ಬಸ್‌ ನಿಲ್ದಾಣದಲ್ಲಿ ಮಲಗಿ ವಾಟಾಳ್‌ ಪ್ರತಿಭಟನೆ

7
ಸಂಸತ್‌ನಲ್ಲಿ ರಾಜ್ಯದ ಸಂಸದರು ಧ್ವನಿ ಎತ್ತದ್ದಕ್ಕೆ ಆಕ್ಷೇಪ

ಬಸ್‌ ನಿಲ್ದಾಣದಲ್ಲಿ ಮಲಗಿ ವಾಟಾಳ್‌ ಪ್ರತಿಭಟನೆ

Published:
Updated:

ರಾಮನಗರ: ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜು ಶುಕ್ರವಾರ ಇಲ್ಲಿನ ಬಸ್ ನಿಲ್ದಾಣದಲ್ಲಿ ಮಲಗಿ ಪ್ರತಿಭಟನೆ ನಡೆಸಿದರು.

ಮೇಕೆದಾಟು ಯೋಜನೆ ಜಾರಿಗೆ ಸರ್ಕಾರದ ವಿಳಂಬ ಹಾಗೂ ಧಾರವಾಡದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು. ‘ತಮಿಳುನಾಡು ಸಂಸದರು ಸಂಸತ್ತಿನಲ್ಲಿ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ ಗಲಾಟೆ ಮಾಡಿದರೂ ರಾಜ್ಯದ ಸಂಸದರು ಮೌನ ವಹಿಸಿದ್ದು ಬೇಸರದ ಸಂಗತಿ. ನಮ್ಮ ಸಂಸದರಿಗೆ ಸ್ವಲ್ಪವಾದರೂ ಗೌರವ ಎಂಬುದು ಉಳಿದಿದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ತಮಿಳುನಾಡಿನ ಧೋರಣೆಯನ್ನು ಖಂಡಿಸಿ ಇದೇ 12ರಂದು ಹೊಸೂರು–ಅತ್ತಿಬೆಲೆ ಗಡಿ ಸಂಪೂರ್ಣ ಬಂದ್ ಮಾಡಲಾಗುವುದು. ಆದಾಗ್ಯೂ ತಮಿಳುನಾಡು ತನ್ನ ತಕರಾರು ಮುಂದುವರೆಸಿದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

‘ಸಾಹಿತ್ಯ ಸಮ್ಮೇಳನಕ್ಕೆ ನನ್ನ ವಿರೋಧವಿಲ್ಲ. ಆದರೆ ಅಲ್ಲಿ ನಿರ್ಣಯಗಳನ್ನು ಕೈಗೊಳ್ಳುವುದನ್ನು ಬಿಟ್ಟು ಬೇರೇನೂ ಆಗಿಲ್ಲ. ಸಾಹಿತಿ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯಾದ ನೆಲದಲ್ಲಿಯೇ ಈ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಸರಿಯಲ್ಲ’ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

‘ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಯಿಂದ ಅವರ ಕುಟುಂಬದವರು, ಅಭಿಮಾನಿಗಳು ದುಃಖದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಸಾಹಿತಿಗಳು ಸಮ್ಮೇಳನ ನಡೆಸುತ್ತಿದ್ದಾರೆ. ಸಮ್ಮೇಳನ ನಡೆಸುವುದನ್ನು ಬಿಟ್ಟು ಬೀದಿಯಲ್ಲಿ ಹೋರಾಟ ಮಾಡಿ ಜೈಲು ಸೇರಿದ್ದರೆ ನಾಡಿನ ಸಮಸ್ಯೆಗಳು ಬಗೆಹರಿಯುತ್ತಿದ್ದವು’ ಎಂದರು.

‘ಉತ್ತರ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಂದ ಆ ಭಾಗದ ಶಾಸಕರೊಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಸರ್ಕಾರವು ಕನ್ನಡ ಶಾಲೆಗಳನ್ನು ಮುಚ್ಚಿ, ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವ ಯೋಜನೆಯನ್ನು ಕೈಬಿಡಬೇಕು. ಈ ಬಗ್ಗೆ ಸಾಹಿತಿಗಳು ಜಾಣಕಿವುಡು ಪ್ರದರ್ಶಿಸುವುದನ್ನು ಬಿಡಬೇಕು’ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !