ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರುಗಳಿಗೆ ಮಾರಕ ‘ಕ್ಯಾಪ್ರಿಫಾಕ್ಸ್’ ವೈರಸ್‌

ಚರ್ಮಗಂಟು ರೋಗದಿಂದ ವಿಜಯನಗರದಲ್ಲಿ 300, ಬಳ್ಳಾರಿಯಲ್ಲಿ 15 ದನ– ಕರುಗಳ ಸಾವು
Last Updated 12 ಅಕ್ಟೋಬರ್ 2022, 9:13 IST
ಅಕ್ಷರ ಗಾತ್ರ

ಬಳ್ಳಾರಿ/ಹೊಸಪೇಟೆ (ವಿಜಯನಗರ): ‘ಕ್ಯಾಪ್ರಿಫಾಕ್ಸ್‌’ ಸೋಂಕು ಜಾನುವಾರುಗಳಿಗೆ ಮಾರಕವಾಗಿ ಪರಿಣಮಿಸಿದ್ದು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ರೈತರು ಹೈರಾಣಾಗಿದ್ದಾರೆ. ಸೋಂಕು ತಡೆಗೆ ಕ್ರಮ ಕೈಗೊಳ್ಳಬೇಕು ಮತ್ತು ಈಗಾಗಲೇ ಮೃತಪಟ್ಟಿರುವ ರಾಸುಗಳಿಗೆ ಪರಿಹಾರ ನೀಡಬೇಕು ಎಂಬುದು ಅವಳಿ ಜಿಲ್ಲೆಯ ರೈತರ ಆಗ್ರಹವಾಗಿದೆ.

ವಿಜಯನಗರ ಜಿಲ್ಲೆ: ಸೋಂಕು ಸದ್ದಿಲ್ಲದೇ ದನ, ಕರು, ಎತ್ತು, ಎಮ್ಮೆಗಳಲ್ಲಿ ನುಸುಳಿ ಅವುಗಳ ಜೀವ ತೆಗೆದುಕೊಳ್ಳುತ್ತಿದೆ. ಅದರಲ್ಲೂ ಇದು ದನ, ಕರು, ಎಮ್ಮೆಗಳಿಗೆ ಹೆಚ್ಚು ಮಾರಕವಾಗಿದೆ. ಕುರಿ, ಮೇಕೆಗಳಿಗೆ ಇದರಿಂದ ಅಪಾಯ ಇಲ್ಲ ಎನ್ನುವುದೇ ಸಮಾಧಾನದ ಸಂಗತಿ.

ಸೋಂಕು ತಗುಲಿದ ನಂತರ ಅವುಗಳ ಮೈಮೇಲಿನ ಚರ್ಮ ಗಂಟು ಕಟ್ಟಿಕೊಳ್ಳಲು ಆರಂಭಿಸುತ್ತದೆ. ಅದಾದ ಕೆಲ ದಿನಗಳ ನಂತರ ಜೀವ ಬಿಡುತ್ತವೆ. ಈ ಕಾರಣಕ್ಕಾಗಿಯೇ ಇದಕ್ಕೆ ಚರ್ಮಗಂಟು ರೋಗ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ.

ಪಶು ಸಂಗೋಪನಾ ಇಲಾಖೆಯ ಮೂಲಗಳ ಪ್ರಕಾರ, ರಾಜ್ಯದ ಹೆಚ್ಚಿನ ಭಾಗಗಳಿಗೆ ‘ಕ್ಯಾಪ್ರಿಫಾಕ್ಸ್‌’ ಕಾಲಿಟ್ಟಿದೆ. ಅದರಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಹಾವೇರಿ ಜಿಲ್ಲೆಯಲ್ಲಿ ಇದರ ಆರ್ಭಟ ಹೆಚ್ಚಾಗಿದೆ. ಆ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೂಲಕ ಇಡೀ ಜಿಲ್ಲೆಯಾದ್ಯಂತ ಸೋಂಕು ಹರಡಿದೆ. ವಿಜಯನಗರ ಜಿಲ್ಲೆಯೊಂದರಲ್ಲೇ 3.86 ಲಕ್ಷ ದನ, ಕರು, ಎಮ್ಮೆ ಸೇರಿದಂತೆ ಇತರೆ ಜಾನುವಾರುಗಳಿವೆ. ಇವುಗಳಲ್ಲಿ ಈಗಾಗಲೇ 300ಕ್ಕೂ ಅಧಿಕ ಜಾನುವಾರುಗಳು ಜೀವ ಬಿಟ್ಟಿವೆ.

ಮೇಲಿಂದ ಮೇಲೆ ಜಾನುವಾರುಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆ ಪಶು ಸಂಗೋಪನಾ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗ ಕಾರ್ಯಪ್ರವೃತ್ತರಾಗಿದ್ದು, ಲಸಿಕೆ ಅಭಿಯಾನ ಆರಂಭಿಸಿದ್ದಾರೆ. ಸೋಂಕು ತಗುಲದ ಜಾನುವಾರುಗಳಿಗೆ ಲಸಿಕೆ ಕೊಡುತ್ತಿದ್ದಾರೆ. ಈಗಾಗಲೇ ಸೋಂಕು ತಗುಲಿದ ಜಾನುವಾರುಗಳಿಗೆ ಚಿಕಿತ್ಸೆ ಕೊಟ್ಟು ಉಪಚರಿಸಲಾಗುತ್ತಿದೆ. ಆದರೆ, ಪಶು ಸಂಗೋಪನಾ ಇಲಾಖೆಯ ಕಾರ್ಯವೈಖರಿ ಬಗ್ಗೆ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಆರಂಭದಲ್ಲಿ ಕೆಲ ಜಾನುವಾರುಗಳಲ್ಲಿ ಸೋಂಕು ಕಾಣಿಸಿಕೊಂಡಾಗ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಅವರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅದರ ಪರಿಣಾಮವಾಗಿ ನೂರಾರು ಜಾನುವಾರುಗಳು ಜಿಲ್ಲೆಯಲ್ಲಿ ಸತ್ತಿವೆ. ಈಗಾಗಲೇ ಸತ್ತಿರುವ ಜಾನುವಾರುಗಳ ಮಾಲೀಕರಿಗೆ ಪರಿಹಾರ ಕೊಡಬೇಕು. ಲಸಿಕೆ ಅಭಿಯಾನ ತೀವ್ರಗೊಳಿಸಬೇಕು’ ಎಂದು ರೈತರಾದ ಬಸವರಾಜ, ಹುಲುಗಪ್ಪ, ದಾದಾಪೀರ್‌ ಆಗ್ರಹಿಸಿದ್ದಾರೆ.

ಬಳ್ಳಾರಿ ಜಿಲ್ಲೆ: ನೇಗಿಲ ಹಿಡಿದು ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ; ಫಲವನು ಬಯಸದೆ, ಸೇವೆಯ ಪೂಜೆಯು ಕರ್ಮವೆ ಇಹಪರ ಸಾಧನವು...

ದಶಕಗಳ ಹಿಂದೆ ರಾಷ್ಟ್ರಕವಿ ಕುವೆಂಪು ಬರೆದ ಈ ರೈತ ಗೀತೆ ರೈತರ ಬದುಕಿಗೆ ಕನ್ನಡಿ ಹಿಡಿಯುತ್ತದೆ. ಫಲವನು ಬಯಸದೆ, ಕರ್ಮ ಸಿದ್ಧಾಂತವನ್ನೇ ನಂಬಿ ಹಗಲಿರುಳು ದೇಶದ ಜನರ ಹೊಟ್ಟೆ ತುಂಬಲು ದುಡಿಯುತ್ತಿರುವ ರೈತರ ಗೋಳು ಕೇಳುವವರು ಯಾರೂ ಇಲ್ಲ. ಕಷ್ಟದಲ್ಲೇ ಹುಟ್ಟಿ, ಕಷ್ಟದಲ್ಲೇ ಬೆಳೆದು, ಕಷ್ಟದಲ್ಲೇ ಬದುಕು ಮುಗಿಸುವ ರೈತನ ಇಡೀ ಬದುಕೇ ಕಣ್ಣಾಮುಚ್ಚಾಲೆಯ ಆಟ...

ಅತಿವೃಷ್ಟಿ, ಅನಾವೃಷ್ಟಿ, ಬೆವರಿಗೆ ಸಿಗದ ಬೆಲೆಗಳ ನಡುವೆಯೇ ಹೋರಾಟ. ಇಷ್ಟು ಸಾಲದೆಂಬಂತೆ, ರೈತನ ಹೆಜ್ಜೆ ಜತೆ ಹೆಜ್ಜೆ ಹಾಕುವ ಜೀವನಾಡಿ ಎತ್ತು, ಎಮ್ಮೆ ಮತ್ತು ಆಕಳುಗಳೂ ಈಗ ಕೈಬಿಡುತ್ತಿವೆ. ಹಿಂದೆಂದೂ ಕಂಡರಿಯದ ಚರ್ಮಗಂಟು ರೋಗಕ್ಕೆ ಬಲಿಯಾಗುತ್ತಿವೆ.

ಚರ್ಮಗಂಟು ರೋಗ ಅಥವಾ ಚರ್ಮ ಮುದ್ದೆರೋಗ ಸಾಂಕ್ರಾಮಿಕ ರೋಗವಾಗಿದ್ದು, ಕ್ಯಾಪ್ರಿಫಾಕ್ಸ್‌ (ಫಾಕ್ಸ್‌ ವಿರೀಡೆ) ಎಂಬ ವೈರಾಣುವಿನಿಂದ ಹರಡುತ್ತದೆ. ಇದು ಸೊಳ್ಳೆ, ನೊಣ, ಉಣ್ಣೆ ಇತ್ಯಾದಿ ಕಚ್ಚುವ ಕೀಟಗಳಿಂದ ಬರುತ್ತಿದೆ.

’ಬಳ್ಳಾರಿ ಜಿಲ್ಲೆಯ ಐದು ತಾಲ್ಲೂಕುಗಳ 110 ಗ್ರಾಮಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. 704ಜಾನುವಾರುಗಳಿಗೆ ತಗುಲಿದ್ದು, 15ಸತ್ತಿವೆ. ಸತ್ತ ರಾಸುಗಳಿಗೆ ಪರಿಹಾರ ನೀಡಲಾಗುತ್ತಿದೆ. ಜಿಲ್ಲೆಯಲ್ಲಿದು ಆರಂಭಿಕ ಹಂತದಲ್ಲಿದ್ದು, ’ಲಂಪಿ ಸ್ಕಿನ್‌ ಡಿಸೀಸ್‌ ವ್ಯಾಕ್ಸಿನ್‌‘ ಲಸಿಕೆ ಹಾಕುತ್ತಿರುವುದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ‘ ಎಂದು ಪಶುವೈದ್ಯ ಇಲಾಖೆ ಉಪ ನಿರ್ದೇಶಕ ಹನುಮಂತ ನಾಯಕ್‌ ಕಾರಬಾರಿ ಹೇಳಿದ್ದಾರೆ.

ಚರ್ಮಗಂಟು ರೋಗ ನಿರೋಧಕ ಲಸಿಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಸದ್ಯ ಇಲಾಖೆಯಲ್ಲಿ 54,000 ಯೂನಿಟ್‌ ಲಸಿಕೆ ದಾಸ್ತಾನಿದೆ. ಆ. 1ರಿಂದ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತಿದೆ. ಜಿಲ್ಲೆಯಲ್ಲಿ 1.80 ಲಕ್ಷ ಜಾನುವಾರುಗಳಿವೆ. ಮೊದಲ ಹಂತದಲ್ಲಿ 19 ಸಾವಿರ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಸಿಬ್ಬಂದಿ ಕೊರತೆ ನಡುವೆಯೇ ಲಸಿಕೆ ಪ್ರಕ್ರಿಯೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಕಾರಬಾರಿ ಹೇಳುವಂತೆ ಚರ್ಮಗಂಟು ರೋಗ ಬಳ್ಳಾರಿಗಿಂತ ಹೊಸಪೇಟೆ (ವಿಜಯನಗರ) ಜಿಲ್ಲೆಯಲ್ಲಿ ಗಂಭೀರವಾಗಿದೆ. ಹಾವೇರಿ ಜಿಲ್ಲೆಯಿಂದ ರೋಗ ಹರಡಿದೆ. ಹೂವಿನ ಹಡಗಲಿ, ಹಗರಿ ಬೊಮ್ಮನಹಳ್ಳಿ ಹಾಗೂ ಹರಪನಹಳ್ಳಿ ತಾಲ್ಲೂಕುಗಳಲ್ಲಿ ಸಮಸ್ಯೆ ತೀವ್ರವಾಗಿದೆ. ಹೊಸಪೇಟೆ, ಕೂಡ್ಲಿಗಿ ತಾಲ್ಲೂಕುಗಳಲ್ಲಿ ಪರಿಸ್ಥಿತಿ ತೀವ್ರವಾಗಿಲ್ಲ. ಹೀಗಾಗಿ, ರೋಗ ಹರಡದಂತೆ ನಿರ್ಬಂಧಿಸುವ ಅಗತ್ಯವಿದೆ ಎಂಬುದು ಅವರ ಅಭಿಪ್ರಾಯ.

****

ರೋಗ ಲಕ್ಷಣಗಳು...

* ಅತಿಯಾದ ಜ್ವರ; ಕಣ್ಣುಗಳಿಂದ ನೀರು ಸೋರುವುದು; ನಿಶಕ್ತಿ, ಕಾಲುಗಳಲ್ಲಿ ಬಾವು ಬರುವುದು, ಕುಂಟುವುದು; ಜಾನುವಾರುಗಳ ಚರ್ಮದ ಮೇಲೆ 2–5 ಸೆಂ.ಮೀ ದಪ್ಪದ ಗಂಟು ಕಾಣಿಸಿಕೊಳ್ಳುವುದು; ಹಾಲಿನ ಇಳುವರಿ ಕಡಿಮೆ ಆಗುವುದು; ಎತ್ತುಗಳ ದುಡಿಮೆ ಸಾಮರ್ಥ್ಯ ಕಡಿಮೆ ಆಗುವುದು...

ಹರಡುವುದು ಹೇಗೆ?

* ನೊಣ, ಸೊಳ್ಳೆ, ಉಣ್ಣೆ ಅಥವಾ ಕಚ್ಚುವ ಕೀಟಗಳಿಂದ; ಕಲುಷಿತ ನೀರು, ಆಹಾರದಿಂದ; ಜಾನುವಾರಗಳ ನೇರ ಸಂಪರ್ಕದಿಂದ...

* ರೋಗ ಹರಡುವ ಪ್ರಮಾಣ ಶೇ 10ರಿಂದ 20 ರಷ್ಟು; ಸಾವಿನ ಪ್ರಮಾಣ ಶೇ 1ರಿಂದ 5ರಷ್ಟು...

ಏನು ಚಿಕಿತ್ಸೆ?

* ಇದು ವೈರಾಣುಗಳಿಂದ ಹರಡುವುದರಿಂದ ನಿರ್ದಿಷ್ಟ ಚಿಕಿತ್ಸೆ ಇಲ್ಲ; ದೇಹ ತಂಪಗಿರಲು ಮೈಮೇಲೆ ಹಸಿ ಬಟ್ಟೆ ಹಾಕುವುದು; ಗಾಯಗಳನ್ನು ಪೊಟ್ಯಾಷಿಯಂ ಪರಮ್ಯಾಂಗನೇಟ್‌ ದ್ರಾವಣದಿಂದ ತೊಳೆದು, ಐಯೋಡಿನ್‌ ದ್ರಾವಣ, ಮುಲಾಮು ಹಾಗೂ ಬೇವಿನ ಎಣ್ಣೆ ಸವರಬೇಕು.

* ಕುಡಿಯುವ ನೀರಿನಲ್ಲಿ ಬೆಲ್ಲ, ಉಪ್ಪು ಹಾಗೂ ಅಡುಗೆ ಸೋಡಾ ಮಿಶ್ರಣ ಮಾಡಿ ದಿನಕ್ಕೆ ಐದಾರು ಸಲ ಕುಡಿಸಬೇಕು; ರೋಗಗ್ರಸ್ಥ ಜಾನುವಾರುಗಳಿಂದ ಬೇರ್ಪಡಿಸಬೇಕು; ಹಸಿರು ಮೇವು, ಪೌಷ್ಟಿಕ ಆಹಾರ ಮತ್ತು ಲವಣ ಮಿಶ್ರಣ ಕೊಡಬೇಕು; ರೋಗಗ್ರಸ್ಥ ಜಾನುವಾರುಗಳಿಗೆ ಉಪಯೋಗಿಸಿದ ಎಲ್ಲ ವಸ್ತುಗಳನ್ನು ಸ್ವಚ್ಛಗೊಳಿಸಬೇಕು.

* ಕೀಟಗಳ ಹಾವಳಿಯಿಂದ ರಕ್ಷಿಸಲು ಜಾನುವಾರು ಕಟ್ಟುವ ಜಾಗದಲ್ಲಿ ಬೇವಿನ ಹೊಗೆ ಹಾಕಬೇಕು; ಕೊಟ್ಟಿಗೆ ಸುತ್ತಮುತ್ತ ಸ್ವಚ್ಛತೆ ಇರಬೇಕು; ರೋಗವಿರುವ ಜಾನುವಾರು ಮೃತಪಟ್ಟರೆ ಆಳವಾದ ಗುಂಡಿ ತೋಡಿ ಹೂಳಬೇಕು

* ಮಾಹಿತಿಗೆ ಮತ್ತು ಚಿಕಿತ್ಸೆಗೆ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಬೇಕು

***
5 ಕಿ.ಮೀ ವ್ಯಾಪ್ತಿಯಲ್ಲಿ ಚಿಕಿತ್ಸೆ...

ಚರ್ಮ ಗಂಟುರೋಗ ಉಲ್ಬಣಿಸಿರುವ ಸ್ಥಳಗಳನ್ನು ಆಯ್ದುಕೊಂಡು ಐದು ಕಿ.ಮೀ. ವ್ಯಾ‍ಪ್ತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಳ್ಳಾರಿ ಪಶುವೈದ್ಯಾಧಿಕಾರಿ ಡಾ. ಕೆ. ಆರ್‌. ಶ್ರೀನಿವಾಸ್‌ ಸ್ಪಷ್ಟಪಡಿಸಿದ್ದಾರೆ.

ಬಳ್ಳಾರಿ ತಾಲ್ಲೂಕಿಗೆ 10,300 ಯೂನಿಟ್‌ ಲಸಿಕೆ ಪೂರೈಕೆಯಾಗಿದೆ. ಇದರಲ್ಲಿ 5,500 ಯೂನಿಟ್‌ ಅನ್ನು ಜಾನುವಾರುಗಳಿಗೆ ನೀಡಲಾಗಿದೆ. ಆಂಧ್ರ ಪ್ರದೇಶದ ಗಡಿ ಭಾಗದಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಲಸಿಕೆ ಹಾಕಲಾಗುತ್ತಿದೆ ಎಂದು ವಿವರಿಸಿದ್ದಾರೆ.

***
ತಾಲ್ಲೂಕುವಾರು ಅಂಕಿಅಂಶ(ಬಳ್ಳಾರಿ ಜಿಲ್ಲೆ)

ತಾಲ್ಲೂಕು;ರಾಸುಗಳ ಸಂಖ್ಯೆ;ಸತ್ತ ರಾಸುಗಳ ಸಂಖ್ಯೆ

ಬಳ್ಳಾರಿ;394;07

ಸಿರುಗುಪ್ಪ;02;01

ಸಂಡೂರು;175;05

ಕಂಪ್ಲಿ;40;00

ಕುರುಗೋಡು;93;02

ಸತ್ತ ಜಾನುವಾರುಗಳಿಗೆ ಪರಿಹಾರ

ಕರು;₹5000

ಆಕಳು;₹25,000

ಎತ್ತು;₹30,000

***
ತಾಲ್ಲೂಕುವಾರು ವಿವರ (ವಿಜಯನಗರ ಜಿಲ್ಲೆ)

ತಾಲ್ಲೂಕು;ಸತ್ತ ಜಾನುವಾರು ಸಂಖ್ಯೆ
ಹೊಸಪೇಟೆ;03
ಹೂವಿನಹಡಗಲಿ;194
ಹಗರಿಬೊಮ್ಮನಹಳ್ಳಿ;39
ಹರಪನಹಳ್ಳಿ;124
ಕೂಡ್ಲಿಗಿ;19
ಕೊಟ್ಟೂರು;14

ಮಾಹಿತಿ: ಪಶು ಸಂಗೋಪನಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT