ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ತಿಕ ಚಳವಳಿ ಇಲ್ಲದ್ದು ದೊಡ್ಡ ಕೊರತೆ: ಕಥೆಗಾರ ಅಮರೇಶ ನುಗಡೋಣಿ

Last Updated 4 ಫೆಬ್ರುವರಿ 2023, 13:59 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): 'ಸಮಕಾಲೀನ ಸಂದರ್ಭದಲ್ಲಿ ಸಾಹಿತ್ತಿಕ ಚಳವಳಿಗಳು ಇಲ್ಲದ್ದು ದೊಡ್ಡ ಕೊರತೆ ಎದ್ದು ಕಾಣಿಸುತ್ತಿದೆ' ಎಂದು ಖ್ಯಾತ ಕಥೆಗಾರ ಅಮರೇಶ ನುಗಡೋಣಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಅಮೃತ ಮಹೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಹಾಗೂ ಅಂಬೆ ಪ್ರಕಾಶನದ ಸಹಭಾಗಿತ್ವದಲ್ಲಿ ಶನಿವಾರ ನಗರದ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಆದರೆ, ಈ ಮಾತು ಮಹಿಳೆಯರಿಗೆ ಅನ್ವಯಿಸುವುದಿಲ್ಲ. 21ನೇ ಶತಮಾನ ಅವರ ಕೈಹಿಡಿದಿದೆ. ಮಹಿಳೆಯರು ಒಳದನಿ ಮೂಲಕ ಮಾತಾಡುವುದು ಕಲಿತಿದ್ದಾರೆ. ಕವಿತೆ ಸಾಮಾಜಿಕ, ರಾಜಕೀಯವಾಗಿ ಮುನ್ನಡೆಯಲು ಸಾಧ್ಯವಿಲ್ಲ‌. ಒಳದನಿ ಮೂಲಕ ಮಾತಾಡಿದರೆ ಅನುಭವ, ದರ್ಶನ, ಲೋಕ ದರ್ಶನ ಇರುತ್ತದೆ. ಹೊಸ ಪರಂಪರೆಗೆ ದಾರಿ ಮಾಡಿಕೊಡುತ್ತದೆ. ಲೋಕವನ್ನು ಕಣ್ಣಿಂದ ಕಾಣುವ ಲೋಕ ಬಹಳ ಕಡಿಮೆ ಕಾಣಿಸುತ್ತದೆ. ಮನಸ್ಸಿನ ಲೋಕ ಬಹಳ ದೊಡ್ಡದು. ಒಳದನಿಗೆ ಮಹತ್ವ ಕೊಟ್ಟು ಕಾವ್ಯ ಬರೆಯಬೇಕೆಂದು ಕಿವಿಮಾತು ಹೇಳಿದರು.

ಮನುಷ್ಯ ಕುಲ ಎಂದೂ ಅಸಹಯಕವಾಗಿಲ್ಲ‌. ನಾನು ಜೊತಗಿದ್ದೇನೆ ಎಂದು ಕಾವ್ಯ ಹೇಳುತ್ತ ಬಂದಿದೆ. ಸಾಮೂಹಿಕವಾಗಿ ಜನರನ್ನು ಸ್ಪಂದಿಸುವುದರ ಮೂಲಕ ಕಾವ್ಯ ಪರಂಪರೆ ಬೆಳೆಯುತ್ತ ಬಂದಿದೆ. ನವೋದಯ, ನವ್ಯ, ಬಂಡಾಯ, ದಲಿತ ಕಾವ್ಯ ಪರಂಪರೆ ಮುಂದುವರೆಸಿಕೊಂಡು ಜನರನ್ನು ಸ್ಪಂದಿಸುತ್ತ ಬಂದಿದೆ. ಕುವೆಂಪು, ಬೇಂದ್ರೆ, ಪುತಿನ, ಜಿ.ಎಸ್. ಶಿವರುದ್ರಪ್ಪ, ಚಂದ್ರಶೇಖರ ಕಂಬಾರ ಸೇರಿದಂತೆ ಹಲವರು ಸಮಕಾಲೀನ ವಿಷಯಗಳಿಗೆ ಸ್ಪಂದಿಸುತ್ತ ಕಾವ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ವಚನ ಚಳವಳಿ, ದಾಸ ಚಳವಳಿ, ತತ್ವಪದ ಸಾಹಿತ್ಯ ಚಳವಳಿಗಳು ಒಂದು ಧ್ವನಿಯಿಂದ ಸ್ಪಂದಿಸಿಲ್ಲ.‌ ಸಾಮೂಹಿಕವಾಗಿ ಕವಿಗಳು ಸ್ಪಂದಿಸಿದ್ದಾರೆ. ಒಬ್ಬ ಕವಿ ಸಮಾಜದ ಬಿಕ್ಕಟ್ಟುಗಳಿಗೆ ಸ್ಪಂದಿಸಿಲ್ಲ. ನೂರಾರು ಕವಿಗಳು ಸ್ಪಂದಿಸಿದ್ದಾರೆ. ವಚನಕಾರರು ನಾಲ್ಕು ನೂರಕ್ಕೂ ಹೆಚ್ಚು ಸಿಕ್ಕಿದ್ದಾರೆ. ಜನರ ನೋವು ತಲ್ಲಣಗಳಿಗೆ ಸ್ಪಂದಿಸಿದ್ದಾರೆ. ಸಾಂಸ್ಥಿಕ ಪ್ರಭುತ್ವದ ವಿರುದ್ಧವಾಗಿ ಕಾವ್ಯ ಹುಟ್ಟುತ್ತ ಬಂದಿದೆ. ತನಗೆ ವಿರುದ್ಧವಾದ ನಡೆ ಧರ್ಮ, ಪ್ರಭುತ್ವವನ್ನು ಖಂಡಿಸುತ್ತ ಬಂದಿದೆ. ಜನರ ನೋವಿಗೆ ಮಿಡಿಯುತ್ತ ಬಂದಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ ಮಾತನಾಡಿ, ಡಾ.ಮೃತ್ಯುಂಜಯ ರುಮಾಲೆ, ಇಂದಿನ ಯುವ ಪೀಳಿಗೆ ಸಾಹಿತ್ಯ ರಚನೆಗೆ ಅವಸರ ಪಡಬಾರದು. ನವ ಮಾಸದ ಬಳಿಕ ಹೆರಿಗೆ ಆರೋಗ್ಯಕರ ಹಾಗೆ ತಾನಾಗಿ ಮಾಗುವ ಹಣ್ಣೂ ರುಚಿಕರ. ಅಂತೆಯೇ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಅತ್ಯಂತ ಅವಸರಕ್ಕೆ ಬಿದ್ದು ಕಾವ್ಯ ರಚಿಸುವುದು, ಬಲು ಬೇಗ ಕವಿ-ಕವಯತ್ರಿ ಎನಿಸಿಕೊಳ್ಳಲು ಹಾತೊರೆಯುವುದು ಉತ್ತಮ ಬೆಳವಣಿಗೆಯಲ್ಲ. ಹೆಸರು ವಾಸಿಯಾದ ಬೇಂದ್ರೆ, ಅಡಿಗರು ಒಂದು ಕವಿತೆ ರಚನೆಗೆ ವಾರ, ತಿಂಗಳಗಟ್ಟಲೆ ಸಮಯ ತೆಗೆದುಕೊಂಡಿದ್ದು ಉಂಟು. ಪಂಪ ರಚಿಸಿದ್ದು ಎರಡೇ ಕಾವ್ಯ, ಕುಮಾರವ್ಯಾಸ ಬರೆದದ್ದು ಒಂದೇ ಅಲಂಕಾರ (ಕಾವ್ಯ)ವಾದರೂ ಅವು ಇಂದಿಗೂ ಜನಮಾನಸದಲ್ಲಿವೆ ಮತ್ತು ಚರ್ಚೆ, ಸಂವಾದದ ವಸ್ತುಗಳಾಗಿ ಸಾರ್ವಕಾಲಿಕವಾಗಿವೆ ಎಂದರು.

ಕಾವ್ಯಕ್ಕೆ, ಕವಿಗೆ ವಿಭಿನ್ನ ಶಕ್ತಿ ಇದೆ. ಶಿಶುನಾಳ ಶರೀಫ್ ರ ಒಂದೇ ಒಂದು ತತ್ವ ಪದಕ್ಕೆ ಗೌಡರೊಬ್ಬರು ಹೊಲ, ಮನೆ ಬರೆದುಕೊಡುವುದಾಗಿ ಹೇಳಿದರು. ಅಂದರೆ ಒಂದು ತತ್ವ ಪದದ ಮೌಲ್ಯ ಎಷ್ಟೊಂದು ಎಂಬುದು ಆಶ್ಚರ್ಯ ಎನಿಸಿದರೂ ಸತ್ಯ. ಸತ್ತ ಮೇಲೂ ಕವಿ ಬದುಕಿರುತ್ತಾನೆ ಅಂದರೆ ಆತ ಕೊಟ್ಟ ಕಾವ್ಯ ಆತನ ಹೆಸರನ್ನು ಜೀವಂತ ಇರಿಸಿದೆ ಅಂತಲೇ ಅರ್ಥ. ಕಾವ್ಯದಿಂದ ಕವಿ ಬದುಕಿರುತ್ತಾನೆ ಅಂದರೆ ಸಮಾಜ ಸದಾ ನೆನೆಯುವಂಥ ಕಾವ್ಯ ರಚಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಸಿ. ಶಿವಪ್ಪ ಮಾತನಾಡಿ, ಪ್ರಜಾವಾಣಿ ತನ್ನತನ ಉಳಿಸಿಕೊಂಡು ಸತ್ಯ, ನಿಷ್ಠುರವಾಗಿ ವರದಿಗಳನ್ನು ಬಿತ್ತರಿಸುತ್ತಿದೆ. ಪತ್ರಿಕೆ ಮೂಲಕ ಕವಿಗೋಷ್ಠಿ ಸೇರಿದಂತೆ ಸಮಾಜಮುಖಿ ಕಾರ್ಯ ನಡೆಯುತ್ತಿರುವುದು ಅಭಿನಂದನಾರ್ಹ ಎಂದರು.

'ಪ್ರಜಾವಾಣಿ' ವಿಜಯನಗರ ಜಿಲ್ಲಾ ಹಿರಿಯ ವರದಿಗಾರ ಶಶಿಕಾಂತ ಎಸ್. ಶೆಂಬೆಳ್ಳಿ, ಪತ್ರಿಕೆ ಸಾಗಿ ಬಂದ ದಾರಿ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಹುಲುಗಪ್ಪ ನಾಯಕರ, ಅಂಬೆ ಪ್ರಕಾಶನದ ಅಂಜಲಿ ಬೆಳಗಲ್, ಕಾಲೇಜಿನ ಐಕ್ಯುಎಸಿ ಸಂಚಾಲಕ ಟಿ.ಎಚ್. ಬಸವರಾಜ, ಕನ್ನಡ ವಿಭಾಗದ ಮುಖ್ಯಸ್ಥ ಸಿ. ದೇವಣ್ಣ, ಹಿರಿಯ ಸಾಹಿತಿ ಚಂದ್ರಶೇಖರಯ್ಯ ರೋಣದಮಠ ವೇದಿಕೆ ಮೇಲೆ ಇದ್ದರು. ವೀರಮ್ಮ ಹಿರೇಮಠ ನಿರೂಪಿಸಿದರು. ಜರೀನಾ ಬೇಗಂ ಸ್ವಾಗತಿಸಿದರು. ವಸಂತಕುಮಾರ ಪ್ರಾರ್ಥನಾ ಗೀತೆ ಹಾಡಿದರೆ, ನಾಯಕರ ಹುಲುಗಪ್ಪ ವಂದಿಸಿದರು.

ಪ್ರಜಾವಾಣಿ ಪ್ರಜಾಪ್ರಭುತ್ವದ ದೈವವಾಣಿ
ಪ್ರಜಾವಾಣಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಅಷ್ಟೇ ಕವಿಗಳಿಂದ ಕವನ ವಾಚನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರಾಧ್ಯಾಪಕ ದಯಾನಂದ ಕಿನ್ನಾಳಅವರ 'ಪ್ರಜಾವಾಣಿ ಮತ್ತು ಸಮಾಜ' ಶೀರ್ಷಿಕೆಯಡಿ ಮೊದಲ ಕವಿತೆ ವಾಚನ ಮಾಡಿದರು. 'ಪ್ರಜಾವಾಣಿ ಎಂದೆಂದಿಗೂ ಪ್ರಜಾಪ್ರಭುತ್ವದ ದೈವವಾಣಿ' ಎಂಬ ಸಾಲುಗಳನ್ನು ಹೇಳುತ್ತಿದ್ದಂತೆ ಕರತಾಡನ ಮುಗಿಲು ಮುಟ್ಟಿತ್ತು. ಕವಯತ್ರಿ ಅನುಪಮಾ ಸುಲಾಖೆ, 'ಪ್ರಜಾವಾಣಿ ಹೆಜ್ಜೆಗುರುತು' ಶೀರ್ಷಿಕೆಯ ಕವನ ವಾಚಿಸಿದರು. ಹೀಗೆ ಕೆಲವರು ಪತ್ರಿಕೆ ಕುರಿತು ಕವನ ಓದಿದರೆ, ಕೆಲವರು ಸಮಕಾಲೀನ ಸನ್ನಿವೇಶ, ಪ್ರೇಮಕಾವ್ಯ, ಪ್ರತಿಕೃತಿ ಕುರಿತು ಕವನ ವಾಚಿಸಿದರು.

ನೇರ, ನಿಷ್ಠುರ 'ಪ್ರಜಾವಾಣಿ'
ನೇರ, ನಿಷ್ಠುರ ಧ್ವನಿಯ ಪ್ರಜಾವಾಣಿ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತ ಬಂದಿರುವುದರಿಂದ ಪ್ರಜಾವಾಣಿ ಈಗಲೂ ಜನಮಾನಸದಲ್ಲಿ ಉಳಿದಿದೆ. ಬೆಳಿಗ್ಗೆ ಎದ್ದ‌ ತಕ್ಷಣ ಪ್ರಜಾವಾಣಿ ಓದದಿದ್ದರೆ ದಿನ ಅಪೂರ್ಣವಾಗುತ್ತದೆ ಎಂದು ಕಥೆಗಾರ ಅಮರೇಶ ನುಗಡೋಣಿ ಹೇಳಿದರು.

*
ಮನುಷ್ಯ ಸಮಾಜ ಉಸಿರುಗಟ್ಟುವ ಸಂದರ್ಭದಲ್ಲಿ ಕಾವ್ಯ ಚಳವಳಿ ಮೂಲಕ ಸ್ಪಂದಿಸುತ್ತ ಬಂದಿದೆ. ಕಾವ್ಯವೂ ಚಳವಳಿ ರೂಪದಲ್ಲಿ ಅವತರಿಸಿದೆ.
-ಅಮರೇಶ ನುಗಡೋಣಿ, ಖ್ಯಾತ ಕಥೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT