ಮಹಿಳೆಯರಿಗೆ ವ್ಯವಹಾರ ಜ್ಞಾನ ಮುಖ್ಯ

7
ಜಿಲ್ಲಾ ಮಹಿಳಾ ಸಮಾವೇಶದಲ್ಲಿ ಡಿ.ವೀರೇಂದ್ರ ಹೆಗ್ಗಡೆ ಅಭಿಮತ

ಮಹಿಳೆಯರಿಗೆ ವ್ಯವಹಾರ ಜ್ಞಾನ ಮುಖ್ಯ

Published:
Updated:
Prajavani

ಶಿವಮೊಗ್ಗ: ಕೇವಲ ಅಕ್ಷರ ಜ್ಞಾನವಿದ್ದು, ವ್ಯವಹಾರ ಜ್ಞಾನ ಇಲ್ಲದಿದ್ದರೇ ಉತ್ತಮ ಬದುಕು ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ನಗರದ ಎನ್ಇಎಸ್ ಮೈದಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮಹಿಳೆಯರು ಓದುವುದು, ಬರೆಯುವುದನ್ನು ಕಲಿಯುವುದರ ಜತೆಗೆ ವ್ಯವಹಾರ ಜ್ಞಾನವನ್ನು ಹೊಂದಬೇಕು. ಮೂಢನಂಬಿಕೆಗಳಿಂದ ಹೊರಬರಬೇಕು. ಸಾಧನೆಯ ಪರಿಶ್ರಮ, ಪ್ರಗತಿ ಹಂಬಲ ಹೊಂದುವ ಮೂಲಕ ಆರ್ಥಿಕ ಅಭಿವೃದ್ಧಿ ಕಾಣಬೇಕು. ಇದಕ್ಕೆ ಸ್ಪಷ್ಟ ಯೋಚನೆ, ಯೋಜನೆ ಹಾಗೂ ಕಾರ್ಯಕ್ರಮ ಇರಬೇಕು. ಯೋಚನೆಗಳು ಆರೋಗ್ಯದಾಯಕವಾಗಿರಬೇಕು. ಪ್ರಗತಿ ಹಾಗೂ ಬದಲಾವಣೆಯ ಕಡೆಗೆ ಮಹಿಳೆಯರು ಸಾಗಬೇಕು. ಇದಕ್ಕೆ ಅವಕಾಶವನ್ನು ಧರ್ಮಸ್ಥಳ ಸಂಘ ಕಲ್ಪಿಸಿಕೊಡುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ 2007ರಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಒಟ್ಟು 11,700 ಗುಂಪುಗಳಿದ್ದು, 1.08 ಲಕ್ಷ ಸದಸ್ಯರಿದ್ದಾರೆ. ₹68 ಕೋಟಿ ಉಳಿತಾಯವಾಗಿದೆ. ಈವರೆಗೆ ₹2,626ಕೋಟಿ ವ್ಯವಹಾರವಾಗಿದೆ. ₹447 ಕೋಟಿ ಹೊರ ಬಾಕಿ ಇದೆ. ಸಂಘದ ಪ್ರಗತಿ ನಿಧಿಯನ್ನು ಬಳಸಿಕೊಂಡು ಜಿಲ್ಲೆಯ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಸಮಾವೇಶವನ್ನು ಉದ್ಘಾಟಿಸಿ, ‘ಪ್ರಸ್ತುತ ದಿನಗಳಲ್ಲಿ ಮನುಷ್ಯತ್ವ ಕಳೆದು ಹೋಗುತ್ತಿದೆ. ನೈತಿಕ ಮೌಲ್ಯ ಅಧಃಪತನವಾಗುತ್ತಿರುವುದರಿಂದ ಸಮಾಜದಲ್ಲಿ ಮಹಿಳಾ ದೌರ್ಜನ್ಯ, ಅತ್ಯಾಚಾರ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯವಿವಾಹದಂತಹ ಪಿಡುಗುಗಳು ಮುಂದುವರಿದಿವೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಇಂದು ಎಲ್ಲಾ ಸಮಸ್ಯೆಗಳನ್ನು ಎದುರಿಸಿ ನಿಲ್ಲಬೇಕು. ಎಲ್ಲ ಸಮಸ್ಯೆಗಳಿಗೂ ಆತ್ಮಹತ್ಯೆ ಪರಿಹಾರವಲ್ಲ, ಮಹಿಳೆ ಸಶಕ್ತಳು, ಎಲ್ಲವನ್ನು ಎದುರಿಸಿ ಜಯಶಾಲಿಯಾಗಬೇಕು’ ಎಂದರು.

ಯಾವ ಸರ್ಕಾರವು ಮಹಿಳೆಯರ ಪರ ಮಾಡದ ಕೆಲಸವನ್ನು ಧರ್ಮಸ್ಥಳ ಕ್ಷೇತ್ರ ಮಾಡುತ್ತಿದೆ. ಯಾವುದೇ ರಾಜಕೀಯ ಲೇಪವಿಲ್ಲದೇ ನಿಷ್ಪಕ್ಷವಾದ ರೀತಿಯಲ್ಲಿ ಈ ಕ್ಷೇತ್ರ ಮುಂದುವರಿಯುತ್ತಿರುವುದರಿಂದಲೇ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಧರ್ಮಸ್ಥಳದ ಈ ಕಾರ್ಯ ಪ್ರತಿಯೊಂದು ಕ್ಷೇತ್ರಕ್ಕೂ ಮಾದರಿ ಎಂದರು.

ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ‘ಕುಟುಂಬ ವ್ಯವಸ್ಥೆ ಇಂದು ಹಾಳಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಮಕ್ಕಳನ್ನು ಸ್ವಾವಲಂಭಿಗಳಾಗಿ ಬದುಕಲು ಕಲಿಸಬೇಕು. ಈ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮುನ್ನಡೆಯುತ್ತಿರುವುದು ಮೆಚ್ಚುಗೆಯ ಸಂಗತಿ. ಡಿ. ವೀರೇಂದ್ರ ಹೆಗ್ಗಡೆ ಅವರು ವಿವಿಧ ಸಮಾಜ ಮುಖಿ ಕೆಲಸಗಳ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ‘ಸ್ತ್ರೀಶಕ್ತಿ ಸಂಘಗಳ ಮೂಲಕ ದೇಶದಲ್ಲಿ ಇಂದು ಸಾಕಷ್ಟು ಬದಲಾವಣೆಯಾಗುತ್ತಿದೆ. ಜಿಡಿಪಿ ಏರಿಕೆಯಾಗಲು ಸ್ತ್ರ್ರೀಶಕ್ತಿ ಸಂಘಗಳ ಉಳಿತಾಯವು ಪ್ರಮುಖವಾಗಿದೆ. ಮಹಿಳೆಯರ ಕೊಡುಗೆ ಇದರಲ್ಲಿ ಮುಖ್ಯ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಮಹಿಳೆಯರನ್ನು ಸಂಘಟಿಸಿ, ಅವರನ್ನು ಸ್ವಾವಲಂಭಿಗಳಾಗಿ ಮಾಡುತ್ತಿರುವುದು ಆರೋಗ್ಯದಾಯಕ ಬೆಳವಣಿಗೆಯಾಗಿದೆ’ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್‌.ಎಚ್‌.ಮಂಜುನಾಥ್‌, ಪಾಲಿಕೆ ಮೇಯರ್ ಲತಾ ಗಣೇಶ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷಷೆ ಜ್ಯೋತಿಕುಮಾರ್, ಪ್ರಮುಖರಾದ ಎಸ್‌.ಎನ್‌.ಚನ್ನಬಸಪ್ಪ, ಸುರೇಶ್‌ ಬಾಳೇಗುಂಡಿ, ವಿಜಯಕುಮಾರ್ ದಿನಕರ್, ರಮೇಶ್, ಸುನೀತಾ ಅಣ್ಣಪ್ಪ, ಎಚ್.ಸಿ.ಯೋಗೀಶ್, ನಾಗರಾಜ ಕಂಕಾರಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !