ಮಂಗಳವಾರ, ಏಪ್ರಿಲ್ 20, 2021
27 °C

ದರೋಡೆಗೆ ಹೊಂಚು ಹಾಕಿದ್ದ13 ದರೋಡೆಕೋರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯನಗರ (ಹೊಸಪೇಟೆ): ದರೋಡೆಗೆ ಹೊಂಚು ಹಾಕಿ ಪೂರ್ವ ತಯಾರಿ ಮಾಡಿಕೊಂಡು ನಗರದಲ್ಲಿ ತಂಗಿದ್ದ 13 ಜನ ದರೋಡೆಕೋರರನ್ನು ಇಲ್ಲಿನ ಪಟ್ಟಣ ಠಾಣೆ ಪೊಲೀಸರು ಗುರುವಾರ ನಗರದಲ್ಲಿ ಬಂಧಿಸಿದ್ದಾರೆ.

ಬೆಂಗಳೂರಿನ ಜಮೀರ್‌ ಪಾಷಾ, ಮೊಹಮ್ಮದ್‌ ಅಯಾನ್‌, ಯಾಸೀನ್‌, ಸೈಯದ್‌ ಅಮೀನ್‌, ಜಾವೇದ್‌ ಬಾಷಾ, ಸೈಯದ್‌ ಇಮ್ತಿಯಾಜ್‌, ಸ್ಥಳೀಯರಾದ ನಾಲ್ಪರ್‌ ಖಾಸಿಂ, ಇಸ್ಮಾಯಿಲ್‌, ಮಂಜುನಾಥ, ಸುರೇಶ, ನಾಗೇಶ, ರಾಘವೇಂದ್ರ ರೆಡ್ಡಿ ಹಾಗೂ ಶೇಖರ್‌ ಬಂಧಿತರು. ದರೋಡೆಕೋರರ ತಂಡದ ಮುಖ್ಯ ಆರೋಪಿ ಸದ್ದಾಂ ಹುಸೇನ್ ಪರಾರಿಯಾಗಿದ್ದಾನೆ.

‘ಬೆಂಗಳೂರಿನ ಇಸ್ಲಾಂಪುರದ ಸದ್ದಾಂ ಹುಸೇನ್‌ ಎನ್ನುವ ಆರೋಪಿಗೆ ಚಿಕ್ಕಬಳ್ಳಾಪುರ ಜೈಲಿನಲ್ಲಿ ಪರಿಚಯವಾಗಿದ್ದ ಸಂಡೂರು ಮೂಲದ, ಹೊಸಪೇಟೆಯ ಚಿತ್ತವಾಡ್ಗಿ ನಿವಾಸಿ ನಾಲ್ಪರ್‌ ಖಾಸಿಂನೊಂದಿಗೆ ನಗರಕ್ಕೆ ಬಂದು ಇಲ್ಲಿನ ಶ್ರೀಮಂತರ ಮನೆಗಳನ್ನು ನೋಡಿಕೊಂಡು, ದರೋಡೆ ಮಾಡಲು ಹೊಂಚು ಹಾಕಿದ್ದರು’ ಎಂದು ಪ್ರಭಾರ ಡಿವೈಎಸ್ಪಿ ಎಸ್‌.ಎಸ್‌. ಕಾಶಿಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ದರೋಡೆಗೆ ಹೊಂಚು ಹಾಕಿದ್ದು, ಅವರನ್ನು ಬಂಧಿಸಲು ತಂಡ ರಚಿಸುವಂತೆ ಐಜಿಪಿ ನಂಜುಂಡಸ್ವಾಮಿ ಸೂಚನೆ ಕೊಟ್ಟಿದ್ದರು. ಅದರಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಶ್ರೀನಿವಾಸ ರಾವ್‌ ಹಾಗೂ ಬಿ. ಕುಮಾರ್‌ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿತ್ತು. ತಂಡವು ತನಿಖೆ ನಡೆಸಿ, ಅವರನ್ನು ಬಂಧಿಸಲು ಯಶಸ್ವಿಯಾಗಿದೆ. ಈ ತಂಡ ರಾಜ್ಯದ ಹಲವೆಡೆಗಳಲ್ಲಿ ದರೋಡೆ ನಡೆಸಲು ಹುಟ್ಟಿಕೊಂಡಿದೆ’ ಎಂದು ಹೇಳಿದರು.

‘ಬಂಧಿತರಿಂದ ಎರಡು ಕಾರು, 13 ಮೊಬೈಲ್, ಡಕಾಯತಿ ವೇಳೆ ಬಳಸಲು ಇಟ್ಟುಕೊಂಡಿದ್ದ ಮಂಕಿಕ್ಯಾಪ್, ಮನುಷ್ಯರ ಬಾಯಿಗೆ ಹಾಕಲು ಪ್ಲಾಸ್ಟರ್, ಹಗ್ಗ, ಟಾರ್ಚ್, ಖಾರದ ಪುಡಿ ಹಾಗೂ ಕಬ್ಬಿಣದ ರಾಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಐಪಿ‌ಸಿ ಸೆಕ್ಷನ್ 402 ಅಡಿ ಡಕಾಯಿತಿ ಉದ್ದೇಶದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.

ಕಾರ್ಯಾಚರಣೆಯಲ್ಲಿ ಪಟ್ಟಣ ಠಾಣೆಯ ಸಿಬ್ಬಂದಿ ಕೋದಂಡಪಾಣಿ, ಉಮಾಶಂಕರ, ಜಾವೇದ್ ಅಶ್ರಫ್, ಶ್ರೀರಾಮ ರೆಡ್ಡಿ, ಗಾಳೆಪ್ಪ, ಮಂಜುನಾಥ್, ಶ್ರೀನಿವಾಸ್, ಫಣಿರಾಜ್, ಲಿಂಗರಾಜ್, ತಿಮ್ಮಪ್ಪ, ಅಡಿವೆಪ್ಪ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು