ಬುಧವಾರ, ನವೆಂಬರ್ 13, 2019
21 °C
ವಿಡಿಯೊ ಮಾಡಿಸಿದ್ದು ನಳಿನ್ ಹೇಳಿಕೆಗೆ ಸಚಿವ ಸೋಮಣ್ಣ ತಿರುಗೇಟು

ಸಿದ್ದರಾಮಯ್ಯ ಶಾಸ್ತ್ರ ಹೇಳ್ತಾರಾ, ದೇವರಾ?

Published:
Updated:

ಬಾಗಲಕೋಟೆ: ‘ಹುಬ್ಬಳ್ಳಿ ಸಭೆಯಲ್ಲಿ ಯಡಿಯೂರಪ್ಪ ಮಾತನಾಡಿದ್ದನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್ ವಿಡಿಯೊ ಮಾಡಿಸಿದ್ದಾರೆ ಎಂದು ಹೇಳಲು ಸಿದ್ದರಾಮಯ್ಯ ಏನಾದರೂ ಶಾಸ್ತ್ರ ಹೇಳ್ತಾರಾ, ಅವರೇನು ದೇವರಾ?’ ಎಂದು ವಸತಿ ಸಚಿವ ವಿ.ಸೋಮಣ್ಣ ಪ್ರಶ್ನಿಸಿದರು.

ಮುಧೋಳ ತಾಲ್ಲೂಕಿನ ಗುಲಗಾಲಜಂಬಗಿ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಯಡಿಯೂರಪ್ಪ ವಿರುದ್ಧ ಏನೇನು ಮಾಡ್ಬೇಕೊ ಎಲ್ಲವನ್ನೂ ಕಾಂಗ್ರೆಸ್‌ನವರ ಮಾಡಲು ಹೊರಟಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಹೀಗೆಲ್ಲಾ ಮಾತಾಡಿದರೆ ಅವರ ಗಾಂಭೀರ್ಯತೆ ಏನಾಗಬಹುದು’ ಎಂದು ಟೀಕಿಸಿದರು.

ಉಪಚುನಾವಣೆ ನಂತರ ಬಿಜೆಪಿ ಸರ್ಕಾರ ಬೀಳುತ್ತೆ ಎಂದು ಸಿದ್ದರಾಮಯ್ಯ ಹೇಳುವುದು ತೋಳ–ಕುರಿಮರಿ ಕಥೆ ಕಣ್ರಿ ಎಂದು ವ್ಯಂಗ್ಯವಾಡಿದ ಅವರು, ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಮ್ಮ ಕ್ಷೇತ್ರದ ಅಭಿವೃದ್ಧಿ ಆಗಲಿಲ್ಲ ಎಂದು ಮನನೊಂದು ರಾಜೀನಾಮೆ ಕೊಟ್ಟಿದ್ದಾರೆ. ಅವರಿಂದಾಗಿಯೇ ನಮ್ಮ ಸರ್ಕಾರ ಬಂದಿದೆ. ಹಾಗಾಗಿ ಅನರ್ಹ ಶಾಸಕರ ಬಗ್ಗೆ ನಮಗೆ ಅಪಾರ ಪ್ರೀತಿ, ಗೌರವ ಇದೆ ಎಂದರು.

‘ರಾಜೀವಗಾಂಧಿ ವಸತಿ ಯೋಜನೆಯಡಿ 14 ಲಕ್ಷ ಮನೆಗಳ ಪೈಕಿ ಏಳು ಲಕ್ಷ ಮನೆಗಳು ಮಾತ್ರ ನಿರ್ಮಾಣ ಹಂತದಲ್ಲಿವೆ. ಈ ಬಗ್ಗೆ 25ಕ್ಕೂ ಹೆಚ್ಚು ಆಕ್ಷೇಪಣಾ ಅರ್ಜಿ ಬಂದಿವೆ. ಅವ್ಯವಹಾರದ ಬಗ್ಗೆ ತನಿಖೆ ನಡೆಯುತ್ತಿದೆ‘ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)