ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರಕ್ಕೆ ಪ್ರಧಾನಿ ಕರೆತರಲು ಪ್ರಯತ್ನ: ಸಚಿವೆ ಶಶಿಕಲಾ ಜೊಲ್ಲೆ

Last Updated 20 ಫೆಬ್ರುವರಿ 2022, 12:26 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಪಂಚಾಯತ್‌ರಾಜ್‌ ದಿವಸ್‌ ಕಾರ್ಯಕ್ರಮ ಆಚರಣೆಗೆ ಹೊಸಪೇಟೆ ತಾಲ್ಲೂಕಿನ ಮಲಪನಗುಡಿ ಸೇರಿದಂತೆ ರಾಜ್ಯದ ಮೂರು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಅಂತಿಮಗೊಳ್ಳುವ ಒಂದು ಗ್ರಾಮ ಪಂಚಾಯಿತಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವರು. ಈ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ಪ್ರಧಾನಿ ಕಚೇರಿಯನ್ನು ಸಂಪರ್ಕಿಸಿ, ವಿಜಯನಗರ ಜಿಲ್ಲೆಗೆ ಪ್ರಧಾನಿಯವರನ್ನು ಕರೆತರಲು ಪ್ರಯತ್ನಿಸಲಾಗುವುದು’ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

‘ಘನತ್ಯಾಜ್ಯ ವಿಲೇವಾರಿಯಲ್ಲಿ ಮಲಪನಗುಡಿಯಲ್ಲಿ ಉತ್ತಮ ಕೆಲಸವಾಗಿದೆ. ಸ್ವಸಹಾಯ ಗುಂಪುಗಳ ಮಹಿಳೆಯರು ಈ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸಿಕೊಂಡು ಹೋಗುತ್ತಿದ್ದಾರೆ’ ಎಂದರು.

ಸಚಿವ ಆನಂದ್‌ ಸಿಂಗ್‌ ಪ್ರತಿಕ್ರಿಯಿಸಿ, ‘ಜಿಲ್ಲೆಗೆ ಪ್ರಧಾನಿ ಬರುವ ಭರವಸೆ ಇದೆ. ಆದರೆ, ಕೇಂದ್ರ ಸರ್ಕಾರದಿಂದ ಇದುವರೆಗೆ ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿಲ್ಲ. ಕೋವಿಡ್‌ ತಗ್ಗಿರುವುದರಿಂದ ಬಂದರೂ ಬರಬಹುದು’ ಎಂದು ಪ್ರತಿಕ್ರಿಯಿಸಿದರು.

ಜಿಲ್ಲಾಮಟ್ಟದ ಎಲ್ಲ ಕಚೇರಿ ಒಂದೇ ಕಡೆ: ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಹೇಳಿಕೆ

₹228 ಕೋಟಿ ಮೊತ್ತದ 67 ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಭಾನುವಾರ ನಗರದಲ್ಲಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಸಚಿವರು ತಡವಾಗಿ ಬಂದದ್ದರಿಂದ ಮಧ್ಯಾಹ್ನ 12ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ ಒಂದೂವರೆ ಗಂಟೆ ತಡವಾಗಿ ಆರಂಭಗೊಂಡಿತು. ನಿಗದಿತ ಸಮಯಕ್ಕೆ ಬಂದಿದ್ದ ಅಧಿಕಾರಿ ವರ್ಗ, ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಬಿಸಿಲಿನಲ್ಲಿ ಕಾದು ಕಾದು ಸುಸ್ತಾದರು. ಕಾಲೇಜು ರಸ್ತೆಯಲ್ಲಿ ಸಚಿವದ್ವಯರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ವೇದಿಕೆವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಶಿಕಲಾ, ‘ನೂತನ ವಿಜಯನಗರ ಜಿಲ್ಲೆಯಲ್ಲಿ ಎಲ್ಲ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳನ್ನು ಒಂದೇ ಕಡೆ ನಿರ್ಮಿಸುವ ಪ್ರಸ್ತಾವ ಇದೆ. ಆದರೆ, ಅದಕ್ಕೆ ತಾಂತ್ರಿಕ ತೊಂದರೆ ಎದುರಾಗಿದೆ. ಆದರೆ, ಎರಡು ತಿಂಗಳೊಳಗೆ ಅದನ್ನು ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.

ಹೊಸ ಕಚೇರಿಗಳನ್ನು ವಿಜಯನಗರ ವಾಸ್ತುಶಿಲ್ಪದ ಮಾದರಿಯಲ್ಲಿ ನಿರ್ಮಿಸುವ ಯೋಜನೆ ಇದೆ. ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು.

ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡಬೇಕು. ಜಿಲ್ಲೆ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿ ಕನಸು ಹೊಂದಿದ್ದಾರೆ. ಅವರ ಕನಸು ನನಸು ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಸಚಿವ ಆನಂದ್‌ ಸಿಂಗ್‌, ‘ಆರು ತಿಂಗಳಲ್ಲಿ ಬಹಳಷ್ಟು ಕೆಲಸಗಳಾಗುತ್ತವೆ. ಆದರೆ, ಸಾರ್ವಜನಿಕರ ಸಹಕಾರ ಅಗತ್ಯ. ರಸ್ತೆ ವಿಸ್ತರಣೆ, ದುರಸ್ತಿ ಮಾಡಬೇಕಾದಾಗ ಜನರ ಸಹಕಾರ ಬಹಳ ಅತ್ಯಗತ್ಯ. ಹೆರಿಟೇಜ್‌ ನಗರಗಳಲ್ಲಿ ವಿಜಯನಗರ ಕೂಡ ಒಂದು. ರಾಜ್ಯಕ್ಕೆ ಮಾದರಿ ಜಿಲ್ಲೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಭರವಸೆ ವ್ಯಕ್ತಪಡಿಸಿದರು.

ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಗುಣಮಟ್ಟ ಇರದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು. ಯಾರೂ ಕೂಡ ನನಗಾಗಿ ಕೆಲಸ ಮಾಡುತ್ತಿಲ್ಲ. ಜಿಲ್ಲೆಗಾಗಿ ಕೆಲಸ ಮಾಡುತ್ತಿದ್ದೀರಿ ಎನ್ನುವುದು ನೆನಪಿನಲ್ಲಿರಲಿ ಎಂದು ಎಚ್ಚರಿಕೆ ನೀಡಿದರು.

ಸಂಸದ ವೈ.ದೇವೇಂದ್ರಪ್ಪ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್‌. ಆನಂದ್‌, ಹುಡಾ ಅಧ್ಯಕ್ಷ ಅಶೋಕ್‌ ಜೀರೆ, ಡಿಸಿ ಅನಿರುದ್ಧ್‌ ಶ್ರವಣ್‌ ಪಿ, ಜಿಪಂ ಸಿಇಒ ಹರ್ಷಲ್‌ ಭೋಯರ್‌ ನಾರಾಯಣರಾವ್‌, ಎಸ್ಪಿ ಡಾ. ಅರುಣ್‌ ಕೆ., ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸೈಯದ್‌ ಅಮಾನುಲ್ಲಾ, ರಾಜಶೇಖರ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT