ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

Last Updated 5 ಸೆಪ್ಟೆಂಬರ್ 2022, 16:10 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಶಿಕ್ಷಣ ಕ್ಷೇತ್ರದಲ್ಲಿ ಇಡೀ ಉತ್ತರ ಕರ್ನಾಟಕದಲ್ಲಿ ನೂತನ ವಿಜಯನಗರ ಜಿಲ್ಲೆ ಮೊದಲ ಸ್ಥಾನಕ್ಕೆ ತರಲು ಶಿಕ್ಷಕರು ಶ್ರಮಿಸಬೇಕು’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಸಲಹೆ ಮಾಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನನ್ನೊಬ್ಬನಿಂದಲೇ ಎಲ್ಲವೂ ಆಗಲ್ಲ. ಎಲ್ಲರ ಸಹಕಾರದಿಂದ ಗುರಿ ಸಾಧನೆ ಸಾಧ್ಯ ಎಂದು ಹೇಳಿದರು.

ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದಲ್ಲಿ (ಕೆ.ಇ.ಎಂ.ಆರ್‌.ಸಿ.) ₹6ರಿಂದ ₹8 ಸಾವಿರ ಜಿಲ್ಲೆಯ ಪಾಲಿನ ಹಣವಿದೆ. ಅದನ್ನು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ವಿನಿಯೋಗಿಸಲು ಹೆಚ್ಚಿನ ಒತ್ತು ಕೊಡಲಾಗುವುದು. ಶಿಕ್ಷಣ, ಆರೋಗ್ಯ ಕ್ಷೇತ್ರ ಬಹಳ ಮಹತ್ವದ್ದು. ಅನಂತರ ಇತರೆ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗುವುದು ಎಂದರು.

ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ಸೂತ್ರಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಟ್ಟಿದ್ದಾರೆ ಎಂದರೆ ಅದರ ಮಹತ್ವ ಎಷ್ಟಿದೆ ಎನ್ನುವುದು ಮನಗಾಣಬಹುದು. ಉತ್ತಮ ಶಿಕ್ಷಣ ಪಡೆದರೆ ಸಂಘಟನೆ, ಹೋರಾಟ ಸಾಧ್ಯ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಜ್ಞಾನ ಶಾಖೆಗಳೂ ಬದಲಾಗಿವೆ. ಆಧುನಿಕ ತಂತ್ರಜ್ಞಾನ, ಹೊಸ ಜ್ಞಾನವನ್ನು ಶಿಕ್ಷಕರೆಲ್ಲ ಅರಿತುಕೊಂಡು ಮಕ್ಕಳಿಗೆ ಪಾಠ ಮಾಡಬೇಕಿದೆ. ಜಿಲ್ಲಾ ಖನಿಜ ನಿಧಿಯಿಂದ ಶಿಕ್ಷಣಕ್ಕೆ ಜಿಲ್ಲೆಯಲ್ಲಿ ಹೆಚ್ಚು ಒತ್ತು ಕೊಡಲಾಗುತ್ತಿದೆ. ಸ್ಮಾರ್ಟ್‌ ಕ್ಲಾಸ್‌ಗಳು ಬಂದಿವೆ. ಟ್ಯಾಬ್ಲೆಟ್‌ ವಿತರಿಸಲಾಗಿದೆ. ಮಕ್ಕಳ ಹಾಜರಾತಿಯ ಸಮಸ್ಯೆ ಇದ್ದು, ಅದನ್ನು ಪರಿಹರಿಸಲಾಗುವುದು ಎಂದರು.

ನಗರಸಭೆ ಅಧ್ಯಕ್ಷ ಸುಂಕಮ್ಮ, ಉಪಾಧ್ಯಕ್ಷ ಎಲ್‌.ಎಸ್‌. ಆನಂದ, ಡಿ.ಡಿ.ಪಿ.ಐ. ಜಿ. ಕೊಟ್ರೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಪ್ರೌಢಶಾಲೆ ಸಹಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮನೋಹರ್‌, ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಸಂಗಪ್ಪನವರ್‌, ತಾಲ್ಲೂಕು ಅಧ್ಯಕ್ಷ ಮಾರ್ಗದಪ್ಪ, ಅಕ್ಕಮಹಾದೇವಿ ಇದ್ದರು.

ಪ್ರಾಥಮಿಕ ಶಾಲೆಯ 9, ಪ್ರೌಢಶಾಲೆಯ ಐದು ಜನ ಶಿಕ್ಷಕರಿಗೆ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಸಚಿವ ಆನಂದ್‌ ಸಿಂಗ್‌ ಪ್ರದಾನ ಮಾಡಿದರು.

ಪ್ರಾಥಮಿಕ ಶಾಲೆ ವಿಭಾಗದಲ್ಲಿ ಸಹಶಿಕ್ಷಕಿ ಶಶಿಕಲಾ ಗಚ್ಚಿನಮನಿ, ಕೆ. ಸುಧಮ್ಮ, ನಲಿಕಲಿ ಶಿಕ್ಷಕಿ ಎಚ್‌.ಬಿ.ಎಂ. ಕೊಟ್ರಮ್ಮ, ಬಡ್ತಿ ಮುಖ್ಯಶಿಕ್ಷಕ ಜಿ. ಚನ್ನಬಸಪ್ಪ, ದೈಹಿಕ ಶಿಕ್ಷಕ ಪ್ರಕಾಶ ಮಣೆಗಾರ, ನಾಯಕರ ಮಂಜುನಾಥ, ನಿಂಗಮ್ಮ ಎಂ., ಕುಮಾರಸ್ವಾಮಿ, ರೇಣುಕಮ್ಮ. ಪ್ರೌಢಶಾಲೆ ವಿಭಾಗದಿಂದ ಸಹಶಿಕ್ಷಕ ಕ್ಯಾದಿಗೆಹಾಳ ಉದೇದಪ್ಪ, ನೇವಾರ ಲಿಂಗರಾಜ, ಎಂ.ಪಿ.ಎಂ. ಮಂಜುನಾಥ, ಎಚ್‌.ಎಂ. ಶಿವಬಸವಸ್ವಾಮಿ, ಎನ್‌.ಎಂ. ಶ್ರೀಕಾಂತ ಪ್ರಶಸ್ತಿ ಸ್ವೀಕರಿಸಿದವರು.

‘ಸರಸ್ವತಿ ನನಗೆ ಒಲಿಯಲಿಲ್ಲ’

‘ಸರಸ್ವತಿ ನನಗೆ ಒಲಿಯಲಿಲ್ಲ. ಆದರೆ, ಸಾಮಾನ್ಯ ಜ್ಞಾನ ಇದೆ’ ಎಂದು ಸಚಿವ ಆನಂದ್‌ ಸಿಂಗ್‌ ಅವರು ಅವರ ಭಾಷಣದಲ್ಲಿ ಹೇಳಿದಾಗ, ‘ಲಕ್ಷ್ಮಿ’ ಒಲಿದಿದ್ದಾಳೆ ಎಂದು ಕೆಲ ಶಿಕ್ಷಕರು ಹೇಳಿ ಕಿಚಾಯಿಸಿದರು. ಆಗ ಇಡೀ ಸಭೆ ನಗೆಗಡಲಲ್ಲಿ ತೇಲಾಡಿತು. ಅದಕ್ಕೆ ಪ್ರತಿಕ್ರಿಯಿಸಿದ ಸಿಂಗ್‌, ‘ಅದು ಕೂಡ ಜನರಿಂದಲೇ ಒಲಿದಿದೆ’ ಎಂದು ಹೇಳಿದರು.
‘ಸಮಾಜ ಸೇವೆ ಮೂಲಕ ಜನರ ನಡುವೆ ಬಂದವನು ನಾನು. ರಾಜಕೀಯಕ್ಕೆ ಬರಬೇಕೆಂದು ಬಂದವನಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT