ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಸಿದ್ದಾರ್ಥ ‌ಸಿಂಗ್ ಶಕ್ತಿ ಪ್ರದರ್ಶನ

ಹೊಸಪೇಟೆ ಸಂಪೂರ್ಣ ಬಿಜೆಪಿಮಯ; ಸಾವಿರಾರು ಕಾರ್ಯಕರ್ತರು ಭಾಗಿ
Last Updated 20 ಏಪ್ರಿಲ್ 2023, 8:35 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಅವರು ನಗರದಲ್ಲಿ ಬುಧವಾರ ಸಾವಿರಾರು ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ನಗರದ ಡಾ. ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದ ಧ್ವಜ ಸ್ತಂಭಕ್ಕೆ ಪೂಜೆ ನೆರವೇರಿಸಿದ ಅವರು, ಎತ್ತಿನ ಬಂಡಿಯೊಂದಿಗೆ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಸಂಡೂರು ರಸ್ತೆಯಲ್ಲಿನ ಚುನಾವಣಾಧಿಕಾರಿ ಕಚೇರಿವರೆಗೆ ಶಕ್ತಿ ಪ್ರದರ್ಶನ ಮಾಡಿದರು.

ಎತ್ತಿನ ಬಂಡಿಯಲ್ಲಿ ನಿಂತು ಎಲ್ಲರತ್ತ ಕೈಮುಗಿಯುತ್ತ ಮುಂದೆ ಮುಂದೆ ಸಾಗಿದರೆ ಅವರ ಜೊತೆಯಲ್ಲಿ ಬಿಜೆಪಿಯ ಧ್ವಜಗಳು, ಕಮಲ ಚಿಹ್ನೆ ಇರುವ ಟೋಪಿಗಳನ್ನು ಧರಿಸಿ ಕಾರ್ಯಕರ್ತರು ಸುಡು ಬಿಸಿಲು ಲೆಕ್ಕಿಸದೆ ಹೆಜ್ಜೆ ಹಾಕಿದರು. ಇಡೀ ನಗರ ಬಿಜೆಪಿಮಯವಾಗಿತ್ತು. ಮಾರ್ಗದುದ್ದಕ್ಕೂ ಅವರ ಬೆಂಬಲಿಗರು ಹೂಮಳೆ ಸುರಿಸಿದರು. ಜಾಂಜ್ ಮೇಳ, ಬಯಲಾಟ ತಂಡಗಳು, ಮಂಗಳಮುಖಿಯರು ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಮೆರವಣಿಗೆಯ ಕೊನೆಯಲ್ಲಿ ಆನಂದ್‌ ಸಿಂಗ್‌ ಅವರು ಬೆಂಬಲಿಗರೊಂದಿಗೆ ಜನರತ್ತ ಕೈಮುಗಿಯುತ್ತ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡುತ್ತ ಹೆಜ್ಜೆ ಹಾಕಿದರು.

ಮೆರವಣಿಗೆಯು ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಡಾ. ಪುನೀತ್‌ ರಾಜಕುಮಾರ್‌ ವೃತ್ತ, ಸೋಗಿ ಮಾರುಕಟ್ಟೆ, ಮದಕರಿ ನಾಯಕ ವೃತ್ತ, ವಾಲ್ಮೀಕಿ ವೃತ್ತದ ಮೂಲಕ ಚುನಾವಣಾಧಿಕಾರಿ ಕಚೇರಿ ತಲುಪಿತು. ಸಿದ್ದಾರ್ಥ ಸಿಂಗ್‌ ಅವರು ಮಧ್ಯಾಹ್ನ 12 ಗಂಟೆಯೊಳಗೆ, ರಾಹು ಕಾಲ ಆರಂಭಗೊಳ್ಳುವುದರೊಳಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮುಖಂಡರಾದ ಕೊಟ್ರೇಶ್‌, ಸಿದ್ದನಗೌಡ, ಶರಣ ಸ್ವಾಮಿ, ಸಮೀವುಲ್ಲಾ ಹಾಜರಿದ್ದರು.

ಅಭ್ಯರ್ಥಿಯೊಂದಿಗೆ ಮೆರವಣಿಗೆಯಲ್ಲಿ ಬಂದಿದ್ದವರು ಚುನಾವಣಾಧಿಕಾರಿ ಕಚೇರಿಯತ್ತ ತೆರಳಲು ಮುಂದಾದಾಗ ಪೊಲೀಸರು ಅವರನ್ನು ತಡೆದರು. ಈ ವೇಳೆ ಕೆಲಕಾಲ ನೂಕುನುಗ್ಗಲು ಉಂಟಾಗಿತ್ತು. ಮೆರವಣಿಗೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್. ಗವಿಯಪ್ಪ ನಾಮಪತ್ರ ಸಲ್ಲಿಕೆ ಮೆರವಣಿಗೆ ವೇಳೆ ಇದೇ ರೀತಿ ಸಂಚಾರ ಸಮಸ್ಯೆ ಉಂಟಾಗಿ ಜನ ತೀವ್ರ ಪರದಾಟ ನಡೆಸಿದ್ದರು. ಮೂರು ದಿನಗಳಲ್ಲಿ ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಶಕ್ತಿ ಪ್ರದರ್ಶನದೊಂದಿಗೆ ಚುನಾವಣಾ ಕಣವನ್ನು ರಂಗೇರಿಸಿದ್ದಾರೆ.

ಬೆದರಿದ ಎತ್ತುಗಳು; ಕಾನ್‌ಸ್ಟೆಬಲ್‌, ಮಹಿಳೆಗೆ ಗಾಯ:

ನಗರದ ಸಂಡೂರು ರಸ್ತೆಯಲ್ಲಿನ ಚುನಾವಣಾಧಿಕಾರಿ ಕಚೇರಿ ವರೆಗೆ ಎತ್ತಿನ ಬಂಡಿಯಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್‌ ಬಂದರು. ಈ ವೇಳೆ ನೂಕುನುಗ್ಗಲು ಉಂಟಾಯಿತು. ಜನರನ್ನು ನೋಡಿ ಬೆದರಿದ ಎತ್ತುಗಳು ಬ್ಯಾರಿಕೇಡ್‌ ಹಾಗೂ ರಸ್ತೆವಿಭಜಕದ ಮೇಲೆ ಎಗರಿದವು. ಈ ವೇಳೆ ಎತ್ತಿನ ಬಂಡಿಯಲ್ಲೇ ಇದ್ದ ಸಿದ್ದಾರ್ಥ ಸಿಂಗ್‌ ಅಪಾಯದಿಂದ ಪಾರಾದರು. ಆದರೆ, ಈ ವೇಳೆ ಕಮಲಾಪುರ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ವಿವೇಕ್‌ ಹಾಗೂ ಮಹಿಳಾ ಕಾರ್ಯಕರ್ತೆಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾದವು. ಈ ವೇಳೆ ಜನ ಕೂಡ ಬೇಕಾಬಿಟ್ಟಿ ಓಡಲು ಮುಂದಾದರು. ಕೆಲವರು ನೂರು ಮೀಟರ್‌ ದಾಟಿ ಚುನಾವಣಾಧಿಕಾರಿ ಕಚೇರಿಯತ್ತ ಓಡಲು ಮುಂದಾದಾಗ ಪೊಲೀಸರು ಲಾಠಿ ರುಚಿ ತೋರಿಸಿ ಕಳಿಸಿದರು. ಇನ್ನು, ಮೆರವಣಿಗೆ ವಾಲ್ಮೀಕಿ ವೃತ್ತದಲ್ಲಿ ಬಂದಾಗ ಕೆಲಕಾಲ ಆಂಬ್ಯುಲೆನ್ಸ್‌ ಜನರ ನಡುವೆ ಸಿಲುಕಿಕೊಂಡಿತ್ತು. ಸಂಚಾರ ಪೊಲೀಸರು ಜನರನ್ನು ದೂರು ಸರಿಸಿ, ಆಂಬ್ಯುಲೆನ್ಸ್‌ ತೆರಳಲು ವ್ಯವಸ್ಥೆ ಮಾಡಿದರು.


ಚುನಾವಣಾಧಿಕಾರಿ ಕಚೇರಿ ಎದುರು

ಗುಂಪುಗೂಡಿಸಿದ ಸಚಿವರು

ಇನ್ನು ಚುನಾವಣಾಧಿಕಾರಿ ಕಚೇರಿಯಿಂದ ನೂರು ಮೀಟರ್‌ ಅಂತರದೊಳಗೆ ಅಭ್ಯರ್ಥಿ ಹಾಗೂ ಇತರೆ ನಾಲ್ವರು ಅವರೊಂದಿಗೆ ಹೋಗಲು ಅವಕಾಶವಿದೆ. ಆದರೆ, ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್‌ ಅವರು ಚುನಾವಣಾಧಿಕಾರಿ ಕಚೇರಿಯೊಳಗೆ ತೆರಳಿದ ನಂತರ ಹಲವರು ಕಚೇರಿ ಗೇಟ್‌ ಎದುರಲ್ಲೇ ಬೀಡು ಬಿಟ್ಟಿದ್ದರು. ಸಚಿವ ಆನಂದ್‌ ಸಿಂಗ್‌, ಅವರ ಸಂಬಂಧಿಕರಾದ ಪ್ರವೀಣ್‌ ಸಿಂಗ್‌ ಹಾಗೂ ಬೆಂಬಲಿಗರು ಗುಂಪು ಗೂಡಿದ್ದರು. ಅತ್ತಿಂದಿತ್ತ ಓಡಾಡುತ್ತಿದ್ದರು. ಆದರೆ, ಅಲ್ಲೇ ಇದ್ದ ಪೊಲೀಸರು ಅವರನ್ನು ಅಲ್ಲಿಂದ ಕಳುಹಿಸುವ ಕೆಲಸ ಮಾಡಲಿಲ್ಲ. ನೀತಿ ಸಂಹಿತೆ ಪ್ರಭಾವಿಗಳಿಗೆ ಅನ್ವಯವಾಗುವುದಿಲ್ಲವೇ ಎಂಬ ಮಾತುಗಳು ಜನರ ನಡುವೆ ಕೇಳಿ ಬಂತು.

‘ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ’:

‘ಎಲ್ಲ ಸಮಾಜದ ಮುಖಂಡರೊಂದಿಗೆ ಬಂದು ನಾಮಪತ್ರ ಸಲ್ಲಿಸಿರುವೆ. ಎಲ್ಲರೂ ಬೆಂಬಲಿಸುತ್ತಾರೆ ಎಂಬ ಭರವಸೆ ಇದೆ. ಇಡೀ ರಾಜ್ಯ ತಿರುಗಿ ನೋಡುವ ರೀತಿಯಲ್ಲಿ ಕ್ಷೇತ್ರ ಅಭಿವೃದ್ಧಿಗೊಳಿಸುವ ಗುರಿ ಇದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವುದು, ಮೂಲಸೌಕರ್ಯ ಕಲ್ಪಿಸುವುದು ನನ್ನ ಮೊದಲ ಆದ್ಯತೆ’ ಎಂದು ಸಿದ್ದಾರ್ಥ ಸಿಂಗ್‌ ಹೇಳಿದರು.

ಬುಧವಾರ ನಗರದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ನನ್ನ ಮುಖ್ಯು ಗುರಿ. ‘ಗ್ರಾಮ– ನಗರ ವಾಸ, ಜನರ ವಿಶ್ವಾಸ’ ಕಾರ್ಯಕ್ರಮ ಮಾಡಿ ಪ್ರಚಾರ ಕೈಗೊಂಡಿದ್ದೇನೆ. ನನಗೆ ಎಷ್ಟು ಜನಬೆಂಬಲ ಇದೆ ಎನ್ನುವುದು ಇಂದಿನ ಮೆರವಣಿಗೆ ನೋಡಿದರೆ ಗೊತ್ತಾಗುತ್ತದೆ. ಜನರ ಮನಸ್ಸು ಗೆಲ್ಲಲು ಪ್ರಯತ್ನಿಸುತ್ತಿರುವೆ. ಯುವಕನಿದ್ದೇನೆ, ತಾಯಿ ಸರಸ್ವತಿ ಆಶೀರ್ವಾದ ಇದೆ. ಸಾಮಾಜಿಕ ಕಾಳಜಿ ಇದೆ. 1 ಲಕ್ಷ ಮತ ಗಳಿಸುವ ನನ್ನ ಗುರಿ ತಲುಪಲು ಪ್ರಯತ್ನಿಸುವೆ. ಬೇರೆಯವರ ಮಾತಿಗೆ ಪ್ರತಿಕ್ರಿಯಿಸಲಾರೆ. ಅಲ್ಪಸಂಖ್ಯಾತರು ಕೂಡ ನನ್ನನ್ನು ಬೆಂಬಲಿಸುವ ವಿಶ್ವಾಸ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT