ದಾಂಡೇಲಿ: ಮಂಡ್ಯದಲ್ಲಿ ಡಿಸೆಂಬರ್ 20, 21, 22 ರಂದು ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ರಾಜ್ಯದಾದ್ಯಂತ ಕನ್ನಡದ ರಥ ಸಂಚರಿಸಲಿದ್ದು ಈ ಕನ್ನಡದ ರಥಕ್ಕೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿರುವ ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ ಸೆ.22ರಂದು ಚಾಲನೆ ನೀಡಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ತಿಳಿಸಿದ್ದಾರೆ.
ನಾಡ ದೇವಿ ಭುವನೇಶ್ವರಿಯ ದೇಗುಲ ಇರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿ ಮಾತ್ರ. ಹಾಗಾಗಿ ಈ ಭುವನಗಿರಿಯ ನಾಡದೇವಿಯ ಸನ್ನಿಧಿಯಲ್ಲಿ ಕನ್ನಡ ರಥಕ್ಕೆ ಚಾಲನೆ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಭೀಮಣ್ಣ ನಾಯ್ಕ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ರಥ ಸಂಚರಿಸುವ ಮಾರ್ಗ ಸೆ. 22 ರಂದು ಸಿದ್ದಾಪುರದಲ್ಲಿ ಉದ್ಘಾಟನೆಗೊಂಡು ಹೊರಡುವ ಕನ್ನಡ ರಥ ಮಧ್ಯಾಹ್ನ 3 ಗಂಟೆಗೆ ಹೊನ್ನಾವರಕ್ಕೆ ತಲುಪಿ ಅಲ್ಲಿಂದ ಸಂಜೆ 5ಗಂಟೆಗೆ ಕುಮಟಾ ಸೇರಲಿದೆ. ಸೆ. 23ರಂದು ಬೆಳಿಗ್ಗೆ 10 ಗಂಟೆಗೆ ಅಂಕೋಲಾಕ್ಕೆ ತಲುಪುವ ರಥ ಮಧ್ಯಾಹ್ನ 12 ಗಂಟೆಗೆ ಕಾರವಾರಕ್ಕೆ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 3 ಗಂಟೆಗೆ ಗೋವಾ ಗಡಿ ಕಾಣಕೋಣದವರೆಗೆ ರಥ ಮುಂದುವರೆದು ರಾತ್ರಿ ಜೋಯಿಡಾದಲ್ಲಿ ವಾಸ್ತವ್ಯ ಮಾಡಲಿದೆ. ಸೆ. 24ರಂದು ಜೋಯಿಡಾದಿಂದ ಮುಂದುವರೆದು ಬೆಳಿಗ್ಗೆ 11.30ಕ್ಕೆ ದಾಂಡೇಲಿ ಮಧ್ಯಾಹ್ನ 4 ಗಂಟೆಗೆ ಹಳಿಯಾಳಕ್ಕೆ ಸಾಗಲಿದೆ. ಹಳಿಯಾಳದಲ್ಲಿ ವಾಸ್ತವ್ಯ ಮಾಡಿ ಸೆ.25 ರಂದು ಬೆಳಿಗ್ಗೆ 11 ಗಂಟೆಗೆ ಯಲ್ಲಾಪುರಕ್ಕೆ ಮಧ್ಯಾಹ್ನ 3 ಗಂಟೆಗೆ ಶಿರಸಿಗೆ ರಥ ತಲುಪಿ ಉತ್ತರ ಕನ್ನಡ ಜಿಲ್ಲೆಯ ರಥ ಸಂಚಾರ ಸಂಪನ್ನವಾಗಲಿದೆ. ಕನ್ನಡ ರಥ ಹಾನಗಲ್ ಮಾರ್ಗವಾಗಿ ಹಾವೇರಿ ಜಿಲ್ಲೆಗೆ ಮುಂದುವರೆಯಲಿದೆ ಎಂದು ಎಂದು ತಿಳಿಸಿರುವ ಬಿ.ಎನ್. ವಾಸರೆ ಪ್ರತೀ ತಾಲ್ಲೂಕಿಗೂ ಕನ್ನಡ ರಥ ಆಗಮಿಸಿದ ಸಂದರ್ಭದಲ್ಲಿ ಆಯಾ ತಾಲ್ಲೂಕುಗಳ ತಹಶೀಲ್ದಾರ್ ನೇತೃತ್ವದಲ್ಲಿ ಅವರು ನಿಗದಿಗೊಳಿಸಿದ ಸ್ಥಳದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.