ಶುಕ್ರವಾರ, ಏಪ್ರಿಲ್ 23, 2021
30 °C

ಕವಿಶೈಲಕ್ಕೆ ಮೆರುಗು ನೀಡಿದ್ದ ಸಿದ್ಧಾರ್ಥ

ಶಿವಾನಂದ ಕರ್ಕಿ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ಕವಿಶೈಲವನ್ನು ಚಿತ್ತಾಕರ್ಷಕವಾಗಿ ರೂಪುಗೊಳಿಸಿದ ಬೃಹತ್ ಗಾತ್ರದ ಕಲ್ಲುಗಳಿಗೂ, ಕಾಫಿ ಪೇಯವನ್ನು ವಿಶ್ವಕ್ಕೆ ಪರಿಚಯಿಸಿದ ಉದ್ಯಮಿ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರಿಗೂ ಅವಿನಾಭಾವ ಸಂಬಂಧವಿದೆ.

ತೇಜಸ್ವಿ ಅವರು ಕುಪ್ಪಳಿಗೆ ವಿಶ್ವಮಟ್ಟದ ಮೆರುಗು ನೀಡಬೇಕು ಎಂದು ಬಯಸಿದಾಗ ಸಿದ್ಧಾರ್ಥ ಅದಕ್ಕೆ ಸಾಥ್‌ ನೀಡಿದರು.

ಕಾಡಿನ ಜೀವ ಸಂಕುಲಕ್ಕೆ ಹಾನಿಯಾಗದ ರೀತಿಯಲ್ಲಿ ಕುವೆಂಪು ಸ್ಮಾರಕ ನಿರ್ಮಿಸಬೇಕು ಎಂಬ ಕನಸಿಗೆ ಕೈ ಜೋಡಿಸಿದ್ದ ಸಿದ್ಧಾರ್ಥ ಅವರು ಕಲಾವಿದ ಕೆ.ಟಿ. ಶಿವಪ್ರಸಾದ್ ಅವರ ಸಲಹೆಯಂತೆ ಕವಿಶೈಲ ರೂಪಿಸಲು ನೆರವಾಗಿದ್ದರು.

ಕವಿಶೈಲದಲ್ಲಿ ಚಿರಸ್ಥಾಯಿಯಾಗಿ ನೆಲೆನಿಂತ ಬೃಹತ್ ಗಾತ್ರದ ಕಲ್ಲುಗಳನ್ನು ನೀಡಿದವರು ಸಿದ್ಧಾರ್ಥ. ಲಕ್ಷಾಂತರ ಮೌಲ್ಯದ ಗ್ರಾನೈಟ್‌ ಕಲ್ಲುಗಳನ್ನು ಕಡೆದು
ಕುಪ್ಪಳಿಯ ಕವಿಶೈಲದ ಬೆಟ್ಟದ ಮೇಲೆ ತಂದು ನಿಲ್ಲಿಸುವುದು ಸಾಮಾನ್ಯದ ಕೆಲಸವಾಗಿರಲಿಲ್ಲ. ಅವರು ಎಲ್ಲಿಯೂ ತಮ್ಮ ಹೆಸರು ದಾಖಲಾಗದಂತೆ ನೋಡಿಕೊಂಡರು.

‘ಗ್ರೀಕ್ ಮಾದರಿಯ ಶಿಲ್ಪಕಲೆ ನೋಡುಗರನ್ನು ಬೆರಗುಗೊಳಿಸುವಂತಿರುವ ಕವಿಶೈಲದ ಕಲ್ಲಿನಲ್ಲಿ ಸಿದ್ಧಾರ್ಥ ಅವರ ನೆನಪನ್ನು ಪಿಸುಗುಡುತ್ತಿದೆ. ಅವರು ಮನಸ್ಸು ಮಾಡದೇ ಇದ್ದಿದ್ದರೆ ಕವಿಶೈಲವನ್ನು ಈ ಮಟ್ಟದಲ್ಲಿ ಚಂದಗಾಣಿಸಲು ಸಾಧ್ಯವಾಗುತ್ತಿರಲಿಲ್ಲವೇನೋ’ ಎಂದು ಕುಪ್ಪಳಿಯ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಪ್ರತಿಕ್ರಿಯಿಸಿದರು.

‘ಕಲಾತ್ಮಕ ಬಂಡೆ ನಿಲ್ಲಿಸಲು ಒಂದೂವರೆ ವರ್ಷ ತೆಗೆದುಕೊಳ್ಳಲಾಗಿದೆ. ಚೆನ್ನೈನಿಂದ ವಿಶೇಷ ಕ್ರೇನ್ ತರಿಸಿ ಈ ಕೆಲಸಮಾಡಿಸಿದ್ದರು.’ ಎಂದು ಪ್ರಕಾಶ್ ನೆನಪಿಸಿಕೊಂಡರು.

‘ಒಂದು ವರ್ಷದ ನಂತರ ಸಮಿತಿ ನಿರ್ಧಾರದಂತೆ ಕುಪ್ಪಳಿಯ ಕವಿಮನೆ ಬಳಿ ಸಿದ್ಧಾರ್ಥ ಅವರ ಅಜ್ಜ ವೀರಪ್ಪ ಹೆಗ್ಡೆ, ತಂದೆ ಗಂಗಯ್ಯ ಹೆಗ್ಡೆ, ಸಿದ್ಧಾರ್ಥ, ಚೇತನಹಳ್ಳಿ ಎಸ್ಟೇಟ್, ಬೇಲೂರು ತಾಲ್ಲೂಕು ಎಂದು ಫಲಕ ಹಾಕಿದ್ದೆವು’ ಎಂದಾಗ ಪ್ರಕಾಶ್‌ ಭಾವುಕರಾದರು.

ಜೆ.ಸಿ ಆಸ್ಪತ್ರೆಯಲ್ಲಿ ಜನನ: ಸಿದ್ಧಾರ್ಥ ಅವರ ತಂದೆ ಗಂಗಯ್ಯ ಹೆಗ್ಡೆ ಅವರನ್ನು ತೀರ್ಥಹಳ್ಳಿ ರೋಟರಿ ಸಂಸ್ಥೆ ಕಾರ್ಯಕ್ರಮವೊಂದರಲ್ಲಿ ಸನ್ಮಾನಿಸಲಾಗಿತ್ತು. ಆಗ ಮಾತನಾಡಿದ್ದ ಗಂಗಯ್ಯ ಹೆಗ್ಡೆ, ಸಿದ್ಧಾರ್ಥ ಇಲ್ಲಿನ ಸರ್ಕಾರಿ ಜಯಚಾಮ ರಾಜೇಂದ್ರ ಆಸ್ಪತ್ರೆಯಲ್ಲಿ ಜನಿಸಿದ್ದ ಮಾಹಿತಿ ಬಿಚ್ಚಿಟ್ಟಿದ್ದರು. ತಾಲ್ಲೂಕಿನ ಹೀರೇತೋಟ ಸಿದ್ಧಾರ್ಥ ಅವರ ತಾಯಿ ಮನೆ.

ತೀರ್ಥಹಳ್ಳಿಯೊಂದಿಗೆ ಸಿದ್ಧಾರ್ಥ ಅವರಿಗೆ ಬಿಡಿಸದ ನಂಟಿತ್ತು. ಎಸ್ಸೆಸ್ಸೆಲ್ಸಿಯನ್ನು ಶಿವಮೊಗ್ಗದ ದೇಶೀಯ ವಿದ್ಯಾ ಸಂಸ್ಥೆಯಲ್ಲಿ ಪೂರೈಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು