ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಎಫ್‌ಐಆರ್‌ ಹಾಕಿದ್ದಕ್ಕೆ ಪೊಲೀಸ್ ಠಾಣೆ ವಿದ್ಯುತ್‌ ಸಂಪರ್ಕ ಕಡಿತ!

ನಿಯಮದನ್ವಯ ಡಿ.ಜೆ ಬಳಕೆಗೆ ಅನುಮತಿ: ಎಸ್ಪಿ
Last Updated 3 ಸೆಪ್ಟೆಂಬರ್ 2022, 17:54 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಗಣಪನ ಮೂರ್ತಿ ವಿಸರ್ಜನೆ ವೇಳೆ ತಡರಾತ್ರಿ ಡಿ.ಜೆ. ಬಳಸಿ ನಿಯಮ ಉಲ್ಲಂಘಿಸಿದ ಜೆಸ್ಕಾಂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಅದರಿಂದ ಸಿಟ್ಟಿಗೆದ್ದು ನಗರದ ಬಡಾವಣೆ ಪೊಲೀಸ್‌ ಠಾಣೆಯ ವಿದ್ಯುತ್‌ ಕಡಿತಗೊಳಿಸಿರುವ ಘಟನೆ ಶನಿವಾರ ನಡೆದಿದೆ.

ಶುಕ್ರವಾರ ತಡರಾತ್ರಿ ಜೆಸ್ಕಾಂ ಸಿಬ್ಬಂದಿ ಗಣಪನ ಮೂರ್ತಿ ವಿಸರ್ಜನೆ ವೇಳೆ ನಿಯಮ ಮೀರಿ ಡಿ.ಜೆ. ಹಾಕಿಕೊಂಡು ಕುಣಿಯುತ್ತಿದ್ದರು. ಅದನ್ನು ತಡೆದ ಪೊಲೀಸರು, ಹತ್ತು ಜನ ಜೆಸ್ಕಾಂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರಿಂದ ಸಿಟ್ಟಿಗಾದ ಜೆಸ್ಕಾಂ ಸಿಬ್ಬಂದಿ ಗಂಟೆಗೂ ಹೆಚ್ಚು ಕಾಲ ಠಾಣೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರು. ಶನಿವಾರ ಬೆಳಂಬೆಳಿಗ್ಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದ್ದರಿಂದ ಸಿಬ್ಬಂದಿ ಪರದಾಡಿದರು. ಬಳಿಕ ಮೇಲಧಿಕಾರಿಗಳ ಸಮಾಲೋಚನೆ ನಂತರ ವಿದ್ಯುತ್‌ ಸಂಪರ್ಕ ಕಲ್ಪಿಸಲಾಯಿತು.

ನಿಯಮದನ್ವಯ ಡಿ.ಜೆ. ಬಳಕೆಗೆ ಅನುಮತಿ: ‘ಭಾನುವಾರ (ಸೆ.4) ರಾತ್ರಿ ಐದನೇ ದಿನದ ಗಣೇಶನ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಸುಪ್ರೀಂಕೋರ್ಟ್‌ ಆದೇಶದಂತೆ ನಿಯಮಾನುಸಾರ ಡಿ.ಜೆ. ಬಳಸಬಹುದು. ಅದಾದ ನಂತರ ಯಾರೂ ಬಳಸುವಂತಿಲ್ಲ. ಆದರೆ, ಗಣಪನ ಮೂರ್ತಿಗಳ ವಿಸರ್ಜನೆಗೆ ಯಾವುದೇ ಸಮಯದ ಮಿತಿ ಹಾಕಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಸ್ಪಷ್ಟಪಡಿಸಿದರು.

ಶುಕ್ರವಾರ ರಾತ್ರಿ ವಶಕ್ಕೆ ಪಡೆದಿರುವ ಡಿ.ಜೆ ಹಾಗೂ ಭಾನುವಾರ ಮುಕ್ತವಾಗಿ ಡಿ.ಜೆ. ಬಳಕೆಗೆ ಅನುಮತಿ ನೀಡುವಂತೆ ಆಗ್ರಹಿಸಿ ವಿವಿಧ ಗಣೇಶ ಮಂಡಳಿಯವರು ನಗರದ ಪಟ್ಟಣ ಪೊಲೀಸ್‌ ಠಾಣೆಗೆ ಬಂದಿದ್ದರು. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರೊಂದಿಗೆ ಮೂರು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿ, ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕಾನೂನು ಪ್ರಕಾರವೇ ಗಣಪನ ಮೂರ್ತಿಗಳ ವಿಸರ್ಜನೆ ಮಾಡುತ್ತೇವೆ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಸಚಿವರ ಜೊತೆ ಅನೇಕರು ಮನವಿ ಸಲ್ಲಿಕೆಗೆ ಬಂದದ್ದರಿಂದ ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT