ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಖಾಸಗೀಕರಣ ವಿರೋಧಿಸಿ ಬ್ಯಾಂಕ್‌ ನೌಕರರ ಮುಷ್ಕರ

Last Updated 15 ಮಾರ್ಚ್ 2021, 6:30 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್‌ ಯೂನಿಯನ್‌ಗಳ ಸಂಯುಕ್ತ ವೇದಿಕೆ ಅಡಿ ಬ್ಯಾಂಕ್‌ ನೌಕರರು ಸೋಮವಾರ ನಗರದಲ್ಲಿ ಮುಷ್ಕರ ನಡೆಸಿದರು.

ನಗರದ ರೋಟರಿ ವೃತ್ತದಲ್ಲಿ ಸೇರಿದ ವಿವಿಧ ಬ್ಯಾಂಕುಗಳ ನೌಕರರು ಅಲ್ಲಿಂದ ಬಸ್‌ ನಿಲ್ದಾಣ ಎದುರಿನ ಎಸ್‌ಬಿಐ ಬ್ಯಾಂಕ್‌ ಶಾಖೆಗೆ ತೆರಳಿದರು. ಬ್ಯಾಂಕಿನ ಎದುರು ಮುಷ್ಕರ ನಡೆಸಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಬ್ಯಾಂಕುಗಳ ಸುಧಾರಣೆಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ಖಾಸಗೀಕರಣಕ್ಕೆ ಮುಂದಾಗಿದೆ. ಖಾಸಗೀಕರಣ, ಆಸ್ತಿ ವಸೂಲಿ ಕಂಪನಿ ಸ್ಥಾಪನೆ, ಜೀವ ವಿಮಾ ನಿಗಮದಲ್ಲಿ ಬಂಡವಾಳ ಹಿಂತೆಗೆತ, ವಿಮಾ ಕ್ಷೇತ್ರದಲ್ಲಿ ಶೇ 74ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲು ಮುಂದಾಗಿರುವುದು ಮಾರಕ ಕ್ರಮಗಳು. 1947ರಿಂದ 1969ರ ಅವಧಿಯಲ್ಲಿ ಒಟ್ಟು 550 ಖಾಸಗಿ ಬ್ಯಾಂಕುಗಳು ಬಾಗಿಲು ಮುಚ್ಚಿದ್ದವು. ಇತಿಹಾಸದಿಂದ ನಾವು ಪಾಠ ಕಲಿಯಬೇಕು. ಇಲ್ಲವಾದಲ್ಲಿ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದರು.

ಖಾಸಗೀಕರಣ ಮಾಡಿದರೆ ಜನರ ಉಳಿತಾಯದ ಹಣದ ಲೂಟಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಠೇವಣಿದಾರರ ಹಿತಾಸಕ್ತಿಗೂ ಧಕ್ಕೆ ಉಂಟಾಗುತ್ತದೆ. ಉದ್ಯೋಗ ಅವಕಾಶ, ಮೀಸಲಾತಿ, ಸಾಮಾಜಿಕ ನ್ಯಾಯಕ್ಕೂ ಧಕ್ಕೆಯಾಗುತ್ತದೆ. ಬ್ಯಾಂಕುಗಳನ್ನು ಮುಚ್ಚುವುದರಿಂದ ಜನಸಾಮಾನ್ಯರು ಬ್ಯಾಂಕಿಂಗ್‌ ಸೇವೆಗಳಿಂದ ವಂಚಿತರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದ ಮೇಲಿನ ಪ್ರೇಮದಿಂದ ಎರಡು ದಿನ ಹೋರಾಟ ನಡೆಸಲಾಗುತ್ತಿದೆ. ಗ್ರಾಹಕರು, ಸಂಘ ಸಂಸ್ಥೆಗಳು ಇದಕ್ಕೆ ಬೆಂಬಲಿಸಬೇಕು ಎಂದು ಕೋರಿದ್ದಾರೆ.

ವೇದಿಕೆಯ ಮಂಜುನಾಥ್ ಶೆಟ್ಟಿ, ನಾಗರಾಜ್, ಸಾಗರ್, ನವೀನ್, ಸೈಯದ್ ಹುಸೇನ್, ಆಂಜನೇಯ, ರವಿಕುಮಾರ್, ಶ್ರೀನಿವಾಸ್‌ ಸೇರಿದಂತೆ ಇತರರಿದ್ದರು.

ಬ್ಯಾಂಕ್‌ ಸೇವೆಯಿಲ್ಲದೆತೊಂದರೆ: ಬ್ಯಾಂಕ್‌ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಬ್ಯಾಂಕಿಂಗ್‌ ಸೇವೆ ಸ್ಥಗಿತಗೊಂಡಿದೆ. ಗ್ರಾಹಕರು ಬ್ಯಾಂಕುಗಳಿಗೆ ಬಂದು, ವಾಪಸ್‌ ಹೋಗುತ್ತಿರುವ ದೃಶ್ಯ ಕಂಡು ಬಂತು. ಕೆಲವೆಡೆ ಎಟಿಎಂಗಳಲ್ಲಿ ಹಣ ಇಲ್ಲದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT