ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಮೇಲೆ ಪೊಲೀಸರ ಕ್ಯಾಮೆರಾ ಕಣ್ಣು

ಬಯಲು ವಸ್ತು ಸಂಗ್ರಹಾಲಯದಲ್ಲಿ 128 ಸಿಸಿಟಿವಿ ಕ್ಯಾಮೆರಾ ಅಳವಡಿಕೆ
Last Updated 1 ಮಾರ್ಚ್ 2023, 8:04 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಶ್ವಪ್ರಸಿದ್ಧ ಹಂಪಿಯಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಕಾನೂನುಬಾಹಿರ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ವಿಜಯನಗರ ಜಿಲ್ಲಾ ಪೊಲೀಸರು ಈಗ ಹದ್ದಿನ ಕಣ್ಣಿಡಲು ಮುಂದಾಗಿದ್ದಾರೆ.

ಇದಕ್ಕಾಗಿ ‘ಬಯಲು ವಸ್ತು ಸಂಗ್ರಹಾಲಯ’ದ ಪರಿಸರದಲ್ಲಿ ಒಟ್ಟು 128 ಹೈಟೆಕ್‌ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುತ್ತಿದೆ. ಈ ಹಿಂದೆಯೇ ಪೊಲೀಸ್‌ ಇಲಾಖೆ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿತ್ತು. ಆದರೆ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಆಕ್ಷೇಪದ ಹಿನ್ನೆಲೆಯಲ್ಲಿ ಕೆಲಸ ನಿಂತಿತ್ತು. ಈಗ ಪುರಾತತ್ವ ಇಲಾಖೆಯ ಒಪ್ಪಿಗೆಯೊಂದಿಗೆ ಅದರ ನಿಯಮಗಳಿಗೆ ತಕ್ಕಂತೆ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.

ಈಗಾಗಲೇ ಕೇಬಲ್‌ ಹಾಕುವ ಕೆಲಸ ಪೂರ್ಣಗೊಂಡಿದೆ. ಅಲ್ಲಲ್ಲಿ ಕಂಬಗಳನ್ನು ನಿರ್ಮಿಸಿ, ಅವುಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಕೆಲಸ ಭರದಿಂದ ನಡೆಯುತ್ತಿದೆ. ಹಂಪಿಗೆ ಪ್ರವೇಶಿಸುವ ಮಾರ್ಗದಿಂದ ತುಂಗಭದ್ರಾ ನದಿ ತಟಕ್ಕೆ ಹೊಂದಿಕೊಂಡಿರುವ ಭಾಗದಲ್ಲೆಲ್ಲಾ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಯಾರೇ ಬಂದು ಹೋದರೂ ಅವರ ಮೇಲೆ ನಿಗಾ ಇಡಲು ಸಹಾಯಕವಾಗಲಿದೆ.

ಹಂಪಿಗೆ ಬರುವ ಕಮಲಾಪುರ ಮಾರ್ಗ, ರಾಣಿ ಸ್ನಾನಗೃಹ, ಕಮಲ್‌ ಮಹಲ್‌, ಮಹಾನವಮಿ ದಿಬ್ಬ, ನೆಲಸ್ತರ ಶಿವ ದೇವಾಲಯ, ಯಂತ್ರೋದ್ಧಾರಕ, ಕೃಷ್ಣ ದೇವಸ್ಥಾನ, ಕಡಲೆಕಾಳು, ಸಾಸಿವೆಕಾಳು ಗಣಪ, ಹೇಮಕೂಟ, ವಿರೂಪಾಕ್ಷೇಶ್ವರ ದೇವಸ್ಥಾನ, ಎದುರು ಬಸವಣ್ಣ ಮಂಟಪ, ತುಂಗಭದ್ರಾ ನದಿಗೆ ಹೊಂದಿಕೊಂಡಿರುವ ರಾಮ–ಲಕ್ಷ್ಮಣ ದೇವಸ್ಥಾನ, ವಿಜಯ ವಿಠಲ ದೇವಸ್ಥಾನ ಸೇರಿದಂತೆ ಹಂಪಿಗೆ ಪ್ರವಾಸಿಗರು ಬಂದು ಹೋಗುವ, ಅವರು ಓಡಾಡುವ ಸ್ಥಳಗಳಲ್ಲಿ ಈ ಕ್ಯಾಮೆರಾಗಳು ಕಾರ್ಯನಿರ್ವಹಿಸಲಿವೆ.

ಹಂಪಿ ‘ಬಯಲು ವಸ್ತು ಸಂಗ್ರಹಾಲಯ’ ಎಂದೇ ಹೆಸರಾಗಿದೆ. ಅದರ ಹರವು ಬಹಳ ವಿಸ್ತಾರವಾಗಿರುವುದರಿಂದ ಪ್ರವಾಸಿಗರ ಚಲನವಲನಗಳ ಮೇಲೆ ನಿಗಾ ಇಡುವುದು ಸುಲಭದ ಕೆಲಸವಲ್ಲ. ಇದನ್ನು ಮನಗಂಡಿರುವ ಪೊಲೀಸ್‌ ಇಲಾಖೆಯು, ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳ ಮೊರೆ ಹೋಗಿದೆ. ಈಗ ಠಾಣೆಯಲ್ಲಿಯೇ ಕುಳಿತು ಪ್ರತಿಯೊಬ್ಬರ ಮೇಲೆ ನಿಗಾ ಇಟ್ಟು, ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬಹುದು.

ಇತ್ತೀಚೆಗೆ ಹಂಪಿ ಪುರಂದರದಾಸರ ಮಂಪಟದೊಳಗೆ ಕುಳಿತು ವಿದೇಶಿ ಪ್ರವಾಸಿಗರು ಮದ್ಯ ಸೇವಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅದಾದ ಬಳಿಕ ವಿಜಯ ವಿಠಲ ದೇವಸ್ಥಾನದ ಪರಿಸರದಲ್ಲಿ ಪ್ರವಾಸಿಗರು ಸ್ಮಾರಕದ ಮೇಲೆ, ಒಳಗೆ ಬೇಕಾಬಿಟ್ಟಿ ಓಡಾಡಿ ಹುಚ್ಚಾಟ ಮೆರೆದಿದ್ದರು. ಯುವಕನೊಬ್ಬ ಹಂಪಿ ಹೇಮಕೂಟದ ಮೇಲೇರಿ ವಿಡಿಯೊ ಚಿತ್ರೀಕರಿಸಿದ್ದ. ಇದಕ್ಕೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಪೊಲೀಸ್‌ ಇಲಾಖೆಯು ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಸಂರಕ್ಷಿತ ಸ್ಮಾರಕದ ಮೇಲೆ ಡಾನ್ಸ್‌: ಪುರಾತತ್ವ ಇಲಾಖೆಯಿಂದ ದೂರು

ಹಂಪಿ ಹೇಮಕೂಟ ಸಂರಕ್ಷಿತ ಸ್ಮಾರಕ ಹಾಗೂ ಅದರ ಪರಿಸರದಲ್ಲಿ ಡಾನ್ಸ್‌ ಮಾಡಿ ಅದರ ವಿಡಿಯೊ ಚಿತ್ರೀಕರಿಸಿ ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ‘ರೀಲ್ಸ್‌’ ಮಾಡಿದ ಯುವಕನ ವಿರುದ್ಧ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (ಎಎಸ್‌ಐ) ಅಧಿಕಾರಿಗಳು ಮಂಗಳವಾರ ಹಂಪಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ.

‘ಎಎಸ್‌ಐ ಅಧಿಕಾರಿಗಳು ಕೊಟ್ಟಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುವುದು. ಸಂರಕ್ಷಿತ ಸ್ಮಾರಕದ ಮೇಲೆ ಡಾನ್ಸ್‌ ಮಾಡಿರುವ ಯುವಕ ಮಂಡ್ಯದ ದೀಪಕ್‌ ಗೌಡ ಎಂದು ಗೊತ್ತಾಗಿದೆ. ರಾಜ್ಯದ ಬೇಲೂರು, ಹಳೆಬೀಡು, ಬಾದಾಮಿ, ಪಟ್ಟದಕಲ್ಲು ಸೇರಿದಂತೆ ಹಲವು ಸ್ಮಾರಕಗಳ ಬಳಿ ಇದೇ ರೀತಿ ವಿಡಿಯೊ ಚಿತ್ರೀಕರಿಸಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಷಯ ಗೊತ್ತಾಗಿದೆ’ ಎಂದು ಹಂಪಿ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಶಿವರಾಜ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT