ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿಶ್ವವಿದ್ಯಾಲಯಕ್ಕೆ ₹20 ಕೋಟಿ–ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

ಎಂ.ಪಿ. ಪ್ರಕಾಶ ಅಧ್ಯಯನ ಪೀಠ ಸ್ಥಾಪನೆ
Last Updated 17 ಏಪ್ರಿಲ್ 2022, 5:00 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಫೆಲೋಶಿಪ್‌, ತಾತ್ಕಾಲಿಕ ನೌಕರರ ವೇತನ ಬಿಡುಗಡೆಯ ಸಮಸ್ಯೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದು, ತಕ್ಷಣವೇ ₹20 ಕೋಟಿ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ನೂತನ ಐದು ಕಟ್ಟಡಗಳ ಉದ್ಘಾಟನೆ, 128 ಪುಸ್ತಕಗಳ ಬಿಡುಗಡೆ, ಸಂಚಾರಿ ಗ್ರಂಥಾಲಯ ವಾಹನ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಸ.ಚಿ. ರಮೇಶ ಅವರು, ಅಗತ್ಯ ಮೂಲಸೌಕರ್ಯ, ವಿದ್ಯಾರ್ಥಿಗಳ ಶಿಷ್ಯವೇತನ, ಹೊರಗುತ್ತಿಗೆ ಸಿಬ್ಬಂದಿ ಬಾಕಿ ವೇತನಕ್ಕಾಗಿ ₹80 ಕೋಟಿ ಅನುದಾನ ಸರ್ಕಾರ ನೀಡಬೇಕೆಂದು ಮನವಿ ಮಾಡಿದರು.

ಅದಕ್ಕೆ ಮುಖ್ಯಮಂತ್ರಿಯವರು ಅವರ ಭಾಷಣದಲ್ಲಿ ಮಾತನಾಡುತ್ತ, ಭಾಷೆಯ ಸಮೃದ್ಧಿಗೆ ಶ್ರಮಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಗತ್ಯ ಸೌಕರ್ಯ, ವಿದ್ಯಾರ್ಥಿಗಳ ಶಿಷ್ಯ ವೇತನ, ನೌಕರರ ವೇತನಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮುಖ್ಯಮಂತ್ರಿ ವಿವೇಚನಾ ಕೋಟಾದಡಿ ₹20 ಕೋಟಿ ತಕ್ಷಣವೇ ಬಿಡುಗಡೆಗೆ ಕ್ರಮ ಜರುಗಿಸಲಾಗುವುದು. ಮಿಕ್ಕುಳಿದ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಆಗ ಸಭಾಂಗಣದಲ್ಲಿ ಕರತಾಡನ ಮುಗಿಲು ಮುಟ್ಟಿತ್ತು.

ಕನ್ನಡ ವಿಶ್ವವಿದ್ಯಾಲಯದ 10 ವಿಸ್ತರಣಾ ಕೇಂದ್ರಗಳು ರಾಜ್ಯದ 30 ಜಿಲ್ಲೆಗಳಲ್ಲಿ ತಲಾ 3 ಜಿಲ್ಲೆಗಳನ್ನು ಒಂದೊಂದು ವಿಸ್ತರಣಾ ಕೇಂದ್ರಗಳು ಕನ್ನಡ ಪಸರಿಸುವ, ಕನ್ನಡದ ವಿವಿಧ ಆಯಾಮಗಳಲ್ಲಿ ಸಂಶೋಧಿಸುವ ಮತ್ತು ಅಧ್ಯಯನ ನಡೆಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

‘ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಗೆ ಶ್ರಮಿಸಿದ ಮಾಜಿ ಉಪಮುಖ್ಯಮಂತ್ರಿ ದಿಂ.ಎಂ.ಪಿ.ಪ್ರಕಾಶ ಅವರ ಹೆಸರಿನಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ಅಧ್ಯಯನ ಪೀಠ ಹೇಗಿರಬೇಕು ಮತ್ತು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದರ ಯೋಜನಾ ರೂಪುರೇಷೆಗಳನ್ನು ಸಿದ್ದಪಡಿಸಬೇಕು’ ಎಂದು ಕುಲಪತಿಗೆ ಸೂಚನೆ ನೀಡಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಾರಿಗೆ ಸಚಿವ ಬಿ.ಶ್ರೀರಾಮುಲು, ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಸೋಮಶೇಖರ್ ರೆಡ್ಡಿ, ವೈ.ಎಂ.ಸತೀಶ್, ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ, ಎಸ್ಪಿ ಡಾ.ಅರುಣ್ ಕೆ., ಪ್ರಸಾರಂಗದ ನಿರ್ದೇಶ ಶೈಲಜಾ ಹಿರೇಮಠ, ವಿ.ವಿ ತಾಂತ್ರಿಕ ವಿಭಾಗದ ಮುಖ್ಯಸ್ಥ ಜೆ.ಎಸ್.ನಂಜಯ್ಯನವರ್, ಎಂಎಸ್‌ಪಿಲ್‌ ಸಮೂಹದ ವ್ಯವಸ್ಥಾಪಕ ನಿರ್ದೇಶಕ ನರೇಂದ್ರಕುಮಾರ್ ಬಲ್ದೋಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT