ರಾಮನಗರದಲ್ಲಿ ಪ್ರಚಾರ ನಡೆಸಿದ್ದರು ವಾಜಪೇಯಿ

7

ರಾಮನಗರದಲ್ಲಿ ಪ್ರಚಾರ ನಡೆಸಿದ್ದರು ವಾಜಪೇಯಿ

Published:
Updated:

ರಾಮನಗರ: ಬಿಜೆಪಿಯ ರಾಜಕೀಯ ಮುತ್ಸದ್ದಿ ಅಟಲ್‌ ಬಿಹಾರಿ ವಾಜಪೇಯಿ ರಾಜ್ಯದಲ್ಲಿ 1994ರ ವಿಧಾನಸಭೆ ಚುನಾವಣೆ ವೇಳೆ ಇಲ್ಲಿಗೆ ಧಾವಿಸಿ ಪ್ರಚಾರ ನಡೆಸಿದ್ದು ಇನ್ನು ನೆನಪು ಮಾತ್ರ.

ಈ ಘಟನೆ ನಡೆದದ್ದು 1994ರ ಚುನಾವಣೆಯಲ್ಲಿ. ಅವರು ಪ್ರಚಾರ ಕೈಗೊಂಡಿದ್ದು ರಾಮನಗರ ಕ್ಷೇತ್ರದಿಂದ ಅಂದಿನ ವಿಧಾನಸಭೆ ಕ್ಷೇತ್ರದಲ್ಲಿ ಅಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಗಿರಿಗೌಡರ ಪರ, ಜನತಾದಳ ಅಭ್ಯರ್ಥಿಯಾಗಿದ್ದ ಎಚ್‌.ಡಿ. ದೇವೇಗೌಡರ ವಿರುದ್ಧ.

ರಾಜಕೀಯವಾಗಿ ಪುರ್ನಜನ್ಮದ ಮಹತ್ವಾಕಾಂಕ್ಷೆಯೊಂದಿಗೆ ದೇವೇಗೌಡರು ಆ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧೆಗೆ ಇಳಿದಿದ್ದರು. ಕಾಂಗ್ರೆಸ್‌ನಿಂದ ಸಿ.ಎಂ. ಲಿಂಗಪ್ಪ ಅಭ್ಯರ್ಥಿಯಾಗಿದ್ದರು.

1994ರ ನವೆಂಬರ್ 23ರಂದು ರಾಮನಗರಕ್ಕೆ ಬಂದಿದ್ದ ವಾಜಪೇಯಿ ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿರುವ ವೆಂಕಟೇಶ್ ಎಂಬುವರಿಗೆ ಸೇರಿದ್ದ ಮನೆಯ ಮೊದಲ ಮಹಡಿಯಲ್ಲಿ ಚುನಾವಣಾ ಭಾಷಣ ಮಾಡಿದ್ದರು. ಸುಮಾರು 40 ನಿಮಿಷ ಕಾಲ ನೆರೆದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ್ದ ಅವರು,ಪಕ್ಷ ಮತ್ತು ಅಭ್ಯರ್ಥಿಗಳ ಕುರಿತು ಚರ್ಚಿಸಿದ್ದರು.

ಅಂದಿನ ಭಾಷಣದಲ್ಲಿ ವಾಜಪೇಯಿ, ದೇವೇಗೌಡರನ್ನು ನಯವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ‘ಅನುಭವಿ ದೇವೇಗೌಡರನ್ನು ಬಿಡಿ, ಯುವ ಗೌಡರನ್ನು (ಗಿರಿಗೌಡ) ಗೆಲ್ಲಿಸಿ’ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ನಂತರ ಅವರ ರಾಮನಗರಿಂದ ಮೈಸೂರಿಗೆ ತೆರಳಿದ್ದರು.

ಆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಿರಿಗೌಡ 22,664 ಮತಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದರು. ಎಚ್.ಡಿ.ದೇವೇಗೌಡರು 47,986 ಮತಗಳನ್ನು ಗಳಿಸುವ ಮೂಲಕ ಸಿ.ಎಂ.ಲಿಂಗಪ್ಪ ವಿರುದ್ಧ 9594 ಮತಗಳ ಅಂತರದ ಗೆಲುವು ಸಾಧಿಸಿದ್ದರು.

***
ವಾಜಪೇಯಿ ನನ್ನಂಥ ಸಾಮಾನ್ಯನೊಂದಿಗೆ ವೇದಿಕೆ ಹಂಚಿಕೊಂಡು ಸೌಜನ್ಯದಿಂದ ವರ್ತಿಸಿದ್ದರು. ಅವರೊಟ್ಟಿಗೆ ಕಳೆದ ಸಮಯ ನನ್ನ ಪಾಲಿನ ಶ್ರೇಷ್ಠ ಘಳಿಗೆ
ಡಿ.ಗಿರಿಗೌಡ, 1994ರ ಚುನಾವಣೆಯ ಬಿಜೆಪಿ ಅಭ್ಯರ್ಥಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !