ಬೀನ್ಸ್ ಅಗ್ಗ; ಕ್ಯಾರಟ್‌ ಬಲು ದುಬಾರಿ

7
ಬಹುತೇಕ ತರಕಾರಿಗಳ ಬೆಲೆ ಇಳಿಕೆ: ಈರುಳ್ಳಿ ದರ ಸ್ಥಿರ

ಬೀನ್ಸ್ ಅಗ್ಗ; ಕ್ಯಾರಟ್‌ ಬಲು ದುಬಾರಿ

Published:
Updated:
Deccan Herald

ರಾಮನಗರ: ಮಳೆಗಾಲದ ದಿನಗಳಲ್ಲಿ ತರಕಾರಿಗಳು ಅಗ್ಗವಾಗಿ ಗ್ರಾಹಕರ ಖರ್ಚು ಕಡಿಮೆಯಾಗಿಸಿವೆ. ಆದರೆ ಇದೇ ಖುಷಿ ಬೆಳೆಗಾರನಲ್ಲಿಲ್ಲ. ಬಹುತೇಕ ಉತ್ಪನ್ನಗಳ ಧಾರಣೆ ಕುಸಿಯುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಇಲ್ಲಿನ ಎಂಪಿಎಂಸಿಯ ತರಕಾರಿ ಮಾರುಕಟ್ಟೆಯಲ್ಲಿ ಸದ್ಯ ಟೊಮ್ಯಾಟೊ, ಮೂಲಂಗಿ, ಕೋಸು ಎಲ್ಲವೂ ಪ್ರತಿ ಕೆ,ಜಿ.ಗೆ ₨10ರ ಒಳಗೆ ಮಾರಾಟ ಕಾಣುತ್ತಿವೆ. ಅದರಲ್ಲೂ ಮೂಲಂಗಿಯನ್ನು ಕೇಳುವವರೇ ಇಲ್ಲದಾಗಿದೆ. ಟೊಮ್ಯಾಟೊ ಸಹ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿರುವ ಕಾರಣ ಬೆಲೆ ತೀವ್ರ ಕುಸಿತ ಕಾಣುತ್ತಿದೆ.

ಆಷಾಢ ಮಾಸದ ಕೊನೆಯ ವಾರದಲ್ಲಿ ಬೀನ್ಸ್ ಅರ್ಥಾತ್ ಹುರುಳಿಕಾಯಿಯ ಬೆಲೆ ಇಳಿಕೆಯಾಗ ತೊಡಗಿದೆ. ಮದುವೆಯ ಸಂಭ್ರಮದ ದಿನಗಳಲ್ಲಿ ಪ್ರತಿ ಕೆ.ಜಿ.ಗೆ ₨50–60 ಇದ್ದ ಧಾರಣೆಯು ಈಗ ಅದರ ಅರ್ಧಕ್ಕೆ ಇಳಿದಿದೆ. ಇದರಿಂದಾಗಿ ಗ್ರಾಹಕರಿಗೆ ಸುಗ್ಗಿಯಾಗಿದೆ.

ಬೀಟ್‌ರೂಟ್‌, ಆಲೂಗಡ್ಡೆ ಹಾಗೂ ಈಗಷ್ಟೇ ಮಾರುಕಟ್ಟೆಗೆ ಬರುತ್ತಿರುವ ಅವರೆ, ಅಲಸಂದೆ ಎಲ್ಲವೂ ₨20ರ ಧಾರಣೆಯಲ್ಲಿ ಮಾರಾಟವಾಗುತ್ತಿವೆ. ಇದರಿಂದ ಕೊಳ್ಳುವವರಿಗೆ ಹೆಚ್ಚೇನು ಹೊರೆಯಾಗಿಲ್ಲ.

ಬೆಂಡೆ, ಬದನೆ, ನುಗ್ಗೆ, ಈರೇಕಾಯಿ, ಹಸಿ ಮೆಣಸಿನಕಾಯಿ ಎಲ್ಲವೂ ₨30ರ ದರದಲ್ಲಿ ಇದ್ದು, ಗ್ರಾಹಕರು–ರೈತರು ಇಬ್ಬರಿಗೂ ಹೆಚ್ಚು ನಷ್ಟವಾದಂತೆ ತೋರುತ್ತಿಲ್ಲ. ಅದರಲ್ಲಿಯೂ ಬೆಂಡೆ ಹಾಗೂ ಬದನೆ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ಬೆಲೆ ಉಳಿಸಿಕೊಂಡಿವೆ.

ಈರುಳ್ಳಿಯು ಗ್ರಾಹಕರಿಗೆ ಹೆಚ್ಚೇನು ಕಣ್ಣೀರು ತಂದಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಅದರ ಧಾರಣೆಯು ಕಳೆದ ಕೆಲವು ತಿಂಗಳುಗಳಿಂದ ಒಂದೇ ಸಮನಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಇದರ ಬೆಲೆ ಏರಿಕೆಯ ಹಾದಿಯಲ್ಲಿತ್ತು. ಸಾಮಾನ್ಯವಾಗಿ ಅಕ್ಟೋಬರ್‌–ನವೆಂಬರ್‌ನಲ್ಲಿ ಹೊಸ ಉತ್ಪನ್ನ ಮಾರುಕಟ್ಟೆಗೆ ಬರುತ್ತದೆ. ಅಲ್ಲಿಯವರೆಗೆ ಇದರ ಬೆಲೆಯು ಸ್ಥಿರ ಇಲ್ಲವೇ ಏರು ಮುಖವಾಗಿ ಇರಲಿದೆ ಎನ್ನುತ್ತಾರೆ ಇಲ್ಲಿನ ಎಪಿಎಂಸಿಯ ವರ್ತಕರು.

ನಿಂಬೆ, ಸೌತೆ ಕೇಳುವವರಿಲ್ಲ: ಬೇಸಿಗೆಯಲ್ಲಿ ಇನ್ನಿಲ್ಲದ ಬೇಡಿಕೆ ಹೊಂದಿದ್ದ ನಿಂಬೆ ಹಾಗೂ ಸೌತೆಕಾಯಿಯನ್ನು ಸದ್ಯ ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲ. ಸಣ್ಣ ಹಾಗೂ ಮಧ್ಯಮ ಗಾತ್ರದ ನಿಂಬೆ ₨1ಕ್ಕೆ 1ರಂತೆ ಮಾರಾಟವಾಗುತ್ತದೆ. ಸೌತೆ ಸಹ ಬೆಲೆ ಇಳಿಸಿಕೊಂಡಿದೆ.

ಕ್ಯಾರೆಟ್, ಹಾಗಲ, ಹಸಿಬಟಾಣಿ ದುಬಾರಿ
ಈ ಮೂರು ತರಕಾರಿಗಳು ಮಾತ್ರ ಸದ್ಯ ಗ್ರಾಹಕರ ಕೈಗೆ ಎಟುಕದ ದರದಲ್ಲಿ ಬಿಕರಿಯಾಗುತ್ತಿವೆ. ಕಳೆದ ತಿಂಗಳಷ್ಟೇ ₨40ಕ್ಕೆ ಸಿಗುತ್ತಿದ್ದ ಕ್ಯಾರೆಟ್ ಈಗ ಅದರೊಟ್ಟಿಗೆ ₨20ರಷ್ಟು ಬೆಲೆ ಏರಿಸಿಕೊಂಡಿದೆ. ಹೀಗಾಗಿ ಬೇಡಿಕೆ ಕಡಿಮೆಯಾಗಿದೆ. ಹಸಿ ಬಟಾಣಿ ಆಗಾಗ್ಗೆ ಮಾತ್ರ ಕಾಣಸಿಗುತ್ತಿದ್ದು, ಇದರ ಬೆಲೆಯೇ ಪ್ರತಿ ಕೆ.ಜಿ.ಗೆ ₨80 ಇದೆ. ಇದಲ್ಲದೆ ಹಾಗಲಕಾಯಿಯೂ ಕೊಳ್ಳುವವರಿಗೆ ಕೊಂಚ ಕಹಿಯಾಗಿಯೇ ಉಳಿದಿದೆ. ದಪ್ಪ ಮೆಣಸಿನಕಾಯಿಯೂ ದುಬಾರಿಯಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ.

ಸೊಪ್ಪು ಅಗ್ಗ
ಸೊಪ್ಪಿನ ಬೆಲೆಯು ಚಿಲ್ಲರೆ ಮಾರುಕಟ್ಟೆಯಲ್ಲಿ ಗಣನೀಯವಾಗಿ ಇಳಿದಿದೆ. ಅದರಲ್ಲಿಯೂ ಕೊತ್ತಂಬರಿ ಬೆಲೆ ಪಾತಾಳಕ್ಕೆ ಇಳಿಯತೊಡಗಿದೆ. ಫಾರ್ಮ್‌ ತಳಿಯ ಸೊಪ್ಪು ಕಂತೆಗೆ ₨5ಕ್ಕೆ ಬಿಕರಿಯಾಗತೊಡಗಿದೆ. ಪಾಲಕ್‌, ಪುದೀನ ಸಹ ಇದೇ ಧಾರಣೆಯಲ್ಲಿವೆ.  ಕೀರೆ, ಕಿಲ್‌ಕೀರೆ, ದಂಟು, ಮೆಂತ್ಯೆ. ಸಬ್ಬಸಿಗೆ ಮೊದಲಾದ ಸೊಪ್ಪುಗಳೂ ಕೈಗೆಕುವ ದರದಲ್ಲಿಯೇ ಮುಂದುವರಿದಿವೆ.

ಸದ್ಯಕ್ಕೆ ಬೀನ್ಸ್‌ನ ಬೆಲೆ ತುಂಬಾ ಅಗ್ಗವಾಗಿದೆ. ಉತ್ಪನ್ನ ಹೆಚ್ಚಿಗೆ ಬರುತ್ತಿರುವ ಕಾರಣ ಎಲ್ಲ ತರಕಾರಿಗಳ ಬೆಲೆಯೂ ಇಳಿಯುತ್ತಿದೆ
- ನವೀದುಲ್ಲಾ ಖಾನ್‌, ವರ್ತಕ

ಬಹುತೇಕ ತರಕಾರಿಗಳು ಕೈಗೆಟಕುವ ದರದಲ್ಲಿಯೇ ಇವೆ. ಹೀಗಾಗಿ ಕಡಿಮೆ ಖರ್ಚಿನಲ್ಲಿ ಬುಟ್ಟಿ ತುಂಬುತ್ತಿದೆ. ಕ್ಯಾರೆಟ್ ಮಾತ್ರ ದುಬಾರಿಯಾಗಿದೆ
- ಉಮೇಶ್‌, ಗ್ರಾಹಕ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !