ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆದು ಸ್ವಭಾವದ ಸರಳ ವ್ಯಕ್ತಿತ್ವ

Last Updated 10 ಏಪ್ರಿಲ್ 2018, 19:40 IST
ಅಕ್ಷರ ಗಾತ್ರ

ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿಯವರ (ಕೆ.ಸಿ. ರೆಡ್ಡಿ) ಮುಖ್ಯಮಂತ್ರಿತ್ವದ ಕಾಲದಲ್ಲಿ ಎದುರಾದ ಒಂದು ಜ್ವಲಂತ ಸಮಸ್ಯೆ ಕರ್ನಾಟಕದ ಏಕೀಕರಣವನ್ನು ಕುರಿತದ್ದು. ಕರ್ನಾಟಕದ ಏಕೀಕರಣದ ಬಗ್ಗೆ ಅನೇಕರಿಗೆ ಒಲವಿರಲಿಲ್ಲ. ಉತ್ತರ ಕರ್ನಾಟಕದ ಭಾಗಗಳು ಹಿಂದುಳಿದಿವೆ, ಏಕೀಕರಣವಾದರೆ ಪ್ರಗತಿಶೀಲ ಮೈಸೂರು ಭಾಗದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ, ತಮ್ಮ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಅಡಚಣೆಯಾಗುತ್ತದೆ ಎಂದು ಕೆಲವರು ಈ ಬಗ್ಗೆ ವಿರೋಧ ತಾಳಿದರೆ, ಇನ್ನು ಕೆಲವರು ತಮ್ಮ ಜಾತೀಯ ಪ್ರಾಬಲ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕಾಗಿ ಏಕೀಕರಣವನ್ನು ವಿರೋಧಿಸುತ್ತಿದ್ದರು. ರೆಡ್ಡಿಯವರನ್ನೂ ಮೈಸೂರುವಾದಿ ಎಂದು ಆರೋಪಿಸುವ ಪ್ರಯತ್ನಗಳು ನಡೆದಿದ್ದವು. ಏಕೀಕರಣದ ಕನಸು ನನಸಾಗುವ ಮೊದಲೇ ರೆಡ್ಡಿಯವರ ಮುಖ್ಯಮಂತ್ರಿ ಪದವಿ ಕೊನೆಗೊಂಡು ಕೆಂಗಲ್‌ ಹನುಮಂತಯ್ಯ ಅಧಿಕಾರಕ್ಕೆ ಬಂದರು.

ರೆಡ್ಡಿಯವರ ಮುಖ್ಯಮಂತ್ರಿ ಪದವಿ ಕೊನೆಗೊಳ್ಳುವುದಕ್ಕೆ ಹನುಮಂತಯ್ಯನವರು ಮುಖ್ಯ ಕಾರಣರಾದರು ಎನ್ನಬಹುದು. ಸ್ವಾತಂತ್ರ್ಯ ಬಂದ ನಂತರ ಮುಖ್ಯಮಂತ್ರಿಗಳಾಗುವ ಸಮಾನ ಅವಕಾಶ, ಅರ್ಹತೆ ಹೊಂದಿದ್ದ ಅನೇಕ ಧುರೀಣರು ಇದ್ದರು. ಆದರೂ, ಮುಖ್ಯಮಂತ್ರಿಯಾಗಲೇಬೇಕು ಎಂಬ ಅಪಾರ ಇಚ್ಛೆ ಇದ್ದದ್ದು ಹನುಮಂತಯ್ಯನವರಿಗೆ ಮಾತ್ರ. ಆದರೆ, ಅದು ತಮ್ಮ ಕೈತಪ್ಪಿ ರೆಡ್ಡಿಯವರ ಪಾಲಾಗಿದ್ದರಿಂದ ಹನುಮಂತಯ್ಯನವರಿಗೆ ಆಶಾಭಂಗವಾಗಿದ್ದು ಸಹಜ. ರೆಡ್ಡಿಯವರ ಕಾರ್ಯನಿರ್ವಹಣೆಯಲ್ಲಿ ಅವರು ಏನಾದರೂ ತ‍ಪ್ಪು ಹುಡುಕುತ್ತಲೇ ಇದ್ದರು. ರೆಡ್ಡಿಯವರ ಸರ್ಕಾರ ಬಡವರ ಪರವಾಗಿಲ್ಲ ಎಂಬ ಆರೋಪವನ್ನು ಅವರು ಪದೇ ಪದೇ ಮಾಡುತ್ತಿದ್ದರು. ಸಣ್ಣಪುಟ್ಟ ವಿಷಯಗಳಿಗೆಲ್ಲ ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದರು. ಮೈಸೂರು ರಾಜ್ಯದಲ್ಲಿ ಸಾಹುಕಾರ ಚೆನ್ನಯ್ಯನವರ ಗುಂಪು, ಕೆಂಗಲ್‌ ಹನುಮಂತಯ್ಯನವರ ಗುಂಪು ಎಂಬ ಎರಡು ಬಣಗಳು ಏರ್ಪಟ್ಟಿದ್ದವು. ಹನುಮಂತಯ್ಯನವರಿಂದ ಪ್ರೇರಿತರಾದ ಗುಂಪಿನವರು ತಾಂತ್ರಿಕ ಕಾರಣಗಳಿಂದ ರೆಡ್ಡಿಯವರು ಅಧಿಕಾರದಲ್ಲಿರುವುದು ಸಕ್ರಮವಾಗಿಲ್ಲ ಎಂಬ ಗಲಾಟೆಯನ್ನು ಎಬ್ಬಿಸಿದರು. ರಾಜಕೀಯ ಬಿಕ್ಕಟ್ಟಿನ ಪರಿಹಾರಕ್ಕಾಗಿ ನೆಹರೂ ಅವರು ಲಾಲ್‌ ಬಹದ್ದೂರ್‌ ಶಾಸ್ತ್ರಿಯ
ವರನ್ನು ಕಳಿಸಿದರು. ಶಾಸ್ತ್ರಿಯವರ ತೀರ್ಮಾನದಂತೆ ಎಲ್ಲರ ಸಮ್ಮತಿಯ ಮೇರೆಗೆ 30.03.1952ರಂದು ಕೆಂಗಲ್‌ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿ ನೇಮಕವಾದರು.

ರೆಡ್ಡಿಯವರು ಯಾವುದೇ ತಳಮಳವಿಲ್ಲದೆ ಅಧಿಕಾರ ತ್ಯಾಗ ಮಾಡಿದರು. ನಂತರವೂ ಅವರು ಹನುಮಂತಯ್ಯನವರೊಂದಿಗೆ ಒಳ್ಳೆಯ ಸ್ನೇಹ ಬೆಳೆಸಿಕೊಂಡು ಬಂದರು.

ರೆಡ್ಡಿಯವರು ಅತ್ಯಂತ ಮೆದು ಸ್ವಭಾವದ ಸರಳ ವ್ಯಕ್ತಿಯಾಗಿದ್ದರು. ಅಧಿಕಾರದ ಸ್ಥಾನಮಾನ, ದರ್ಪ, ಜೋರುಗಳಿಂದ ಅವರು ಸದಾ ದೂರವೇ ಉಳಿದರು. ಈ ಪದವಿ ಅಧಿಕಾರಗಳೆಲ್ಲ ಇಂದಿದ್ದು ನಾಳೆ ಹೋಗುವಂಥವು. ನಾವು ಮೇಲೆ ಮೇಲೆ ಹೋದಷ್ಟೂ ಹೆಚ್ಚು ಹೆಚ್ಚು ಸರಳತೆ ಬೆಳೆಸಿಕೊಳ್ಳಬೇಕು ಎಂಬುದು ಅವರ ನಿಲುವಾಗಿತ್ತು. ಅವರ ಆಲೋಚನೆಗಳು ಯಾವಾಗಲೂ ರಾಷ್ಟ್ರದ ನೆಲೆಯಲ್ಲಿರುತ್ತಿದ್ದವು. ಸ್ವಂತದ ಅಧಿಕಾರ, ಸ್ವಂತ ರಾಜ್ಯ, ಸ್ವಂತ ಪಕ್ಷ ಎಂಬ ಸಂಕುಚಿತತೆ ಇರಲಿಲ್ಲ. ಇದನ್ನು ಅರ್ಥ ಮಾಡಿಕೊಂಡವರು ಕಡಿಮೆ. ಅಂಥವರು ನಮ್ಮ ರಾಜ್ಯಕ್ಕಾಗಿ, ನಮ್ಮ ಊರಿಗಾಗಿ, ನಮ್ಮ ಜನಕ್ಕಾಗಿ ರೆಡ್ಡಿಯವರು ಏನೂ ಮಾಡಲಿಲ್ಲ ಎಂದು ಆಪಾದಿಸುತ್ತಿದ್ದರು.

ರಾಜ್ಯಗಳ ಪುನರ್‌ವಿಂಗಡಣೆಯ ಸಮಯದಲ್ಲಿ ‘ಕೋಲಾರವನ್ನು ಆಂಧ್ರ ಪ್ರದೇಶಕ್ಕೆ ಸೇರಿಸಲು ಪ್ರಯತ್ನಿಸಬಾರದೇಕೆ?, ನೀವೆಲ್ಲ ರಾಜಕೀಯ ಪಟುಗಳು ಆಂಧ್ರ ಗಡಿ ಪ್ರದೇಶದವರೇ ಇದ್ದೀರಲ್ಲ’ ಎಂದು ಕೆಲವರು ರೆಡ್ಡಿಯವರನ್ನು ಕೇಳುತ್ತಿದ್ದರು.

ಆಗ ಅವರು, ‘ನಾವು ಇಲ್ಲಿ ಹಾಯಾಗಿದ್ದೇವೆ, ದಯವಿಟ್ಟು ನಮ್ಮ ನಮ್ಮಲ್ಲಿ ವಿಷಬೀಜ ಬಿತ್ತಬೇಡಿ’ ಎಂದು ಹೇಳುತ್ತಿದ್ದರು.

ರೆಡ್ಡಿಯವರು ಎಂದೂ ಸ್ವಾರ್ಥಪರವಾಗಿ ನಡೆದುಕೊಳ್ಳಲಿಲ್ಲ. ನಾಡಿನ ಹಿತಚಿಂತನೆ ಅವರ ಆದ್ಯತೆಯಾಗಿತ್ತು. ಅವರು ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ಆದರೆ, ಅಪಾತ್ರರಿಗೆ ಸಹಾಯ ಮಾಡುವಂಥ ಕೆಲಸವನ್ನು ಅವರು ಮಾಡಲಿಲ್ಲ.

–ಡಾ. ಸಂಧ್ಯಾರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT