ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳ ದುರಸ್ತಿ, ನವೀಕರಣ ಮತ್ತು ಮೂಲಸೌಕರ್ಯಕ್ಕೆ ₹53 ಕೋಟಿ ಅನುದಾನ, ಮೊದಲ ಹಂತದಲ್ಲಿ 11 ಜಿಲ್ಲಾ ಕಚೇರಿಗಳ ಪ್ರಾರಂಭಕ್ಕೆ ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
‘ಎರಡು ಹಂತಗಳಲ್ಲಿ ಹುದ್ದೆಗಳ ಸೃಜನೆ ಮಾಡಲಾಗುವುದು. ಮೊದಲ ಹಂತದಲ್ಲಿ ಸಾರ್ವಜನಿಕರು ಹೆಚ್ಚಾಗಿ ಭೇಟಿ ನೀಡುವ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತಿ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿ, ಭೂದಾಖಲೆಗಳ ಉಪನಿರ್ದೇಶಕರ ಕಚೇರಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ನಗರ ಯೋಜನೆ ಹಾಗೂ ಅರಣ್ಯ ಇಲಾಖೆಗಳ ಕಚೇರಿಗಳನ್ನು ಪ್ರಾರಂಭಿಸಲಾಗುವುದು’ ಎಂದು ಬೊಮ್ಮಾಯಿ ತಿಳಿಸಿದರು.
‘ಸದ್ಯ ಕೆಲವು ಅಧಿಕಾರಿಗಳನ್ನು ಬಳ್ಳಾರಿಯಿಂದ ಕಳಿಸಿ, ಜಿಲ್ಲಾಮಟ್ಟದ ಕಚೇರಿ ಸ್ಥಾಪಿಸಲಾಗುವುದು. ಜಿಲ್ಲಾ ಕಚೇರಿಗಳ ನಿರ್ಮಾಣಕ್ಕೆ ಕರ್ನಾಟಕ ಗೃಹಮಂಡಳಿಯ 83 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಎರಡು ಹಂತಗಳಲ್ಲಿ ಅನುದಾನ ಬಿಡುಗಡೆಗೊಳಿಸಲಾಗುವುದು’ ಎಂದು ಹೇಳಿದರು.
‘ಅನಗತ್ಯವಾಗಿ ಸ್ಥಳ ವ್ಯರ್ಥ ಮಾಡದೆ, ಕಾರ್ಯನಿರ್ವಹಣೆಗೆ ಪೂರಕವಾಗಿ ಸುಸಜ್ಜಿತ ಜಿಲ್ಲಾಡಳಿತ ಭವನದ ನೀಲ ನಕಾಶೆ ತಯಾರಿಸಬೇಕು. ಬಳ್ಳಾರಿ ಜಿಲ್ಲಾ ಖನಿಜ ನಿಧಿಗೆ ಸಂಬಂಧಿಸಿದಂತೆ ಈಗಾಗಲೇ 2023-24ರ ವರೆಗೆ ಅನುಮೋದನೆಯಾಗಿರುವ ಕ್ರಿಯಾಯೋಜನೆಯನ್ನು ಜಾರಿಗೊಳಿಸಲಾಗುವುದು. ನಂತರ ಜಿಲ್ಲಾ ಖನಿಜ ನಿಧಿಯನ್ನು ಎರಡೂ ಜಿಲ್ಲೆಗಳ ನಡುವೆ ಹಂಚಿಕೆ ಮಾಡುವ ಸೂತ್ರ ರೂಪಿಸಲಾಗುವುದು’ ಎಂದು ತಿಳಿಸಿದರು.
‘ವಿಜಯನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಹಂಪಿ ಸೇರಿದಂತೆ ಇತರೆ ಪಾರಂಪರಿಕ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಚರ್ಚಿಸಲಾಗುವುದು’ ಎಂದರು.
ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಲೋಕೋಪಯೋಗಿ ಮತ್ತು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಅನಿರುದ್ಧ ಪಿ. ಶ್ರವಣ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.