ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಜಾರಿ: ಸುಳ್ಳು ಸುದ್ದಿ ಹಾಕಿದರೆ ವಾಟ್ಸ್ಯಾಪ್‌ ಅಡ್ಮಿನ್‌ ಹೊಣೆ

ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿ; ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ–ಜಿಲ್ಲಾಧಿಕಾರಿ
Last Updated 29 ಮಾರ್ಚ್ 2023, 13:37 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಜಿಲ್ಲೆಯಾದ್ಯಂತ ಬುಧವಾರದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವುದು. ಸಾಮಾಜಿಕ ಜಾಲತಾಣಗಳ ಮೇಲೆಯೂ ವಿಶೇಷ ನಿಗಾ ವಹಿಸಲಾಗುವುದು. ವಾಟ್ಸ್ಯಾಪ್‌ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಗೆ ಸಂಬಂಧಿಸಿ ಸುಳ್ಳು ಸುದ್ದಿ ಹಾಕಿದರೆ ಅದಕ್ಕೆ ಅದರ ಅಡ್ಮಿನ್‌ ರನ್ನು ಹೊಣೆಗಾರರಾಗಿಸಿ ಕ್ರಮ ಜರುಗಿಸಲಾಗುವುದು’ ಎಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳು ಸುದ್ದಿ, ಸುಳ್ಳು ಸಮೀಕ್ಷೆಗಳನ್ನು ನಡೆಸುವ, ಸೋಷಿಯಲ್‌ ಮೀಡಿಯಾದಲ್ಲಿ ಯಾರೇ ಸುಳ್ಳು ಸುದ್ದಿ ಹರಡಿಸಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಇದರ ಮೇಲೆ ನಿಗಾ ಇಡುವುದಕ್ಕಾಗಿಯೇ ಒಂದು ತಂಡ ರಚಿಸಲಾಗಿದೆ ಎಂದು ಹೇಳಿದರು.

ಎಲ್ಲ 23 ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಂಟ್ರೋಲ್‌ ರೂಂನಲ್ಲಿ ಕುಳಿತು ಅಲ್ಲಿನ ನೇರ ದೃಶ್ಯಾವಳಿ ನೋಡಬಹುದು. ಜಿಲ್ಲಾಧಿಕಾರಿ, ಎಸ್ಪಿಯವರ ಮೊಬೈಲ್‌ಗೂ ಸಂಪರ್ಕ ಕಲ್ಪಿಸಲಾಗಿದ್ದು, ಇಬ್ಬರೂ ನೋಡಬಹುದು. ಮತದಾರರಿಗೆ ಆಮಿಷವೊಡ್ಡುವ ಉಡುಗೊರೆಗಳ ಮೇಲೆ ಪಕ್ಷದ ಅಭ್ಯರ್ಥಿಗಳ ಹೆಸರು, ಭಾವಚಿತ್ರ ಅಥವಾ ಚಿಹ್ನೆ ಇದ್ದರೆ ಸಂಬಂಧಿಸಿದವರ ವಿರುದ್ಧ ಕೇಸ್‌ ದಾಖಲಿಸಲಾಗುವುದು ಎಂದು ತಿಳಿಸಿದರು.

ಯಾರ್‍ಯಾರ ಬಳಿ ಅನುಮತಿ ಪಡೆದ ಶಸ್ತ್ರಾಸ್ತ್ರಗಳಿವೆಯೋ ಅವರು ತಂದು ಠೇವಣಿ ಇರಿಸಬೇಕು. ಜಿಲ್ಲೆಯಲ್ಲಿ 643 ಪರವಾನಗಿ ಪಡೆದ ಶಸ್ತ್ರಾಸ್ತ್ರಗಳಿವೆ. ಬ್ಯಾಂಕು ಸೇರಿದಂತೆ ಅಗತ್ಯ ಇರುವವರಿಗೆ ಮಾತ್ರ ಬಳಕೆಗೆ ಅನುಮತಿ ಕೊಡಲಾಗುವುದು. ಸೂಕ್ತ ದಾಖಲೆಗಳಿಲ್ಲದೆ ಹಣ ಸಾಗಿಸುತ್ತಿದ್ದರೆ ವಶಪಡಿಸಿಕೊಳ್ಳಲಾಗುವುದು. ಅನುಮತಿ ಇಲ್ಲದೆ ಬ್ಯಾನರ್‌, ಬಂಟಿಂಗ್ಸ್‌ ಅಳವಡಿಸುವಂತಿಲ್ಲ. ಪ್ರಚಾರವೂ ನಡೆಸುವಂತಿಲ್ಲ ಎಂದರು.

ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಜಾತ್ರೆಗಳ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ, ಚುನಾವಣೆ ದೃಷ್ಟಿಕೋನ ಇಟ್ಟುಕೊಂಡು ಯಾವುದೇ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಅವಕಾಶ ಇರುವುದಿಲ್ಲ. ಅಭ್ಯರ್ಥಿಗಳು ಮದುವೆ ಸಮಾರಂಭಗಳಲ್ಲಿ ಭಾಗವಹಿಸಬಹುದು. ಆದರೆ, ಮತಯಾಚನೆ ಮಾಡುವಂತಿಲ್ಲ. ರಾಜಕಾರಣಿಗಳಿಗೆ ಒದಗಿಸಿದ್ದ ಸರ್ಕಾರಿ ಕಾರುಗಳನ್ನು ವಾಪಸ್‌ ಪಡೆಯಲಾಗಿದೆ. ಅವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜನೆಗೊಂಡವರನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ಸರ್ಕಾರಿ, ಅನುದಾನಿತ ಸಮುದಾಯ ಭವನ, ಅತಿಥಿ ಗೃಹಗಳನ್ನು ಷರತ್ತು ಹಾಕಿ ಕೊಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು.

ಹೋಟೆಲ್‌, ಕಲ್ಯಾಣ ಮಂಟಪ, ಟೂರಿಸ್ಟ್‌ ಏಜೆಂಟ್‌ಗಳಿಂದ ಹೊರಗಿನಿಂದ ಬಂದು ಹೋಗುವವರ ಮಾಹಿತಿ ನಿತ್ಯ ಸಂಗ್ರಹಿಸಲಾಗುತ್ತಿದೆ. ಚಿನ್ನಾಭರಣ, ವಾಣಿಜ್ಯ ಮಳಿಗೆಗಳಲ್ಲಿ ನಿತ್ಯ ನಡೆಯುವ ವ್ಯವಹಾರ, ಗೋದಾಮುಗಳ ಮೇಲೆ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.

68 ಸಾವಿರ ಹೆಸರು ರದ್ದು:

ಜಿಲ್ಲೆಯಾದ್ಯಂತ 68 ಸಾವಿರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇದರಲ್ಲಿ ಹೆಚ್ಚಿನವರು ಮರಣ ಹೊಂದಿದವರು ಆಗಿದ್ದರು. ಚುನಾವಣೆ ಗುರುತಿನ ಚೀಟಿ ಜೊತೆಗೆ ಆಧಾರ್‌ ಸಂಖ್ಯೆ ಸಂಪರ್ಕಿಸುವ ಕಾರ್ಯ ಜಿಲ್ಲೆಯಲ್ಲಿ ಶೇ 86ರಷ್ಟು ಪೂರ್ಣಗೊಂಡಿದೆ. ಇದರಿಂದ ಒಬ್ಬರು ಎರಡೆರಡು ಮತದಾರರ ಗುರುತಿನ ಚೀಟಿ ಹೊಂದುವುದನ್ನು ತಡೆಯಲು ನೆರವಾಗಿದೆ ಎಂದರು.

ನೂತನ ವಿಜಯನಗರ ಜಿಲ್ಲೆಗೆ ಇದು ಮೊದಲ ಚುನಾವಣೆ. ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಿದ್ದು, ಐದು ವಿಧಾನಸಭಾ ಕ್ಷೇತ್ರಗಳಿವೆ. ವಿಧಾನಸಭಾ ಕ್ಷೇತ್ರಗಳಿಗಿಂತ ಒಂದು ತಾಲ್ಲೂಕು ಹೆಚ್ಚಿರುವುದರಿಂದ ಅಲ್ಲಿನ ಸಿಬ್ಬಂದಿಯನ್ನು ಅಗತ್ಯ ಇರುವ ಕಡೆಗಳಿಗೆ ನಿಯೋಜಿಸಲಾಗಿದೆ. ದೈನಂದಿನ ಕಚೇರಿ ಕಾರ್ಯಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಗರದ ಪಿಡಿಐಟಿ ಅಥವಾ ಎಲ್‌ಎಫ್‌ಎಸ್‌ ಶಾಲೆಯಲ್ಲಿ ಮತ ಎಣಿಕೆಗೆ ಚಿಂತನೆ ನಡೆಸಲಾಗುತ್ತಿದ್ದು, ಇನ್ನಷ್ಟೇ ಅಂತಿಮಗೊಳ್ಳಬೇಕಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಬಿ. ಸದಾಶಿವ ಪ್ರಭು, ಎಸ್ಪಿ ಶ್ರೀಹರಿಬಾಬು ಬಿ.ಎಲ್‌. ಹಾಜರಿದ್ದರು.

/ಬಾಕ್ಸ್‌ಗಳು/

617 ರೌಡಿಶೀಟರ್‌, 10 ಜನ ಗಡಿಪಾರು
‘ವಿಜಯನಗರ ಜಿಲ್ಲೆಯಲ್ಲಿ 617 ರೌಡಿಶೀಟರ್‌ಗಳಿದ್ದು, ಚುನಾವಣೆಯಲ್ಲಿ ಅಕ್ರಮ ಎಸಗದಂತೆ ಅವರ ವಿರುದ್ಧ ಸಿಆರ್‌ಪಿಸಿ ಪ್ರಕಾರ ಕ್ರಮ ಜರುಗಿಸಲಾಗುವುದು. ಅಪರಾಧ ಹಿನ್ನೆಲೆಯ 10 ಜನರನ್ನು ಈಗಾಗಲೇ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದ್ದು, ಇನ್ನೂ 18 ಜನರ ಗಡಿಪಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಚುನಾವಣೆ ಬಂದೋಬಸ್ತ್‌ಗೆ ಮೂರು ಐಟಿಬಿಪಿ ತಂಡಗಳು ಜಿಲ್ಲೆಗೆ ಬರಲಿವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌. ತಿಳಿಸಿದರು.

ಶತಾಯುಷಿಗಳಿಗೆ ವಿಶೇಷ ಸೌಲಭ್ಯ
‘ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಶತಾಯುಷಿಗಳು, 80 ವರ್ಷ ಮೇಲಿನವರು ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಬಿಎಲ್‌ಒಗಳು ಈ ಮೂರು ವರ್ಗದವರ ಮನೆಗಳಿಗೆ ಹೋಗಿ ಫಾರಂ 12ಡಿ ಕೊಡುತ್ತಾರೆ. ಅಂಚೆ ಮತಪತ್ರ ಅಥವಾ ಮತಗಟ್ಟೆ ಯಾವುದಾದರೂ ಒಂದು ಕಡೆ ಮತ ಚಲಾಯಿಸುವುದನ್ನು ಅವರು ದೃಢಿಕರಿಸಬೇಕು. ಅನಂತರ ಎರಡರಲ್ಲಿ ಒಂದು ಕಡೆ ಮತ ಚಲಾಯಿಸಬಹುದು’ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ತಿಳಿಸಿದರು.
ಜಿಲ್ಲೆಯಲ್ಲಿ 100 ವರ್ಷ ಮೇಲಿನವರು 188 ಜನ, 80 ವರ್ಷ ದಾಟಿದವರು 17498, ಒಂಬತ್ತು ಜನ ಎನ್‌ಆರ್‌ಐಗಳು, 15091 ಅಂಗವಿಕಲ ಮತದಾರರಿದ್ದಾರೆ. ಯುವ ಮತದಾರರಿಗಾಗಿಯೇ 25, ಸಖಿ (ಪಿಂಕ್‌) 25, ಅಂಗವಿಕಲರಿಗಾಗಿ 5 ಹಾಗೂ 25 ಮಾದರಿ ಮತಗಟ್ಟೆ ಸ್ಥಾಪಿಸಲಾಗುವುದು. ಈ ಆಯ್ದ ಮತಗಟ್ಟೆಗಳನ್ನು ಸುಂದರವಾಗಿ ಅಲಂಕರಿಸಲಾಗುವುದು ಎಂದು ಹೇಳಿದರು.

₹3.44 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ
‘ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳೆದ 15 ದಿನಗಳಲ್ಲಿ ನಗದು ಸೇರಿದಂತೆ ಒಟ್ಟು ₹3.44 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ₹3.15 ಲಕ್ಷ ನಗದು, 14 ಲಕ್ಷ ಮೌಲ್ಯದ ಮದ್ಯ, ₹3.20 ಲಕ್ಷ ಬೆಲೆಬಾಳುವ ಮಾದಕದ್ರವ್ಯ, ₹35 ಲಕ್ಷ ಮೌಲ್ಯದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ತಿಳಿಸಿದರು.

ಚುನಾವಣಾ ಅಕ್ರಮ ದೂರು ಸಲ್ಲಿಕೆಗೆ 1950 ಸಹಾಯವಾಣಿ:

ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ 18004250755, 1950 ಸಹಾಯವಾಣಿ ಆರಂಭಿಸಲಾಗಿದೆ. ಮೊಬೈಲ್‌ ಸಂಖ್ಯೆ 9019042744 ಕರೆ ಮಾಡಿಯೂ ತಿಳಿಸಬಹುದು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರವಾರು ಕಂಟ್ರೋಲ್‌ ರೂಂ ಸ್ಥಾಪಿಸಲಾಗಿದ್ದು, ಅದರ ವಿವರ ಕೆಳಗಿನಂತಿದೆ.

ವಿಧಾನಸಭಾ ಕ್ಷೇತ್ರ; ಕಂಟ್ರೋಲ್‌ ರೂಂ ಸಂಖ್ಯೆ

ಹೂವಿನಹಡಗಲಿ; 08399–240238

ಹಗರಿಬೊಮ್ಮನಹಳ್ಳಿ; 08397/238255

ವಿಜಯನಗರ; 08394–232209

ಕೂಡ್ಲಿಗಿ; 08391–220225

ಹರಪನಹಳ್ಳಿ; 08398–280262


ವಿಧಾನಸಭಾ ಕ್ಷೇತ್ರವಾರು ಮತಗಟ್ಟೆಗಳ ಸಂಖ್ಯೆ

ವಿಧಾನಸಭಾ ಕ್ಷೇತ್ರ; ಗ್ರಾಮೀಣ ಮತಗಟ್ಟೆಗಳು; ನಗರ ಮತಗಟ್ಟೆಗಳು; ಒಟ್ಟು; ಕ್ರಿಟಿಕಲ್‌; ನಾನ್‌ ಕ್ರಿಟಿಕಲ್‌

ಹೂವಿನಹಡಗಲಿ; 191; 27; 218; 45; 173

ಹಗರಿಬೊಮ್ಮನಹಳ್ಳಿ; 177; 75; 252; 85; 167

ವಿಜಯನಗರ; 63; 184; 247; 66;181

ಕೂಡ್ಲಿಗಿ; 219; 26; 245; 75; 170

ಹರಪನಹಳ್ಳಿ; 218; 39; 257; 77; 180

ಒಟ್ಟು; 868; 351; 1219; 348; 871

ಮತದಾರರ ವಿವರ:

ಕ್ಷೇತ್ರ: ಪುರುಷರು; ಮಹಿಳೆಯರು; ತೃತೀಯ ಲಿಂಗಿಗಳು; ಒಟ್ಟು

ಹೂವಿನಹಡಗಲಿ; 94323; 92125; 13; 186461

ಹಗರಿಬೊಮ್ಮನಹಳ್ಳಿ; 112518; 112855; 22; 225395

ವಿಜಯನಗರ; 118575; 124805; 77; 243457

ಕೂಡ್ಲಿಗಿ; 102035; 98826; 12; 200873

ಹರಪನಹಳ್ಳಿ; 108029; 104681; 17; 212727

ಒಟ್ಟು; 535480; 533292; 141; 1068913


ಐದು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳ ನೇಮಕ

ವಿಧಾನಸಭಾ ಕ್ಷೇತ್ರ;ಚುನಾವಣಾಧಿಕಾರಿ ಕಚೇರಿ ವಿಳಾಸ; ಚುನಾವಣಾಧಿಕಾರಿ ಹೆಸರು; ಸಹಾಯಕ ಚುನಾವಣಾಧಿಕಾರಿಗಳ ಹೆಸರು

ಹೂವಿನಹಡಗಲಿ; ತಹಶೀಲ್ದಾರ್‌ ಕಚೇರಿ; ಶರಣಪ್ಪ ಮುದಗಲ್‌, ಜಂಟಿ ಕೃಷಿ ನಿರ್ದೇಶಕ, ಮೊ.ಸಂ: 8310913946; ಶರಣವ್ವ, ತಹಶೀಲ್ದಾರ್‌ ಮೊ.ಸಂ: 9110656447

ಹಗರಿಬೊಮ್ಮನಹಳ್ಳಿ; ತಹಶೀಲ್ದಾರ್‌ ಕಚೇರಿ; ತೇಜಾನಂದ ರೆಡ್ಡಿ, ಉಪನಿರ್ದೇಶಕ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ. ಮೊ.ಸಂ: 9900007027, ಚಂದ್ರಶೇಖರ್‌ ಗಾಳಿ, ತಹಶೀಲ್ದಾರ್‌. ಮೊ.ಸಂ: 7348994109

ವಿಜಯನಗರ; ಉಪವಿಭಾಗಾಧಿಕಾರಿ; ಸಿದ್ದರಾಮೇಶ್ವರ. ಮೊ.ಸಂ: 9606729144; ವಿಶ್ವಜೀತ್‌ ಮೆಹ್ತಾ, ತಹಶೀಲ್ದಾರ್‌. ಮೊ.ಸಂ: 9448407959

ಕೂಡ್ಲಿಗಿ; ತಹಶೀಲ್ದಾರ್‌ ಕಚೇರಿ; ಈರಣ್ಣ ಬಿರಾದಾರ್‌, ಆಯುಕ್ತರು, ಹುಡಾ. ಮೊ.ಸಂ: 8105773323, ಟಿ. ಜಗದೀಶ್‌, ತಹಶೀಲ್ದಾರ್‌. ಮೊ.ಸಂ: 9591655223

ಹರಪನಹಳ್ಳಿ; ಉಪವಿಭಾಗಾಧಿಕಾರಿ; ಟಿ.ವಿ. ಪ್ರಕಾಶ್‌, ಮೊ.ಸಂ: 7760057149, ಶಿವಕುಮಾರ್‌ ಬಿರಾದಾರ್‌, ತಹಶೀಲ್ದಾರ್‌. ಮೊ.ಸಂ: 9448018965

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT