ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಏಕಾದಶಿ ಸಂಭ್ರಮ, ವೈಕುಂಠ ದ್ವಾರ ನಿರ್ಮಾಣ

ಹೂವಿನಿಂದ ವಿಶೇಷ ಅಲಂಕಾರ
Last Updated 18 ಡಿಸೆಂಬರ್ 2018, 14:13 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ವಿವಿಧ ದೇಗುಲಗಳಲ್ಲಿ ಮಂಗಳವಾರ ವೈಕುಂಠ ಏಕಾದಶಿಯ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ನಗರದ ಕೆಂಪೇಗೌಡ ವೃತ್ತದಲ್ಲಿರುವ ಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ಮುಂಜಾನೆ ಮುಂಜಾನೆ 4 ಗಂಟೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತು, ದೇವರ ದರ್ಶನಕ್ಕೆ ಕಾದಿದ್ದರು. ರಾತ್ರಿಯವರೆಗೂ ಜನರ ಸಾಲು ಮುಂದುವರಿದಿತ್ತು. ಬ್ಯಾರಿಕೇಡ್‌ಗಳನ್ನು ಹಾಕಿ ಜನರನ್ನು ನಿಯಂತ್ರಿಸಲಾಯಿತು.

ದೇವಾಲಯದಲ್ಲಿ ವೈಕುಂಠ ದ್ವಾರವನ್ನು ನಿರ್ಮಿಸಿದ್ದು, ವಿಶೇಷವಾಗಿ ಹೂವಿನಿಂದ ಸಿಂಗರಿಸಲಾಗಿತ್ತು. ದೇವರ ಮೂರ್ತಿಯನ್ನು ಆಭರಣ ಮತ್ತು ಹೂವಿನಿಂದ ಅಲಂಕರಿಸಲಾಗಿತ್ತು. ದೇವರ ದರ್ಶನ ಪಡೆಯುವ ಭಕ್ತರಿಗೆ ಪ್ರಸಾದ ವಿನಿಯೋಗದ ವ್ಯವಸ್ಥೆಯನ್ನು ಮಾಡಲಾಗಿತ್ತು.ರಾತ್ರಿ ಸಂಗೀತ ಕಾರ್ಯಕ್ರಮ ನಡೆಯಿತು.

ಕೂಟಗಲ್‌: ಕೂಟಗಲ್‌ ಬೆಟ್ಟದಲ್ಲಿರುವ ತಿಮ್ಮಪ್ಪನ ಸನ್ನಿಧಿಯಲ್ಲಿ ವೈಕುಂಠ ಏಕಾದಶಿಯ ಆಚರಣೆಯು ನಡೆಯಿತು. ದೇವರ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೇ ನೂರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು.

ಮೊಟ್ಟೆದೊಡ್ಡಿ: ಕೈಲಾಂಚ ಹೋಬಳಿಯ ಮೊಟ್ಟೇದೊಡ್ಡಿ ಗ್ರಾಮದ ಶ್ರೀನಿವಾಸ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು.

ಮೂಲ ದೇವರಿಗೆ ವಿಶೇಷ ಅಲಂಕಾರ ಮಾಡಿ, ಮುಖ್ಯದ್ವಾರದಲ್ಲಿ ವೈಕುಂಠ ದ್ವಾರ ನಿರ್ಮಿಸಿ ಹೂವಿನ ಅಲಂಕಾರ ಮಾಡಲಾಗಿತ್ತು. ಗ್ರಾಮದ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ದೇಗುಲದಲ್ಲಿ ಬೆಳಗಿನಿಂದಲೇ ವಿಶೇಷಪೂಜೆ, ಹೋಮ, ಹವನಗಳು, ದೇವರಿಗೆ ಅಭಿಷೇಕ ಪೂಜೆಗಳು ನಡೆದವು. ಬೆಳಿಗ್ಗೆ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಹಿರಿಯರು ಗೋವಿಂದ, ಗೋವಿಂದ ಎಂಬ ನಾಮ ಸ್ಮರಣೆಯನ್ನು ಮಾಡುತ್ತಾ ಶ್ರೀನಿವಾಸನ ಭಜನೆ ಹಾಡುಗಳನ್ನು ಹಾಡುತ್ತಾ ಪಾಲ್ಗೊಂಡರು.

ದೇವಾಲಯದ ಆವರಣದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ, ಲಾಡು ಪ್ರಸಾದ ವಿನಿಯೋಗ ಮಾಡಲಾಯಿತು. ಅರ್ಚಕರಹಳ್ಳಿ ಆದಿಚುಂಚನಗಿರಿ ಶಾಖಾಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಅವರಿಂದ ಧಾರ್ಮಿಕ ಪ್ರವಚನ ನಡೆಯಿತು.

ಲಂಬಾಣಿದೊಡ್ಡಿ ಕೃಷ್ಣಾನಾಯಕ್ ಮತ್ತು ತಂಡದವರಿಂದ ತಂಬೂರಿಪದ, ಸ್ಪಂದನಾ ಮತ್ತು ಸಿದ್ದರಾಜು, ಕಲ್ಲಹಳ್ಳಿ ಮಹೇಶ್ ತಂಡದವರಿಂದ ಜನಪದಗೀತೆ, ಭಕ್ತಿ ಸಂಗೀತ ಕಾರ್ಯಕ್ರಮ, ಶಾಂತಲಾ ಚಾರಿಟಬಲ್ ಟ್ರಸ್ಟ್ ಶಾಂತಲಾ ಕಲಾ ಕೇಂದ್ರದ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮಗಳು ನಡೆದವು. ರಾತ್ರಿ ಶ್ರೀಕೃಷ್ಣ ಸಂಧಾನ ನಾಟಕ ನಡೆಯಿತು.
ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಭಾವತಿ ಕೆ. ಶಿವಲಿಂಗಯ್ಯ, ತಾ.ಪಂ. ಸದಸ್ಯ ಲಕ್ಷ್ಮೀಕಾಂತ್, ಉದ್ಯಮಿಗಳಾದ ಜಲಜಾ, ಸಾಯಿಕುಮಾರ್, ಗ್ರಾ.ಪಂ. ಸದಸ್ಯರಾದ ಎಂ.ಪಿ. ಮಹೇಶ್, ಭಾಗ್ಯಮ್ಮ, ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT