ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಂದ ಶೇ 84.30, ಪದವೀಧರರಿಂದ ಶೇ 66.821

ವಿಧಾನ ಪರಿಷತ್‌ ಚುನಾವಣೆ: ಸಾರ್ವತ್ರಿಕ ಚುನಾವಣೆಯನ್ನೂ ಮೀರಿಸಿದ ಮತದಾನ
Last Updated 14 ಜೂನ್ 2022, 16:23 IST
ಅಕ್ಷರ ಗಾತ್ರ

ಬೆಳಗಾವಿ:ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳನ್ನು ಒಳಗೊಂಡ ವಾಯವ್ಯ ಪದವೀಧರ ಕ್ಷೇತ್ರಕ್ಕೆ ಶೇ 66.81 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಶೇ 84.30 ಮತದಾನವಾಗಿದೆ.

2016 ಹಾಗೂ 2010ರಲ್ಲಿ ನಡೆದ ಚುನಾವಣೆಗಳಲ್ಲಿ ಇದೇ ಕ್ಷೇತ್ರಕ್ಕೆ ಶೇ 50ರ ಒಳಗೇ ಮತದಾನವಾಗಿತ್ತು. ಈ ಬಾರಿ ಅತಿ ಹೆಚ್ಚು ಯುವಜನರು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದರಿಂದ ಅಚ್ಚರಿ ರೀತಿಯಲ್ಲಿ ಮತದಾನವಾಗಿದೆ. ಸಾರ್ವತ್ರಿಕ ಚುನಾವಣೆಯನ್ನೂ ಮೀರಿಸುವ ರೀತಿಯಲ್ಲಿ ಶಿಕ್ಷಕರು, ಪದವೀಧರರು ತಮ್ಮ ಹಕ್ಕು ಬಳಸಿದರು.

ಈ ಮೂರು ಜಿಲ್ಲೆಗಳನ್ನು ಒಳಗೊಂಡಂತೆ ಶಿಕ್ಷಕರ ಕ್ಷೇತ್ರದಲ್ಲಿ 25,386 ಮತದಾರರು ಇದ್ದು, 21,401 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಅದೇ ರೀತಿ ಪದವೀಧರ ಕ್ಷೇತ್ರದಲ್ಲಿ99,598 ಮತದಾರರು ಇದ್ದು, 65,914 ಮಂದಿ ಹಕ್ಕು ಚಲಾಯಿಸಿದ್ದಾರೆ. ನಾಲ್ವರು ‘ಇತರೆ’ ಮತದಾರರು ಇದ್ದು, ಯಾರೊಬ್ಬರೂ ಮತ ಹಾಕಿಲ್ಲ.

ಎಲ್ಲಿ ಹೆಚ್ಚು, ಎಲ್ಲಿ ಕಡಿಮೆ: ಶಿಕ್ಷಕರ ಕ್ಷೇತ್ರಕ್ಕಾಗಿ ಸವದತ್ತಿ ತಾಲ್ಲೂಕಿನ ಹಿರೇಕುಂಬಿ ಹಾಗೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ನಂದಿಕೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ತೆರೆದ ಮತಗಟ್ಟೆಯಲ್ಲಿ ಶೇ 100ರಷ್ಟು ಮತದಾನವಾಗಿದೆ. ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳದ ವಿ.ವಿ. ಪ್ರೌಢಶಾಲೆಯಲ್ಲಿ ಶೇ 96.88ರಷ್ಟು ಮತದಾನವಾಗಿದ್ದು,ಎರಡನೇ ಸ್ಥಾನದಲ್ಲಿದೆ.

ಅದೇ ರೀತಿ, ಬಾಗಲಕೋಟೆ ಜಿಲ್ಲೆಯ ಸೈದಾಪುರ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಅತಿ ಕಡಿಮೆ ಅಂದರೆ; ಶೇ 46.15ರಷ್ಟು ಮತದಾನವಾಗಿದೆ. ಇಲ್ಲಿ ಇರುವ 13 ಮಂದಿ ಶಿಕ್ಷಕರಲ್ಲಿ ಕೇವಲ ಆರು ಮಂದಿ ಮಾತ್ರ ಹಕ್ಕು ಚಲಾಯಿಸಿದ್ದಾರೆ.

ಪದವೀಧರ ಕ್ಷೇತ್ರದಲ್ಲಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮದಭಾವಿ ಶಾಲೆಯಲ್ಲಿ ಶೇ 90.83 ಮತದಾನವಾಗುವ ಮೂಲಕ, ಹೆಚ್ಚು ಮತದಾನವಾದ ಮತಗಟ್ಟೆ ಎಂದು ಗುರುತಿಸಲಾಗಿದೆ.

ವಿಜಯ‍ಪುರ ಜಿಲ್ಲೆಯ ದರ್ಬಾರ್‌ ಗರ್ಲ್ಸ್‌ ಹೈಸ್ಕೂಲ್‌ನ ಮತಗಟ್ಟೆಯಲ್ಲಿ ಅತಿ ಕಡಿಮೆ ಅಂದರೆ; ಶೇ 42.89ರಷ್ಟು ದಾಖಲಾಗಿದೆ.

ತಡರಾತ್ರಿ ಬಂದ ಮತಪೆಟ್ಟಿಗೆಗಳು: ಸೋಮವಾರ ಸಂಜೆ 5ಕ್ಕೆ ಮತದಾನ ಪ್ರಕ್ರಿಯೆ ಮುಗಿದಿದ್ದರೂ ಇದರ ಪರಿಪೂರ್ಣ ವಿವರಗಳು ಸಿಗಲು ಮಂಗಳವಾರ ಮಧ್ಯಾಹ್ನ 12ರವರೆಗೂ ಕಾಯಬೇಕಾಯಿತು. ಬೆಳಗಾವಿಯಲ್ಲಿ 95, ಬಾಗಲಕೋಟೆಯಲ್ಲಿ 48, ವಿಜಯಪುರದಲ್ಲಿ 47 ಸೇರಿ 190 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಕ್ಷೇತ್ರದ ಅರ್ಧದಷ್ಟು ಮತದಾರರು ಬೆಳಗಾವಿ ಜಿಲ್ಲೆಯಲ್ಲೇ ಇರುವುದರಿಂದ ಅಂಕಿ ಅಂಶಗಳು ಸಿಗಲು ವಿಳಂಬವಾಗಿದೆ ಎಂದು ಚುನಾವಣಾ ಸಿಬ್ಬಂದಿ ತಿಳಿಸಿದರು.

ನೆರೆ ಜಿಲ್ಲೆಗಳ ಜೊತೆಗೆ, ದೂರದ ಅಥಣಿ, ರಾಯಬಾಗ, ಕಾಗವಾಡ ಮುಂತಾದ ಗಡಿ ಭಾಗಗಳಿಂದಲೂ ಮತಪೆಟ್ಟಿಗೆಗಳು ತಡರಾತ್ರಿಯವರೆಗೆ ಬೆಳಗಾವಿ ನಗರಕ್ಕೆ ಬಂದು ತಲುಪಿದವು. ಇಲ್ಲಿನ ಜ್ಯೋತಿ ಕಾಲೇಜಿನಲ್ಲಿ ತೆರೆದ ಮತ ಎಣಿಕೆ ಕೇಂದ್ರದಲ್ಲಿಯೇ ಎಲ್ಲ ಮತಪೆಟ್ಟಿಗೆಗಳು ಸ್ಟ್ರಾಂಗ್‌ರೂಮ್‌ ಸೇರಿದವು.

*

ಶೇ 100ರಷ್ಟು ಮತದಾನ!

ಶಿಕ್ಷಕರ ಕ್ಷೇತ್ರಕ್ಕಾಗಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹಿರೇಕುಂಬಿಯಲ್ಲಿ ತೆರೆದ ಮತಗಟ್ಟೆಯಲ್ಲಿ ಶೇ 100ರಷ್ಟು ಮತದಾನವಾಗಿದೆ. ಇಲ್ಲಿರುವ 25 ಶಿಕ್ಷಕರು ಹಾಗೂ ನಾಲ್ವರು ಶಿಕ್ಷಕಿಯರು ಸೇರಿ ಎಲ್ಲ 29 ಮಂದಿಯೂ ಹಕ್ಕು ಚಲಾವಣೆ ಮಾಡಿದ್ದಾರೆ. ಮತದಾನ ಆರಂಭವಾದ ಒಂದೇ ತಾಸಿನಲ್ಲಿ ಪೂರ್ಣ ಮತದಾನವಾಯಿತು.

ಅತಿ ಚಿಕ್ಕ ಮತಗಟ್ಟೆಯಲ್ಲೂ ಶೇ 100 ಸಾಧನೆ

ಶಿಕ್ಷಕರ ಕ್ಷೇತ್ರಕ್ಕಾಗಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ನಂದಿಕೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ತೆರೆದ ಮತಗಟ್ಟೆಯಲ್ಲಿ ಶೇ 100ರಷ್ಟು ಮತದಾನವಾಗಿದೆ. ಮೂರೂ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಸಾಧನೆ ಮಾಡಿದ ಮತಗಟ್ಟೆ ಎಂಬ ಕೀರ್ತಿಗೆ ಇದು ಪಾತ್ರವಾಗಿದೆ.

ವಿಶೇಷವೆಂದರೆ ಈ ಮತಗಟ್ಟೆಯಲ್ಲಿ ಇರುವುದು ಕೇವಲ 9 ಶಿಕ್ಷಕರು ಹಾಗೂ 2 ಶಿಕ್ಷಕಿಯರು! ಎಲ್ಲ 11 ಮಂದಿಯೂ ಬಂದು ಮತ ಹಾಕಿದರು. ಮೇಲಾಗಿ, ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾರರನ್ನು ಹೊಂದಿದ ಮತಗಟ್ಟೆ ಎಂಬ ‘ಹಿರಿಮೆ’ಯೂ ಇದಕ್ಕೆ ಸಿಕ್ಕಿದೆ.

*

ಶೇ 90ಕ್ಕೂ ಹೆಚ್ಚು ಮತದಾನ ಎಲ್ಲೆಲ್ಲಿ?

ಶಿಕ್ಷಕರ ಕ್ಷೇತ್ರ: ಸಂಕೇಶ್ವರದ ಟಿಎಂಸಿ ಬಿಲ್ಡಿಂಗ್ ಸಂಕೇಶ್ವರ, ಹುಕ್ಕೇರಿ ತಹಶೀಲ್ದಾರ್‌ ಕಚೇರಿ, ಅಂಕಲಗಿಯ ಟಿಪಿಸಿ ಕಚೇರಿ,ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯಿತಿ,ಕಿತ್ತೂರಿನ ಕೆಎನ್‌ವಿವಿಎಸ್‌,ರಾಯಬಾಗದ ಮಿನಿ ವಿಧಾನಸೌಧ, ಕಂಕಣವಾಡಿ ಟಿಪಿಸಿ ಅಧ್ಯಕ್ಷರ ಸಭಾಂಗಣ, ಹೊಸ‍ಪೇಟೆ, ಕೌಜಲಗಿ, ಕಾಕತಿ, ಬೆಳವಡಿ,ಮುರಗೋಡ,ಇಂಚಲ ಹಾಗೂ ಶಿರಸಂಗಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತೆರೆದ ಮತಗಟ್ಟೆಗಳಲ್ಲಿ ಶೇ 93ಕ್ಕೂ ಹೆಚ್ಚು ಮತದಾನವಾಗಿದೆ.

ಅದೇ ರೀತಿ, ಸವದತ್ತಿ ಎಸ್‌.ಕೆ. ಕಾಲೇಜ್‌,ಜಾಂಬೋಟಿಯ ಮಾರುತಿ ಪ‍್ರೌಢಶಾಲೆ,ನೇಸರಗಿಯ ಕುವೆಂಪು ಮಾದರಿ ಶಾಲೆ, ಇಟಗಿ, ಬೀಡಿ, ನಂದಗಡ, ಸಂಪಗಾಂವ, ನೇಗಿನಹಾಳ,ಯರಗಟ್ಟಿ, ಹೊಸೂರು, ಮುನವಳ್ಳಿ, ಹಿರೇಕುಂಬಿ, ಹುಲಕುಂದ, ಬಟಕುರ್ಕಿ ಶಾಲೆ, ಕಟಕೋಳ, ಐನಾಪುರ, ತೆಲಸಂಗ, ಮದಭಾವಿ, ಅಥಣಿ, ಕಾಗವಾಡ, ಉಗಾರ ಖುರ್ದ್‌ ಹಾಗೂ ಸತ್ತಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ತೆರೆದ ಮತಗಟ್ಟೆಗಳಲ್ಲಿ ಶೇ 90 ಮೀರಿದೆ.

ಆದರೆ, ಪದವೀಧರ ಕ್ಷೇತರದಲ್ಲಿ ಎಲ್ಲಿಯೂ ಮತದಾನ ಪ್ರಮಾಣ ಶೇ 90 ಮುಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT