ಬುಧವಾರ, ಅಕ್ಟೋಬರ್ 16, 2019
28 °C
ದೇವಾನು ದೇವತೆಗಳ ಮೆರವಣಿಗೆ,ಅಂಬುಛೇದನ, ರಾವಣ ಸಂಹಾರ, ಸಿಡಿ ಮದ್ದುಗಳ ಚಿತ್ತಾರ

ಅದ್ದೂರಿ ಶಿವಮೊಗ್ಗ ದಸರಾ ಮಹೋತ್ಸವಕ್ಕೆ ತೆರೆ

Published:
Updated:

ಶಿವಮೊಗ್ಗ:  ಕೋಟೆ ರಸ್ತೆಯ ಶಿವಪ್ಪ ನಾಯಕ ಬೇಸಿಗೆ ಅರಮನೆ ಮುಂಭಾಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೇಯರ್ ಲತಾ ಗಣೇಶ್ ಅವರು ಕೋಟೆ ರಸ್ತೆಯ ಶಿವಪ್ಪ ನಾಯಕ ಅರಮನೆ ಮುಂದೆ ನಂದಿ ಕೋಲಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಕಣ್ಮನ ಸೆಳೆದ ಆನೆ ಅಂಬಾರಿ:

ಬೆಳ್ಳಿಯ ಅಂಬಾರಿ ಹೊತ್ತ ಆನೆ ಸಾಗರನಿಗೆ ಭಾನುಮತಿ, ಗಂಗೆ ಇಕ್ಕೆಲಗಳಲ್ಲಿ ಸಾಥ್ ನೀಡಿದವು. ಬಂಗಾರ ಬಣ್ಣದ ಅಣೆಪಟ್ಟಿ, ವಿಭೂತಿ, ಕುಂಕುಮಗಳಿಂದ ಅಲಂಕೃತಗೊಂಡಿದ್ದ ಸಾಗರನ ಮೇಲೆ ಕ್ರೇನ್‌ ಮೂಲಕ ಬೆಳ್ಳಿ ಅಂಬಾರಿ ಇಟ್ಟು ನಂತರ ಅದರಲ್ಲಿ ಚಾಮುಂಡೇಶ್ವರಿ ಮೂರ್ತಿ ಕೂರಿಸಲಾಯಿತು.

ಚಾಮುಂಡೇಶ್ವರಿ ದೇವಿಯ ಹಿಂದೆ ನಗರದ ಎಲ್ಲ ದೇವಾನುದೇವತೆಗಳೂ ಮೆರವಣಿಯಲ್ಲಿ ಸಾಗಿದವು. ನಂದಿ ಕೋಲು ಕುಣಿತ, ವೀರಗಾಸೆ, ಮಂಗಳವಾದ್ಯಗಳ ತಂಡ, ಗೊಂಬೆ ಕುಣಿತ, ಕೇರಳದ ಕಲಾತಂಡಗಳು ಮೆವಣಿಗೆಗೆ ಮೆರಗು ತಂದಿದ್ದವು. ರಾಮಣ್ಣ ಶ್ರೇಷ್ಟಿ ಪಾರ್ಕ್, ಗಾಂಧಿ ಬಜಾರ್, ಬಿ.ಎಚ್.ರಸ್ತೆ, ಅಮೀರ್ ಅಹಮದ್ ವೃತ್ತ, ನೆಹರು ರಸ್ತೆ, ಗೋಪಿವೃತ್ತ, ಜೈಲು ರಸ್ತೆ ಮೂಲಕ ಮೆರವಣಿಗೆ ಹಳೇ ಕಾರಾಗೃಹದ ಮೈದಾನ ತಲುಪಿತು. ರಸ್ತೆಗಳ ಇಕ್ಕೆಲಗಳಲ್ಲಿ ಜನರು ಸಾಲಾಗಿ ನಿಂತು ಮೆರವಣಿಗೆ ವೀಕ್ಷಿಸಿದರು. ದಾರಿಯುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿದರು. ದೇವಾನುದೇವತೆಗಳ ದರ್ಶನ ಪಡೆದು ಪುನೀತರಾದರು.

ಜಾಗೃತಿ ಮೂಡಿಸಿದ ಚಿತ್ರಪಟಗಳು: ಮೆರವಣಿಗೆಯ ಮಧ್ಯೆ ಜಿಲ್ಲಾ ಅಪರಾಧ ವಿಭಾಗ, ಆರೋಗ್ಯ ಇಲಾಖೆಯ ಜಾಗೃತಿ ಮೂಡಿಸುವ ವಾಹನಗಳು ಗಮನ ಸಳೆದವು. ಸ್ತಬ್ಧ ಚಿತ್ರಗಳ ಜತೆ ಆನ್‌ಲೈನ್ ವಂಚನೆ, ಮುಂಜಾಗ್ರತೆ ಕುರಿತು ಮೈಕ್‌ ಮೂಲಕವೂ ಸಂದೇಶ ಬಿತ್ತರಿಸಲಾಯಿತು. ಪಾಲಿಕೆ ಸದಸ್ಯರು, ಅಧಿಕಾರಿಗಳು, ಬಹುತೇಕ ಮುಖಂಡರು ಬಿಳಿ ಪಂಚೆ, ಶಲ್ಯ ಧರಿಸಿ ಗಮನ ಸೆಳೆದರು.

ಅದ್ದೂರಿ ದಸರಾ ನೆನಪು: ಮೈಸೂರು ದಸರಾ ಮಾದರಿಯಲ್ಲೇ ದಶಕಗಳಿಂದ ಶಿವಮೊಗ್ಗ ದಸರಾ ಆಚರಿಸಿಕೊಂಡು ಬರಲಾಗುತ್ತಿದೆ. ರೈತ ದಸರಾ, ಕಲಾ ದಸರಾ, ಯುವ ದಸರಾ, ಆಹಾರ ದಸರಾ, ಸಾಂಸ್ಕೃತಿಕ ದಸರಾ, ಮಕ್ಕಳ ದಸರಾ, ಕ್ರೀಡಾ ದಸರಾ...ಹೀಗೆ ಹತ್ತು ಹಲವು ವೈವಿಧ್ಯಮಯ ಪ್ರಕಾರಗಳು ಅದ್ದೂರಿಯಾಗಿ 9 ದಿನಗಳು ನಡೆಯುತ್ತಾ ಬಂದಿವೆ.

ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸೆ.29ರಂದು ಕವಿ ಬಿ.ಆರ್. ಲಕ್ಷ್ಮಣರಾವ್ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದರು. ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ದಿನ ಸಂಜೆ 7ರಿಂದ ರಾತ್ರಿ 9ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಗರದ ವಿವಿಧ ದೇವಾಲಯಗಳಲ್ಲಿ 9 ದಿನಗಳೂ ನವರಾತ್ರಿ ವೈಭವ ಕಾರ್ಯಕ್ರಮಗಳು, ವಿವಿಧ ದೇವಿಯ ಪ್ರತಿಷ್ಠಾಪನೆ, ದೇವಿಗೆ ವಿಶೇಷ ಅಲಂಕಾರ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಸಪ್ತಶತಿ ಪಾರಾಯಣ, ಲಲಿತಾಷ್ಟೋತ್ತರ, ಕುಂಕುಮಾರ್ಚನೆ, ವಿಶೇಷ ಪುಷ್ಪ ಅಲಂಕಾರಗಳು, ವಿವಿಧ ಹೋಮ, ಹವನಗಳು, ಹೂವಿನ ಪೂಜೆ ನಡೆದಿದ್ದವು. ಮಂಗಳವಾರ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ ನೆರವೇರಿಸಿದ ಬಳಿಗ ದೇವಿಯ ವಿಗ್ರಹವನ್ನು ಅಲಂಕರಿಸಿ, ದಸರಾ ಮೆರವಣಿಗೆಗೆ ಕರೆ ತರಲಾಗಿತ್ತು. 

Post Comments (+)