ದಾಂಡೇಲಿ: ಕುಳಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಶಾಲಾ ಅವರಣಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ಅಂಬಿಕಾನಗರ ಗ್ರಾಮ ಪಂಚಾಯಿತಿ ಸದಸ್ಯ ಮುರಳಿ ಗಿಡ ನೆಟ್ಟು ನೆರವೇರಿಸಿದರು.
ಗಿಡಮರಗಳನ್ನು ಉಳಿಸಿ ಬೆಳಿಸಿ ಪೋಷಿಸುವುದು ನಾಡಿನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಪ್ರಾಕೃತಿಕ ಸಮತೋಲನಕ್ಕೆ ಕಾಡು, ವನ್ಯ ಜೀವಿಗಳ ಬದುಕಿನೊಂದಿಗೆ ನಾವು ಬೆರೆಯಬೇಕು. ಕಾಡು ಉಳಿದರೆ ಎಲ್ಲರಿಗೂ ಅನ್ನ ಸಿಗಲು ಸಾಧ್ಯ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕ್ಷೀಣಿಸುತ್ತಿದೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಮನೆ, ಜಮೀನುಗಳ ಸುತ್ತಮುತ್ತ ಸಸಿಗಳನ್ನು ನೆಟ್ಟು ಲಾಲನೆ-ಪಾಲನೆ ಮಾಡುವ ಮೂಲಕ ಅರಣ್ಯ ಸಂಪತ್ತನ್ನು ವೃದ್ಧಿಸುವ ನಿಟ್ಟಿನಲ್ಲಿ ಶ್ರಮಿಸಿದರೆ, ಖಂಡಿತವಾಗಿ ಬರಗಾಲ ತಪ್ಪಿಸಲು ಸಾಧ್ಯ ಎಂದರು.
ದಾಂಡೇಲಿ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ನಿಂಗಾಣಿ, ಕುಳಗಿ ವಲಯ ಅರಣ್ಯ ಅಧಿಕಾರಿ ಮಹಾಂತೇಶ ಪಾಟೀಲ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಗಿಡ ನೆಟ್ಟು ಹಸಿರು ಕ್ರಾಂತಿ ನಡೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಕೇವಲ ಅರಣ್ಯ ಇಲಾಖೆಯ ಅಷ್ಟೇ ಅಲ್ಲದೆ ಪ್ರತಿಯೊಬ್ಬರು ಗಿಡ ನೆಡುವ ಮೂಲಕ ಸಮೃದ್ಧಿಯ ಹಸಿರು ರಾಷ್ಟ್ರವನ್ನಾಗಿಸಬೇಕು ಎಂದರು.
ಕುಳಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸದಸ್ಯರು, ಗ್ರಾಮದ ಮುಖಂಡರು ವಲಯ ಸಿಬ್ಬಂದಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.