ವಿಶ್ವೇಶ್ವರ ಗಾಂವ್ಕರ್
ಯಲ್ಲಾಪುರ: ತಾಲ್ಲೂಕು ಕೇಂದ್ರದಿಂದ 20 ಕಿ.ಮೀ ದೂರದಲ್ಲಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ವಜ್ರಳ್ಳಿ ಗ್ರಾಮ ಪಂಚಾಯಿತಿ ಭೂಕುಸಿತದಿಂದ ಇನ್ನೂ ಚೇತರಿಸಿಕೊಂಡಿಲ್ಲ.
2021ರ ಜುಲೈ ತಿಂಗಳಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಚೆ, ಬೀಗಾರ, ಕೋಮಾರಕುಂಬ್ರಿ, ತಳಕೆಬೈಲ್ ಹಾಗೂ ಹೊನ್ನಗದ್ದೆಯಲ್ಲಿ ಭೂಕುಸಿತ ಸಂಭವಿಸಿ ಅನೇಕರ ಬದುಕು ಅತಂತ್ರವಾಗಿತ್ತು.
ಭೂಕುಸಿತ ಸಂಭವಿಸಿದ ವಾರದೊಳಗೇ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳಚೆಗೆ ಭೇಟಿ ನೀಡಿದ್ದರಾದರೂ ಸರ್ಕಾರದಿಂದ ಪುನರ್ವಸತಿಯಾಗಲಿ, ಸೂಕ್ತ ಪರಿಹಾರವಾಗಲಿ ಇದುವರೆಗೂ ದೊರೆತಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಭೂಕುಸಿತದ ಅವಘಡದ ಬಳಿಕ ಸುಧಾರಿಸಿಕೊಂಡು ಊರಿನಲ್ಲಿಯೇ ಬದುಕು ಸಾಗಿಸುತ್ತಿರುವವರಿಗೆ ನೀರು, ರಸ್ತೆ ಮುಂತಾದ ಮೂಲಭೂತ ಸೌಲಭ್ಯದ ಕೊರತೆ ಬಾಧಿಸಿದೆ. ದುಡಿಯುವ ಮಕ್ಕಳು ಹೊರಗಡೆ ಇರುವ ಕಾರಣ ಕೆಲ ಹಿರಿಯರು ಪಟ್ಟಣ ಸೇರಿಕೊಂಡಿದ್ದಾರೆ. ಇಲ್ಲಿದ್ದ ಏಕಮಾತ್ರ ಸರಕಾರಿ ಪ್ರೌಢಶಾಲೆ ಶೂನ್ಯ ಹಾಜರಾತಿಯ ಕಾರಣ ಬೇರೆಡೆ ಸ್ಥಳಾಂತರವಾಗಿದೆ. ಗ್ರಾಮದ ಅನೇಕರಿಗೆ ವೈದಿಕ ಶಿಕ್ಷಣ ನೀಡಿದ್ದ ಶಾರದಾಂಬಾ ಸಂಸ್ಕೃತ ಪಾಠಶಾಲೆಯೂ ಊರಿನಿಂದ ಯಲ್ಲಾಪುರಕ್ಕೆ ಸ್ಥಳಾಂತರವಾಗಿದೆ. ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯೂ ಹಾಜರಾತಿಯ ಕೊರತೆ ಎದುರಿಸುತ್ತಿದೆ.
‘ತಳಕೆಬೈಲ್‌ನಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ಕೆಲ ದಿನ ಕೈಗಾ-ಇಳಕಲ್ ರಾಜ್ಯ ಹೆದ್ದಾರಿ ಬಂದ್ ಆಗಿತ್ತು. ಸದ್ಯ ಬದಲಿ ರಸ್ತೆ ನಿರ್ಮಿಸಲಾಗಿದೆ. ಆದರೆ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಪುನಃ ಕುಸಿತ ಸಂಭವಿಸದಂತೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ಮತ್ತೆ ಕುಸಿದರೆ ಕೆಳಭಾಗದ ಕೋಮಾರಕುಂಬ್ರಿ ಅಪಾಯಕ್ಕೆ ಸಿಲುಕಲಿದೆ. ಹೊನ್ನಗದ್ದೆರಸ್ತೆ ಗಿಡಗಾರಿ ಮೇಲ್ಬಾಗದಲ್ಲಿ ಕುಸಿದಿದ್ದು ಇನ್ನಷ್ಟು ಕುಸಿದರೆ ರಸ್ತೆ ಸಂಪರ್ಕ ಕಡಿದುಕೊಳ್ಳುವ ಅಪಾಯವಿದೆ’ ಎನ್ನುತ್ತಾರೆ ಕಳಚೆ ಗ್ರಾಮಸ್ಥ ಶ್ಯಾಮ್ ಹೆಗಡೆ.
‘ಹಿಂದುಳಿದ ಸಿದ್ದಿ ಜನಾಂಗದವರೇ ಹೆಚ್ಚಾಗಿ ವಾಸಿಸುವ ಕಬ್ಬಿನಕುಂಬ್ರಿ ರಸ್ತೆ ಸಂಪೂರ್ಣ ಹಾಳಾಗಿದ್ದು ಇಲ್ಲಿ ಕಳೆದ ಎರಡು ವರ್ಷದಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಗ್ರಾಮದ ಜನರು 8–10 ಕಿ.ಮೀ ನಡೆಯಬೇಕು ಅಥವಾ ಖಾಸಗಿ ವಾಹನ ಆಶ್ರಯಿಸಬೇಕು. ಸೆಳೆಮನೆ ಕ್ರಾಸ್‌ನಿಂದ ಬಿಡಾರಕ್ಕೆ ಹೋಗುವ ರಸ್ತೆ ಸೇರಿದಂತೆ ಹೆಚ್ಚಿನ ಒಳ ರಸ್ತೆಗಳು ಹಾಳಾಗಿದ್ದು ವಾಹನ ಸಂಚಾರ ಕಷ್ಟಸಾಧ್ಯವಾಗಿದೆ’ ಎನ್ನುತ್ತಾರೆ ದತ್ತಾತ್ರೇಯ ಕಣ್ಣಿಪಾಲ.
ಭೂಕುಸಿತವಾಗದಂತೆ ತಡೆಗೋಡೆ ನಿರ್ಮಿಸಲು ಹೆಚ್ಚಿನ ಅನುದಾನ ಅಗತ್ಯವಾದ ಕಾರಣ ಕಾಮಗಾರಿ ಕೈಗೊಳ್ಳಲು ಆಗಿಲ್ಲ.ಸಂತೋಷಿ ಬಂಟ್ ಪಿಡಿಓ ವಜ್ರಳ್ಳಿ ಗ್ರಾಮ ಪಂಚಾಯಿತಿ
ವಜ್ರಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದು ಪೂರ್ಣಾವಧಿ ವೈದ್ಯರಿಲ್ಲ. ಸರ್ವೋದಯ ಪ್ರೌಢಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.ದತ್ತಾತ್ರೇಯ ಭಟ್ಟ ಕಣ್ಣಿಪಾಲ ಗ್ರಾಮದ ಪ್ರಮುಖ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.