ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದಗುಡ್ಡ ಬನ್ನಿಪೂಜೆಗೆ ಜನಸಾಗರ

ಏಳು ಕೇರಿಗಳಲ್ಲಿ ದಸರಾ ಸಂಭ್ರಮ; ಭಕ್ತಿಭಾವದಿಂದ ಪಲ್ಲಕ್ಕಿಗಳ ಮೆರವಣಿಗೆ
Last Updated 5 ಅಕ್ಟೋಬರ್ 2022, 5:45 IST
ಅಕ್ಷರ ಗಾತ್ರ

ಧರ್ಮದಗುಡ್ಡ/ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಧರ್ಮದಗುಡ್ಡದಲ್ಲಿ ಮಂಗಳವಾರ ಆಯುಧ ಪೂಜೆ, ಬನ್ನಿ ಮರದ ವಿಶೇಷ ಪೂಜಾ ಕೈಂಕರ್ಯಕ್ಕೆ ಜನಸಾಗರವೇ ಹರಿದು ಬಂದಿತ್ತು.

ಗುಡ್ಡದ ಸುತ್ತಮುತ್ತಲಿನ ಪ್ರದೇಶದಲ್ಲೆಲ್ಲಾ ಭಕ್ತರ ದಂಡು ಕಾಣಿಸಿತು. ನಗರದ ಅನಂತಶಯನಗುಡಿ ರಸ್ತೆಯಿಂದ ನಾಗೇನಹಳ್ಳಿ, ಬಸವನದುರ್ಗ, ಧರ್ಮದಗುಡ್ಡದ ರಸ್ತೆಯಲ್ಲಿ ಮಧ್ಯಾಹ್ನದಿಂದ ರಾತ್ರಿವರೆಗೂ ಜನಜಾತ್ರೆ ಇತ್ತು. ಕೋವಿಡ್‌ನಿಂದ ಈ ಹಿಂದೆ ಸರಳ ರೀತಿಯಲ್ಲಿ ಸಾಂಕೇತಿಕವಾಗಿ ಪೂಜೆ ನೆರವೇರಿಸಲಾಗಿತ್ತು. ಈ ವರ್ಷ ಕೋವಿಡ್‌ ಪ್ರಕರಣಗಳು ತಗ್ಗಿರುವುದರಿಂದ ಎಲ್ಲ ಕಾರ್ಯಕ್ರಮಗಳು ಸಂಭ್ರಮ, ವಿಜೃಂಭಣೆಯಿಂದ ಆಚರಿಸಲಾಯಿತು.

ಸಂಜೆ ಬಸವನದುರ್ಗದ ಓಬಳಾಪುರ ಗುಡಿಯಲ್ಲಿ ಚನ್ನಬಸವಣ್ಣ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಅಲ್ಲಿಂದ ಚನ್ನಬಸವಣ್ಣ ದೇವರ ಪಲ್ಲಕ್ಕಿಯನ್ನು ಹೊತ್ತು ಭಕ್ತರು ಧರ್ಮದಗುಡ್ಡದ ವರೆಗೆ ಹೆಜ್ಜೆ ಹಾಕಿದರು. ಈ ವೇಳೆ ಜಯಘೋಷ ಮುಗಿಲು ಮುಟ್ಟಿತ್ತು.

ಧರ್ಮದಗುಡ್ಡದಲ್ಲಿ ಚನ್ನಬಸವಣ್ಣನವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬನ್ನಿ ಮರದ ಸುತ್ತ ಪಲ್ಲಕ್ಕಿಯೊಂದಿಗೆ ಭಕ್ತರು ಪ್ರದಕ್ಷಿಣೆ ಹಾಕಿದರು. ನಗರದ ಮ್ಯಾಸಕೇರಿಯ ಹುಲಿಗೆಮ್ಮ–ಕೊಂಗಮ್ಮ ದೇವಿ, ಉಕ್ಕಡಕೇರಿಯ–ಜಲದುರ್ಗಮ್ಮ, ತಳವಾರಕೇರಿಯ–ರಾಂಪುರ ದುರ್ಗಮ್ಮ, ಬಾಣದಕೇರಿಯ–ನಿಜಲಿಂಗಮ್ಮ, ಚಿತ್ರಕೇರಿಯ–ತಾಯಮ್ಮ-ಬಳ್ಳಾರಿ ದುರ್ಗಮ್ಮ, ಹರಿಜನಕೇರಿಯ–ಹುಲಿಗೆಮ್ಮ, ಮಾಯಮ್ಮ ದೇವಿ ಸೇರಿದಂತೆ ಒಟ್ಟು 23 ದೇವರುಗಳನ್ನು ಅಲಂಕರಿಸಿದ ಪಲ್ಲಕ್ಕಿಯಲ್ಲಿ ಹೊತ್ತು ಭಕ್ತರು ಧರ್ಮದಗುಡ್ಡಕ್ಕೆ ಬಂದರು. ನಂತರ ಎಲ್ಲ ಪಲ್ಲಕ್ಕಿಗಳನ್ನು ಹೊತ್ತುಕೊಂಡು ಭಕ್ತಿಭಾವದಿಂದ ಬನ್ನಿ ಮರ ಸುತ್ತಿದರು. ಅನಂತರ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಿತು. ವಿಜಯದಶಮಿಗೂ ಮುನ್ನ ದಿನವೇ ಬನ್ನಿ ಮುಡಿಯುವುದು ವಿಶೇಷ.

ಅನಂತರ ಪುನಃ ಎಲ್ಲ ದೇವರುಗಳ ಪಲ್ಲಕ್ಕಿಗಳನ್ನು ಹೊತ್ತು ಭಕ್ತರು ನಗರದ ರಾಮಾ ಟಾಕೀಸ್‌ಗೆ ಹಿಂತಿರುಗಿದರು. ಅಲ್ಲಿ ಭಕ್ತರು ಸ್ವಾಗತ ಕೋರಿದರು. ಆಯಾ ಕೇರಿಯ ಜನ ಅವರ ದೇವರನ್ನು ಕೋಲಾಟ, ನೃತ್ಯದ ಮೂಲಕ ಬರಮಾಡಿಕೊಂಡರು. ಅದನ್ನು ಕಣ್ತುಂಬಿಕೊಳ್ಳಲು ಅಪಾರ ಜನ ಸೇರಿದ್ದರು.

ನಾಗೇನಹಳ್ಳಿ, ಧರ್ಮದಗುಡ್ಡ ಮಾರ್ಗ, ಹಂಪಿ ರಸ್ತೆ, ರಾಮ ಟಾಕೀಸ್‌, ವಾಲ್ಮೀಕಿ ವೃತ್ತದಲ್ಲಿ ದಿನವಿಡೀ ಜಾತ್ರೆಯ ವಾತಾವರಣ ಇತ್ತು. ತಾಲ್ಲೂಕಿನ ಕಮಲಾಪುರದ ಏಳು ಕೇರಿಗಳಲ್ಲೂ ದಸರಾ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಕಾಂಗ್ರೆಸ್‌ ಮುಖಂಡ ಎಚ್.ಆರ್‌.ಗವಿಯಪ್ಪ ಇತರರಿದ್ದರು.

ವಾಹನಗಳಿಗೆ ಪೂಜೆ:
ಆಯುಧಪೂಜೆ ಅಂಗವಾಗಿ ನಗರದಲ್ಲಿ ಜನ ತಮ್ಮ ಮನೆಯಲ್ಲಿರುವ ವಸ್ತುಗಳು, ವಾಹನಗಳನ್ನು ಸ್ವಚ್ಛಗೊಳಿಸಿ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ಪೊಲೀಸ್‌ ಠಾಣೆ, ಅಗ್ನಿಶಾಮಕ ದಳ, ಆಂಬುಲೆನ್ಸ್ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳ ವಾಹನಗಳಿಗೂ ಪೂಜೆ ಸಲ್ಲಿಸಲಾಯಿತು. ನಗರದ ಏಳುಕೇರಿಗಳಲ್ಲಿ ಹಬ್ಬದ ಸಂಭ್ರಮ ಮೇರೆ ಮೀರಿತ್ತು. ಎಲ್ಲ ಕೇರಿಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ, ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಪ್ರತಿಯೊಂದು ಕೇರಿಯ ಮನೆಯಂಗಳ ಬಗೆಬಗೆಯ ರಂಗೋಲಿಯಿಂದ ಕಂಗೊಳಿಸಿದವು.

ಬೆಳ್ಳಿ ಪಲ್ಲಕ್ಕಿಯಲ್ಲಿ ದೇವಿ ಮೆರವಣಿಗೆ|ಪ್ರಜಾವಾಣಿ ಚಿತ್ರ: ಲವ
ಬೆಳ್ಳಿ ಪಲ್ಲಕ್ಕಿಯಲ್ಲಿ ದೇವಿ ಮೆರವಣಿಗೆ|ಪ್ರಜಾವಾಣಿ ಚಿತ್ರ: ಲವ
ದೇವಿ ಪಲ್ಲಕ್ಕಿ ಹೊತ್ತು ಬನ್ನಿ ವೃಕ್ಷದ ಸುತ್ತ ಪ್ರದಕ್ಷಿಣೆ ಹಾಕುತ್ತಿರುವ ಕ್ಷಣಕ್ಕೆ ಸಾಕ್ಷಿಯಾದಅಪಾರ ಜನಸ್ತೋಮ |ಪ್ರಜಾವಾಣಿ ಚಿತ್ರ: ಲವ
ದೇವಿ ಪಲ್ಲಕ್ಕಿ ಹೊತ್ತು ಬನ್ನಿ ವೃಕ್ಷದ ಸುತ್ತ ಪ್ರದಕ್ಷಿಣೆ ಹಾಕುತ್ತಿರುವ ಕ್ಷಣಕ್ಕೆ ಸಾಕ್ಷಿಯಾದ
ಅಪಾರ ಜನಸ್ತೋಮ |ಪ್ರಜಾವಾಣಿ ಚಿತ್ರ: ಲವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT