ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ವಿಜಯನಗರಕ್ಕೆ ₹50 ಕೋಟಿಗೆ ಬೇಡಿಕೆ

ಮುಖ್ಯಮಮಂತ್ರಿ ಯಡಿಯೂರಪ್ಪಗೆ ಕೋರಿಕೆ; ಸಚಿವ ಆನಂದ್‌ ಸಿಂಗ್‌
Last Updated 22 ಫೆಬ್ರುವರಿ 2021, 11:03 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ‘ನೂತನ ವಿಜಯನಗರ ಜಿಲ್ಲೆಗೆ ಬಜೆಟ್‌ನಲ್ಲಿ ₹50 ಕೋಟಿ ಮೀಸಲಿಡುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದೇನೆ. ಅದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ’ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

‘ಜಿಲ್ಲೆಯ ಅಭಿವೃದ್ಧಿಗೆ ಕಂದಾಯ ಇಲಾಖೆಯ ಹಣ ಕೂಡ ಬಳಸಿಕೊಳ್ಳಬಹುದಾಗಿದೆ. ಅದಕ್ಕೆ ಕಂದಾಯ ಇಲಾಖೆ ಒಪ್ಪಿಗೆ ನೀಡಿದೆ. ಇಷ್ಟರಲ್ಲೇ ಜಿಲ್ಲೆಗೆ ವಿಶೇಷ ಅಧಿಕಾರಿ ಬರುತ್ತಾರೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆ ಮಾತುಕತೆ ನಡೆಸಿರುವೆ’ ಎಂದು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

₹6 ಕೋಟಿಯಲ್ಲಿ ಸುರಂಗ ಅಭಿವೃದ್ಧಿ:

‘₹6 ಕೋಟಿಯಲ್ಲಿ ನಗರ ಹೊರವಲಯದ ಸುರಂಗ ಮಾರ್ಗ ಅಭಿವೃದ್ಧಿ ಪಡಿಸಲಾಗುವುದು. ಗುಂಡಾ ಸಸ್ಯ ಉದ್ಯಾನದ ಕಡೆಯಿಂದ ಸುರಂಗ ಮಾರ್ಗಕ್ಕೆ ಬರುವ ಭಾಗದಲ್ಲಿ ತಾಯಿ ಭುವನೇಶ್ವರಿ ದೇವಿ ಮೂರ್ತಿ ಕೂರಿಸಲಾಗುವುದು. ಇನ್ನೊಂದು ಭಾಗದಲ್ಲಿ ಸುಂದರವಾದ ಉದ್ಯಾನ ನಿರ್ಮಿಸಲಾಗುವುದು. ಈಗಾಗಲೇ ಸುರಂಗದ ಒಳಗೆ ಬಿಳಿ ಬಣ್ಣ ಬಳಿದು, ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ’ ಎಂದು ವಿವರಿಸಿದರು.

‘ಸೋಗಿ ತಾತ್ಕಾಲಿಕ ಮಾರುಕಟ್ಟೆ ಬಳಿ ನಿರ್ಮಿಸಲು ಉದ್ದೇಶಿಸಿರುವ ಬಹುಅಂತಸ್ತಿನ ವಾಣಿಜ್ಯ ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ಈಗಾಗಲೇ ಸರ್ಕಾರದಿಂದ ₹13.5 ಕೋಟಿ ಮಂಜೂರಾಗಿದೆ. ಆದರೆ, ನಗರಾಭಿವೃದ್ಧಿ ಇಲಾಖೆಯ ಬಳಿ ದುಡ್ಡಿಲ್ಲ. ಜಿಲ್ಲಾ ಖನಿಜ ನಿಧಿಯಿಂದ ಕೆಲಸ ಮಾಡಿಸಲಾಗುವುದು. ಅದೇ ರೀತಿ ಬಾಲಕಿಯರ ಪ್ರೌಢಶಾಲೆ, ಇಂಗಳಗಿ ರಸ್ತೆ ನಿರ್ಮಾಣ ಕೆಲಸ ಇನ್ನೆರಡು ತಿಂಗಳಲ್ಲಿ ಆರಂಭಗೊಳ್ಳಲಿದೆ. ಎಂ.ಪಿ. ಪ್ರಕಾಶ್‌ ರಂಗಮಂದಿರ ಸಹ ಮೇಲ್ದರ್ಜೆಗೆ ಏರಿಸಲಾಗುವುದು’ ಎಂದು ತಿಳಿಸಿದರು.

‘ಹೊಸಪೇಟೆ ನಗರಸಭೆ ಮೇಲ್ದರ್ಜೆಗೇರಿಸಿ, ಅದನ್ನು ಮಹಾನಗರ ಪಾಲಿಕೆ ಮಾಡಲು ಚಿಂತಿಸಲಾಗುತ್ತಿದೆ. ಅದಕ್ಕೆ ಏನೇನು ಅರ್ಹತೆಗಳಿರಬೇಕು ಎನ್ನುವುದರ ಕುರಿತು ಪರಿಶೀಲಿಸಿ, ಪೂರೈಸಲಾಗುವುದು. ಪಾಲಿಕೆಯಾದರೆ ಪ್ರತಿ ವರ್ಷ ಸರ್ಕಾರದಿಂದ ₹100 ಕೋಟಿ ಅನುದಾನ ಬರುತ್ತದೆ. ಪಿಡಬ್ಲ್ಯೂಡಿ ಕಟ್ಟಡವಿರುವ ಜಾಗದಲ್ಲಿ ಪಾಲಿಕೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಬರುವ ದಿನಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲಾಗುವುದು’ ಎಂದರು.

‘ಬಳ್ಳಾರಿ ನಗರವನ್ನು ಸ್ಮಾರ್ಟ್‌ ಸಿಟಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಹೊಸಪೇಟೆಗಿಂತ ಅದು ದೊಡ್ಡ ನಗರವಾಗಿರುವುದರಿಂದ ಅದಕ್ಕೆ ಅಗತ್ಯವಿದೆ. ಎಲ್ಲ ಅರ್ಹತೆಗಳು ಕೂಡ ಇವೆ’ ಎಂದು ಹೇಳಿದರು.

ದಾಖಲೆ ಸರಿಯಿದ್ದರೆ ಫಾರಂ 3 ಸಮಸ್ಯೆಯಿಲ್ಲ:

‘ಎಲ್ಲ ದಾಖಲೆಗಳು ಸರಿಯಿದ್ದರೆ ನಗರಸಭೆಯಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಫಾರಂ ನಂಬರ್‌ 3 ಪಡೆಯಬಹುದು. ಆದರೆ, ತಾಂತ್ರಿಕವಾಗಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಫಾರಂ ಸಿಗುವುದಿಲ್ಲ. ಆಸ್ತಿ ವಿವಾದ ಅಥವಾ ಬೇರೆ ಏನಾದರೂ ತೊಡಕುಗಳಿದ್ದರೆ ಕೆಲಸ ಆಗುವುದಿಲ್ಲ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಕುರುಬರ ಮನವೊಲಿಸುವೆ’
‘ನಗರದ ಕನಕದಾಸ ವೃತ್ತದ ಬಳಿ ನಿರ್ಮಿಸುತ್ತಿರುವ ಇನ್ನೊಂದು ವೃತ್ತದಲ್ಲಿ ‘ಕ್ವಿಟ್‌ ಇಂಡಿಯಾ’ ಸ್ವಾತಂತ್ರ್ಯ ಹೋರಾಟದ ಚಳವಳಿ ನೆನಪಿಸುವ ಮೂರ್ತಿ ಪ್ರತಿಷ್ಠಾಪಿಸಿ ವೃತ್ತ ಅಭಿವೃದ್ಧಿ ಪಡಿಸಲಾಗುವುದು. ಈ ಕುರಿತು ಕುರುಬ ಸಮಾಜದ ಜನರೊಂದಿಗೆ ಚರ್ಚಿಸುವೆ. ಅವರ ಮನವೊಲಿಸಿದ ನಂತರವೇ ಕೆಲಸ ಕೈಗೆತ್ತಿಕೊಳ್ಳಲಾಗುವುದು’ ಎಂದು ಸಚಿವ ಆನಂದ್‌ ಸಿಂಗ್‌ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಕೃಷ್ಣದೇವರಾಯ, ವಿವೇಕಾನಂದ ಮೂರ್ತಿ’
‘ನಗರ ಹೊರವಲಯದ ಜೋಳದರಾಶಿ ಗುಡ್ಡದಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಭರದಿಂದ ನಡೆದಿದೆ. ಮೇಲ್ಭಾಗದಲ್ಲಿ ಕೃಷ್ಣದೇವರಾಯನ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಗುಡ್ಡದ ಕೆಳಭಾಗದಲ್ಲಿ ಸ್ವಾಮಿ ವಿವೇಕಾನಂದ ಟ್ರಸ್ಟ್‌ನವರಿಗೆ ಸೇರಿದ ಎರಡು ಎಕರೆ ಜಾಗವಿದೆ. ಅಲ್ಲಿ ವಿವೇಕಾನಂದರ ಮೂರ್ತಿ ಕೂರಿಸಲಾಗುವುದು. ವಿವೇಕಾನಂದರ ಮೂರ್ತಿ ಕೂರಿಸುವ ವಿಚಾರದಲ್ಲಿ ನನಗೆ ಯಾವುದೇ ರೀತಿಯ ತಕರಾರು ಇಲ್ಲ’ ಎಂದು ಆನಂದ್‌ ಸಿಂಗ್‌ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT