನಿಂದ ಹಳಿಯಾಳ ರಸ್ತೆಯುದ್ದಕ್ಕೂ ಹಾಗೂ ಬರ್ಚಿ ರಸ್ತೆ, ಅಂಬೇವಾಡಿಯ ಗಣಪತಿ ಮಂದಿರದ ಹತ್ತಿರ ಟ್ರಕ್‌ಗಳನ್ನು ವಾರಗಟ್ಟಲೆ ನಿಲ್ಲಿಸಲಾಗುತ್ತದೆ. ಟ್ರಕ್ ಚಾಲಕರು ನಿಲ್ಲಿಸಿದ ಸ್ಥಳದಲ್ಲೇ ನಿತ್ಯಕರ್ಮಗಳನ್ನು ಮಾಡುತ್ತಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡುವ ಇತರ ವಾಹನಗಳ ಸುಗಮ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ.

‘ಟ್ರಕ್ ಟರ್ಮಿನಲ್ ನಿರ್ಮಾಣ ಅತಿ ಅವಶ್ಯವಾಗಿದ್ದು, ಈ ಕುರಿತು ಸ್ಥಳೀಯ ಶಾಸಕರ ಗಮನಕ್ಕೆ ತರಲಾಗಿದೆ. ಎರಡು, ಮೂರು ಬಾರಿ ವಿಧಾನಸೌಧದ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ನೀಡಲಾಗಿದೆ. ನಗರದಲ್ಲಿ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಸಹಕರಿಸಬೇಕು. ಟ್ರಕ್ ಚಾಲಕರ ಹಿತ ಕಾಪಾಡಲು ಸಹಕರಿಸಬೇಕು’ ಎಂದು ದಾಂಡೇಲಿ ಟ್ರಾನ್‌ಪೋರ್ಟ್ ಸಂಘದ ಅಧ್ಯಕ್ಷ ದಿನೇಶ ಹಲದುಲಕರ ಹೇಳಿದರು.

ಅನುದಾನದ ನಿರೀಕ್ಷೆ:

‘ನಿರೀಕ್ಷಿತ ₹ 7 ಕೋಟಿ ಅನುದಾನ ಬಿಡುಗಡೆ ನಂತರ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಇದಕ್ಕಿಂತ ಹೆಚ್ಚಿನ ಅನುದಾನ ಬಂದರೆ ಇನ್ನಷ್ಟು ಮೂಲ ಸೌಕರ್ಯ ಅಭಿವೃದ್ಧಿ ಮಾಡಲು ಸಾಧ್ಯ. ಈ ಉದ್ದೇಶಿತ ಜಾಗ ಸಮತಟ್ಟು ಮಾಡಲು ನಗರಸಭೆಯಿಂದ ಮಣ್ಣು ಹಾಕುವ ಕೆಲಸ ಪ್ರಗತಿಯಲ್ಲಿದೆ’ ಎಂದು ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT