ಭಟ್ಕಳ: ಮುಂಬರುವ ವಿಧಾನಸಭೆ ಚುನಾವಣೆಗೆ ಭಟ್ಕಳ–ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿ ಸ್ಪರ್ಧಿಸದಂತೆ ನಿರ್ಣಯ ಕೈಗೊಂಡ ತಂಜೀಮ್ ವಿರುದ್ಧ ಪಟ್ಟಣದ ಕೆಲ ಮುಸ್ಲಿಂ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.
ಬುಧವಾರ ತಂಜೀಮ್ ಕಚೇರಿ ಎದುರು ಜಮಾಯಿಸಿದ್ದ 30ಕ್ಕೂ ಹೆಚ್ಚು ಮಹಿಳೆಯರು, ‘ಮುಸ್ಲಿಂ ಮತದಾರರು ಅಧಿಕ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಸಮುದಾಯದ ಅಭ್ಯರ್ಥಿಗಳು ಸ್ಪರ್ಧಿಸದಂತೆ ಒತ್ತಡ ಹೇರುವ ಕ್ರಮ ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ತಂಜೀಮ್ ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸದಿರಲು ನಿರ್ಧರಿಸಿದ್ದರಿಂದ ಸಮುದಾಯಕ್ಕೆ ಹಿನ್ನೆಡೆಯಾಗಬಹುದು. ಯಾವುದೇ ಅಭ್ಯರ್ಥಿ ಈವರೆಗೆ ಮುಸ್ಲಿಂ ಸಮುದಾಯಕ್ಕೆ ಸಹಾಯ ಮಾಡಿಲ್ಲ. ಕೋವಿಡ್ ಸಮಯದಲ್ಲಿ ಸಂಕಷ್ಟ ಎದುರಿಸಿದರೂ ಯಾರದ್ದೇ ಸಹಾಯ ದೊರೆತಿಲ್ಲ. ಈ ನಿಟ್ಟಿನಲ್ಲಿ ನಾವು ನಮ್ಮದೇ ಆದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಸೋಲುವುದಾದರೂ ತೊಂದರೆ ಇಲ್ಲ, ನಾವು ಅಭ್ಯರ್ಥಿಯನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.
‘ಸಮುದಾಯದಿಂದ ಯಾರೊಬ್ಬರೂ ಸ್ಪರ್ಧಿಸದಿದ್ದರೆ ಸಂವಿಧಾನಾತ್ಮಕವಾಗಿ ನೀಡಿದ ಮತದಾನದ ಹಕ್ಕನ್ನು ನೋಟಾಕ್ಕೆ ಚಲಾಯಿಸುತ್ತೇವೆ’ ಎಂದು ಎಚ್ಚರಿಸಿದರು. ತಂಜೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಮನವಿ ಸ್ವೀಕರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.