ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಅತಿ ಎತ್ತರದ ತಿರಂಗಾ ನೋಡುವ ಬನ್ನಿ

ಪ್ರತಿಷ್ಠಾಪನೆಗೆ ಮಾಡಿದ ಕಸರತ್ತು, ಅದರ ವಿಶೇಷತೆಗಳ ಸಂಪೂರ್ಣ ಹೂರಣ
Last Updated 12 ಆಗಸ್ಟ್ 2022, 21:15 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ಮುನ್ಸಿಪಲ್‌ ಮೈದಾನದಲ್ಲಿ ನಿರ್ಮಿಸುತ್ತಿರುವ 405 ಅಡಿ ಎತ್ತರದ ಧ್ವಜ ಸ್ತಂಭ ಪ್ರತಿಷ್ಠಾಪಿಸಲು ಮಾಡಿದ ಕಸರತ್ತುಗಳೇನು? ಅದರ ವಿಶೇಷತೆ ಏನು? ಎಂಬುದನ್ನು ಹೇಳುವ ಪ್ರಯತ್ನ ‘ಪ್ರಜಾವಾಣಿ’ ನಡೆಸಿದೆ. ಅದರ ವಿವರ ಇಲ್ಲಿದೆ.

ಪ್ರವಾಸೋದ್ಯಮ ಇಲಾಖೆಯ ಅನುದಾನ:

ಪ್ರವಾಸೋದ್ಯಮ ಇಲಾಖೆಯಿಂದ ₹6 ಕೋಟಿ ಅನುದಾನ ಮಂಜೂರಾದ ನಂತರ ಧ್ವಜಸ್ತಂಭ ನಿರ್ಮಾಣಕ್ಕೆ ಪುಣೆಯ ಬಜಾಜ್‌ ಕಂಪನಿಯವರಿಗೆ ಅದರ ಬಿಡಿಭಾಗಗಳನ್ನು ತಯಾರಿಸಲು ಬೇಡಿಕೆ ಸಲ್ಲಿಸಲಾಯಿತು. ಅತ್ತ ಬಿಡಿಭಾಗಗಳ ನಿರ್ಮಾಣ ಕಾರ್ಯ ಆರಂಭವಾಗುತ್ತಿದ್ದಂತೆ ಇತ್ತ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೂ ಮುನ್ನವೇ ಬುನಾದಿ ತೆಗೆದು ಕೆಲಸ ಆರಂಭಿಸಲಾಗಿತ್ತು.

20x20 ಸುತ್ತಳತೆಯಲ್ಲಿ ಬುನಾದಿ ತೆಗೆದು, ಬೆಡ್‌ ಹಾಕಿ ಕೆಲಸ ಪೂರ್ಣಗೊಳಿಸಲು ತಿಂಗಳಿಗೂ ಹೆಚ್ಚು ಸಮಯ ಹಿಡಿದಿದೆ. ಬುನಾದಿ ಸಿದ್ಧವಾಗುತ್ತಿದ್ದಂತೆ ಐದು ಬೃಹತ್‌ ಲಾರಿಗಳು ಬಿಡಿಭಾಗಗಳನ್ನು ಹೊತ್ತು ನಗರಕ್ಕೆ ಬಂದವು. ಆ.6ರಂದು ನಗರ ಹೊರವಲಯದಲ್ಲಿ ಲಾರಿಗಳನ್ನು ಬರಮಾಡಿಕೊಂಡು, ನೂರಾರು ಜನ ತ್ರಿವರ್ಣ ಧ್ವಜಗಳೊಂದಿಗೆ ಸಂಜೆಯ ವರೆಗೆ ನಗರದಲ್ಲಿ ಮೆರವಣಿಗೆ ಮಾಡಿದರು. ಅದೇ ದಿನ ಸಂಜೆ ವೇಳೆಯಲ್ಲಿ ಪೂಜೆ ಸಲ್ಲಿಸಿ, ಬಿಡಿಭಾಗಗಳ ಪ್ರತಿಷ್ಠಾಪನೆ ಕಾರ್ಯ ಆರಂಭಿಸಲಾಯಿತು.

ಒಟ್ಟು 13 ಬಿಡಿ ಭಾಗಗಳ ಪೈಕಿ 9 ಗುರುವಾರ (ಆ.11) ಸಂಜೆಯ ವರೆಗೆ ಅಳವಡಿಸಲಾಗಿದೆ. ಭಾರಿ ಬಿರುಗಾಳಿಯಿಂದ ಕಾಮಗಾರಿಗೆ ಸ್ವಲ್ಪ ತೊಡಕಾಯಿತು. ಆದರೆ, ಅದರ ನಡುವೆಯೂ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಬಿಡಿಭಾಗಗಳನ್ನು ತಯಾರಿಸಿದ ಬಜಾಜ್‌ ಕಂಪನಿಯ ಸಿಬ್ಬಂದಿಯೇ ಅದನ್ನು ಜೋಡಿಸುವ ಕೆಲಸ ನೆರವೇರಿಸಿದರು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಅದರ ಮೇಲುಸ್ತುವಾರಿ ವಹಿಸಿದರು.

120x80 ಅಡಿ ಧ್ವಜ:

405 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ 120x80 ಅಡಿಯ ಬೃಹತ್‌ ಧ್ವಜ ಈಗಾಗಲೇ ಸಿದ್ಧಗೊಂಡಿದೆ. ಎಷ್ಟೇ ವೇಗದಲ್ಲಿ ಗಾಳಿ ಬೀಸಿದರೂ ಅದು ಹರಿದು ಹೋಗದ ರೀತಿಯಲ್ಲಿ ವಿನ್ಯಾಸಗೊಳಿಸಿರುವುದು ವಿಶೇಷ. ಆ.15ರಂದು ಬೆಳಿಗ್ಗೆ 9ಕ್ಕೆ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತ್ರಿವರ್ಣ ಧ್ವಜಾರೋಹಣ ನೆರವೇರಿಸುವರು. ಅದಾದ ಬಳಿಕ ಗುಂಡಿ ಒತ್ತುವುದರ ಮೂಲಕ 405 ಅಡಿ ಎತ್ತರದ ಧ್ವಜಾರೋಹಣಕ್ಕೆ ಚಾಲನೆ ಕೊಡುವರು. ಐದು ಸಾವಿರ ಮಕ್ಕಳು ಕೇಸರಿ, ಬಿಳಿ, ಹಸಿರು ವರ್ಣದ ಟೋಪಿ ಧರಿಸಿ ಅದರಡಿ ನಿಂತು ನೆಲದಲ್ಲಿ ತ್ರಿವರ್ಣದ ರಂಗು ಮೂಡಿಸುವರು. ಸಂಜೆ ಧ್ವಜದ ಅಡಿಯಲ್ಲಿ ಭವ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

****

ಮಾಹಿತಿ ಮುಚ್ಚಿಟ್ಟ ಕೆ.ಆರ್‌.ಐ.ಡಿ.ಎಲ್‌. ಅಧಿಕಾರಿ

ಧ್ವಜಸ್ತಂಭದ ಬುನಾದಿ ಕಾಮಗಾರಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆ.ಆರ್‌.ಐ.ಡಿ.ಎಲ್‌.) ಮೇಲುಸ್ತುವಾರಿಯಲ್ಲಿ ನಡೆದಿದೆ. ಇದರ ಬಗ್ಗೆ ಮಾಹಿತಿಗಾಗಿ ‘ಪ್ರಜಾವಾಣಿ’ ಎರಡು ದಿನಗಳಿಂದ ಸತತ ಪ್ರಯತ್ನಿಸುತ್ತಿದ್ದರೂ ಸಂಸ್ಥೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ವೈಕುಂಠಪತಿ ಮಾಹಿತಿ ಕೊಡುತ್ತಿಲ್ಲ. ಅವರು ನಡೆದುಕೊಳ್ಳುವ ರೀತಿ ನೋಡಿದರೆ ಮಾಹಿತಿ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಮಾಹಿತಿಗೆ ‘ಪ್ರಜಾವಾಣಿ’ ಕೆ.ಆರ್‌.ಐ.ಡಿ.ಎಲ್‌. ಸಂಸ್ಥೆಯ ಕಚೇರಿಗೆ ತೆರಳಿದಾಗ ವೈಕುಂಠಪತಿ ಅವರನ್ನು ಸಂಪರ್ಕಿಸುವಂತೆ ಅಲ್ಲಿನ ಸಿಬ್ಬಂದಿ ಮೊಬೈಲ್‌ ಸಂಖ್ಯೆ ನೀಡಿದರು. ಅವರ ಸಂಖ್ಯೆಗೆ ಅನೇಕ ಸಲ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಕಚೇರಿಗೆ ಹೋಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌. ಮಹೇಶಬಾಬು ಅವರಿಗೆ ವಿಷಯ ತಿಳಿಸಿದಾಗ ಸ್ವತಃ ಅವರೇ ವೈಕುಂಠಪತಿ ಅವರಿಗೆ ಕರೆ ಮಾಡಿ, ಪತ್ರಿಕೆಯವರಿಗೆ ಮಾಹಿತಿ ಕೊಡಬೇಕೆಂದು ಸೂಚಿಸಿದರು. ‘ನೀವಿದ್ದಲ್ಲಿಗೆ ಅವರು ಬರುತ್ತಾರೆ’ ಎಂದೂ ಹೇಳಿದರು. ಧ್ವಜಸ್ತಂಭದ ಕಾಮಗಾರಿ ಸ್ಥಳಕ್ಕೆ ಬರುವಂತೆ ಹೇಳಿದ್ದ ವೈಕುಂಠಪತಿ ಅವರು ಅಲ್ಲಿ ಇರಲೇ ಇಲ್ಲ. ಗಂಟೆಗೂ ಹೆಚ್ಚು ಸಮಯ ಕಾದರೂ ಅಲ್ಲಿಗೆ ಬರಲಿಲ್ಲ. ಕರೆಯೂ ಸ್ವೀಕರಿಸಲಿಲ್ಲ. ಪುನಃ ಮಹೇಶಬಾಬು ಅವರಿಗೆ ವಿಷಯ ತಿಳಿಸಿದಾಗ ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ಧ್ವಜಸ್ತಂಭ ನಿರ್ಮಾಣಕ್ಕೂ ಮುನ್ನ ಮಣ್ಣಿನ ಪರೀಕ್ಷೆ ನಡೆಸಲಾಗಿದೆಯೇ? ಸುರಕ್ಷತೆಗೆ ಏನೇನು ಮಾನದಂಡ ಅನುಸರಿಸಲಾಗಿದೆ ಎಂಬ ಮಾಹಿತಿಗಾಗಿ ವೈಕುಂಠಪತಿ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ, ಮಾಹಿತಿ ನೀಡಲಿಲ್ಲ. ಅವರ ವರ್ತನೆ ನೋಡಿದರೆ ಸುರಕ್ಷತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗಿದೆಯೇ ಎಂಬ ಅನುಮಾನ ಮೂಡಿದೆ.

ದೇಶದ ಅತಿ ಎತ್ತರದ ಸ್ತಂಭ:

ಹೊಸಪೇಟೆಯ ನಿರ್ಮಾಣ ಹಂತದ ಧ್ವಜಸ್ತಂಭ ದೇಶದಲ್ಲೇ ಅತಿ ಎತ್ತರದ್ದು ಎಂದು ಹೇಳಲಾಗುತ್ತಿದೆ. ಬೆಳಗಾವಿಯಲ್ಲಿ 361 ಅಡಿ ಎತ್ತರದ ಧ್ವಜ ಸ್ತಂಭ ಇದುವರೆಗಿನ ಅತಿ ದೊಡ್ಡದು ಎಂಬ ಹೆಗ್ಗಳಿಕೆ ಗಳಿಸಿತ್ತು. ಈಗ ಆ ಹೆಗ್ಗಳಿಕೆ ವಿಜಯನಗರ ಜಿಲ್ಲೆ ಪಾಲಾಗಲಿದೆ.

ಅಂಕಿ ಅಂಶ

₹5.25 ಕೋಟಿ ಧ್ವಜಸ್ತಂಭದ ವೆಚ್ಚ

₹75 ಲಕ್ಷ ಧ್ವಜಸ್ತಂಭದ ಬುನಾದಿಗೆ

405 ಅಡಿ ಧ್ವಜಸ್ತಂಭದ ಎತ್ತರ

120X80 ತ್ರಿವರ್ಣ ಧ್ವಜದ ಅಳತೆ

13 ಬಿಡಿ ಭಾಗಗಳ ಜೋಡಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT